ADVERTISEMENT

ಭ್ರಷ್ಟಾಚಾರ ಮುಕ್ತ ಚುನಾವಣೆ ಸಾಧ್ಯವೇ?

ಹೆಬ್ಬಾಳ ಕ್ಷೇತ್ರದ ಉಪಚುನಾವಣೆ: ಅಭ್ಯರ್ಥಿಗಳಿಗೆ ಮತದಾರರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸಭಿಕರೊಬ್ಬರನ್ನು ಸಂಘಟಕರು ಸಮಾಧಾನ ಪಡಿಸಿದರು.   -ಪ್ರಜಾವಾಣಿ ಚಿತ್ರ
ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣ ಸ್ವಾಮಿ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಸಭಿಕರೊಬ್ಬರನ್ನು ಸಂಘಟಕರು ಸಮಾಧಾನ ಪಡಿಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಬ್ಬಾಳವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ತಮ್ಮ ಕನಸನ್ನು ಅವರು ಹಂಚಿಕೊಂಡರು. ಭ್ರಷ್ಟಾಚಾರ ಮುಕ್ತ ಚುನಾವಣೆ, ಪಾರದರ್ಶಕ ಆಡಳಿತದ ವಾಗ್ದಾನವನ್ನೂ ನೀಡಿದರು. ಆದರೆ, ಜನರು ಅವರ ಮಾತನ್ನು ನಂಬಲಿಲ್ಲ. ಸುಳ್ಳು ಹೇಳುತ್ತಿದ್ದೀರಿ ಎಂದು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿದರು!

ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿಪ್ಯಾಕ್‌) ಮತ್ತು ಸುಸ್ಥಿರತೆಗಾಗಿ ನಾಗರಿಕರು (ಸಿಐಎಫ್‌ಒಎಸ್‌) ಸಂಘಟನೆಗಳು ಜಂಟಿಯಾಗಿ ಶನಿವಾರ ಸಂಜಯ ನಗರದಲ್ಲಿ ಹಮ್ಮಿಕೊಂಡಿದ್ದ ಹೆಬ್ಬಾಳ  ಕ್ಷೇತ್ರದಲ್ಲಿ ನಡೆಯಲಿರುವ ಉಪ ಚುನಾವಣೆಯ ಅಭ್ಯರ್ಥಿಗಳೊಂದಿಗಿನ ಸಾರ್ವಜನಿಕ ಸಭೆಯಲ್ಲಿ ಈ ಘಟನೆ ನಡೆಯಿತು. ಕ್ಷೇತ್ರದಿಂದ ಸ್ಪರ್ಧಿಸಿರುವ ಒಟ್ಟು 22 ಅಭ್ಯರ್ಥಿಗಳ ಪೈಕಿ 14 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್‌ನ ಸಿ.ಕೆ. ಅಬ್ದುಲ್‌ ರೆಹಮಾನ್‌ ಷರೀಫ್‌, ಬಿಜೆಪಿಯ ವೈ.ಎ. ನಾರಾಯಣ ಸ್ವಾಮಿ ಮತ್ತು ಜೆಡಿಎಸ್‌ನ ಇಸ್ಮಾಯಿಲ್‌ ಷರೀಫ್‌ ನಾನಾ ಸೇರಿದಂತೆ ಸಭೆಯಲ್ಲಿ ಎಲ್ಲ ಅಭ್ಯರ್ಥಿಗಳು ಕ್ಷೇತ್ರದ ಅಭಿವೃದ್ಧಿಗೆ  ತಾವು ರೂಪಿಸಿರುವ ಯೋಜನೆಗಳನ್ನು ವಿವರಿಸಿದರು. ಎಲ್ಲ ಅಭ್ಯರ್ಥಿಗಳ ಭಾಷಣಗಳು  ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆ ಸುಧಾರಣೆ, ಬೀದಿ ದೀಪಗಳ ಸುಧಾರಣೆ, ಕಸ ವಿಲೇವಾರಿ, ಮಹಿಳೆಯರ ಸುರಕ್ಷತೆ, ಸ್ವಚ್ಛ ಸುಂದರ ಹೆಬ್ಬಾಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಸುತ್ತ ಕೇಂದ್ರೀಕೃತವಾಗಿತ್ತು.

ಚಪ್ಪಾಳೆಗಿಟ್ಟಿಸಿದ ಸ್ವತಂತ್ರರು: ಸ್ವತಂತ್ರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮಾಡಿದ ಭಾಷಣ ಪ್ರೇಕ್ಷಕರಿಂದ ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಂಡರು. ಸಭೆಯಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಅಭ್ಯರ್ಥಿ ಪವಿತ್ರಾ ಮಾತನಾಡಿ, ‘ಮಹಿಳೆಯರು ಮುಂದೆ ಬಂದರೆ, ಜನ ನಗುತ್ತಾರೆ. ನಮಗೂ ಸಮಾಜಸೇವೆ ಮಾಡಬೇಕು ಎಂಬ ಆಸೆಯಿದೆ. ಈ ಚುನಾವಣೆ ಅದಕ್ಕೆ ಅವಕಾಶ ಒದಗಿಸಿದೆ. ನೀರು,  ರಸ್ತೆ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ನನ್ನ ಮೊದಲ ಆದ್ಯತೆ’ ಎಂದರು.

ಆಕ್ರೋಶ: ಉತ್ತಮ ಆಡಳಿತ ಮತ್ತು ಚುನಾವಣೆಯಲ್ಲ ಭ್ರಷ್ಟಾಚಾರ ನಿಯಂತ್ರಣಕ್ಕೆ ಏನು ಮಾಡುತ್ತೀರಿ ಎಂದು ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಲು ಎದ್ದು ನಿಂತ ವೈ.ಎಸ್‌. ನಾರಾಯಣ ಸ್ವಾಮಿ ಜನರಿಂದ ತೀವ್ರ ವಿರೋಧ ಎದುರಿಸಬೇಕಾಯಿತು.

ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಸಭಿಕರೊಬ್ಬರು ‘ಸುಳ್ಳು ಹೇಳಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಮಾತಿಗೆ ಇನ್ನೂ ಕೆಲವು ಜನ ಧ್ವನಿಗೂಡಿಸಿದರು. ಸಂಘಟಕರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ‘ಇಲ್ಲಿ ಪಕ್ಷದ ಬಗ್ಗೆ ಮಾತು ಬೇಡ. ಅಭ್ಯರ್ಥಿಗಳ ಬಗ್ಗೆ ಮಾತ್ರ ಸಾಕು’ ಎಂದು ಸ್ಪಷ್ಟಪಡಿಸಿದರು.

ಮಾತು ಮುಂದುವರಿಸಿದ ನಾರಾಯಣ ಸ್ವಾಮಿ, ‘ಈ ಚುನಾವಣೆಯಲ್ಲಿ ನಾನು ಒಂದು ರೂಪಾಯಿಯನ್ನೂ ಯಾರಿಗೂ ಕೊಡುವುದಿಲ್ಲ’ ಎಂದು ಹೇಳಿದಾಗಲೂ ಸಭೆಯಲ್ಲಿ ‘ಸುಳ್ಳು, ಸುಳ್ಳು’ ಎಂಬ ಕೂಗು ಕೇಳಿ ಬಂತು. ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಕಾರ್ಮಿಕ ಮುಖಂಡ ಪಿ.ಕೆ. ವೆಲ್ಲಾದೊರೆ ಅವರು, ‘ಯಾರಾದರೂ ಅಭ್ಯರ್ಥಿಗಳು ದುಡ್ಡುಕೊಟ್ಟರೆ, ಅದನ್ನ ತೆಗೆದುಕೊಂಡು ಅವರ ಮುಖಕ್ಕೆ ಎಸೆಯಿರಿ’ ಎಂದು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.

ಅಭ್ಯರ್ಥಿಗಳಾದ ಕೆ.ಎ. ಮೋಹನ್‌, ಡಾ. ಮಂಜುನಾಥ್‌, ಹುಣಸೂರು ಕೆ. ಚಂದ್ರಶೇಖರ್‌, ಎಸ್‌. ನಾಗೇಶ್‌ , ವಿನಯ್ ಕುಮಾರ್‌ ನಾಯಕ್‌, ಸೈಯದ್‌ ಆಸಿಫ್‌ ಬುಖಾರಿ, ಅಂಜನ್‌ ಕುಮಾರ್‌ ಗೌಡ ಮತ್ತು ಸೈಯದ್‌ ಕ್ವಾಜಾ ವಲಿ ಹೈದ್ರಿ ಸಭೆಯಲ್ಲಿ ಭಾಗವಹಿಸಿದ್ದರು.

***
ಅಭ್ಯರ್ಥಿಗಳು ಕೊಡುವ ₹500 ಗಳಲ್ಲಿ ಎಷ್ಟು ದಿನ ಜೀವನ ನಡೆಸಬಹುದು? ವರ್ಷಾನುಗಟ್ಟಲೆ ನಾವು ಬದುಕಬೇಕು. ಅಭ್ಯರ್ಥಿಗಳು ಚೆಲ್ಲುವ ಹಣಕ್ಕೆ ಆಸೆ ಪಡದೆ ಎಲ್ಲರೂ ಒಗ್ಗಟ್ಟಾಗಿರೋಣ.
-ಪವಿತ್ರಾ,
ಸ್ವತಂತ್ರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.