ADVERTISEMENT

‘ಮಕ್ಕಳು ಲೋಗೊ ಇರುವ ಸಮವಸ್ತ್ರದಲ್ಲೇ ಬರಬೇಕು’

ಪೋಷಕರಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಯವರ ಸೂಚನೆ

ಎನ್.ನವೀನ್ ಕುಮಾರ್
Published 22 ಮೇ 2017, 19:49 IST
Last Updated 22 ಮೇ 2017, 19:49 IST
‘ಮಕ್ಕಳು ಲೋಗೊ ಇರುವ ಸಮವಸ್ತ್ರದಲ್ಲೇ ಬರಬೇಕು’
‘ಮಕ್ಕಳು ಲೋಗೊ ಇರುವ ಸಮವಸ್ತ್ರದಲ್ಲೇ ಬರಬೇಕು’   
ಬೆಂಗಳೂರು: ‘ದೆಹಲಿಯಲ್ಲಿರುವ ಪುಸ್ತಕದ ಅಂಗಡಿಯಿಂದ ಪಠ್ಯಪುಸ್ತಕ ತರಿಸಿಕೊಳ್ಳಿ. ಲೋಗೊ ಇರುವ ಸಮವಸ್ತ್ರ ಧರಿಸಿಯೇ ಮಕ್ಕಳು ಶಾಲೆಗೆ ಬರಬೇಕು.’
 
ಕೆಲ ಖಾಸಗಿ ಶಾಲಾ ಆಡಳಿತ ಮಂಡಳಿಯವರು ಮಕ್ಕಳ ಪೋಷಕರಿಗೆ ನೀಡಿರುವ ಸೂಚನೆ ಇದು.
 
ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಮಾರಾಟ ಮಾಡದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ, ಕೆಲ ಶಾಲೆಗಳ ಆಡಳಿತ ಮಂಡಳಿಯವರು ಬೇರೆಯ ಹಾದಿ ಹಿಡಿದಿದ್ದಾರೆ.
 
‘ಶಾಲೆಯ ಸಮವಸ್ತ್ರವನ್ನು ಹೊರಗೆ ಖರೀದಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಶಾಲೆಯ ಲೋಗೊ ಸಮವಸ್ತ್ರದಲ್ಲಿ ಇರಬೇಕು. ಲೋಗೊ ಇಲ್ಲದ ಸಮವಸ್ತ್ರದಲ್ಲಿ ಬರುವ ಮಕ್ಕಳನ್ನು ತರಗತಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಶಾಲೆಯವರು ಹೇಳುತ್ತಿದ್ದಾರೆ. ಶಾಲೆಯ ಲೋಗೊ ನೀಡಲು ಅವರು ಸಿದ್ಧವಿಲ್ಲ’ ಎಂದು ಆರ್‌.ಟಿ.ಇ ಕಾರ್ಯಪಡೆಯ ರಾಜ್ಯ ಸಂಚಾಲಕ ನಾಗಸಿಂಹ ಜಿ. ರಾವ್ ದೂರಿದರು.
 
ಪಠ್ಯಪುಸ್ತಕದ ಸಮಸ್ಯೆ: ‘ಪಠ್ಯಪುಸ್ತಕಗಳನ್ನು ಎಲ್ಲಿ ಬೇಕಾದರೂ ಖರೀದಿಸಬಹುದು. ಆದರೆ, ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಪುಸ್ತಕಗಳನ್ನು ಮಾರುವವರು ಶಾಲೆಗಳೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದಾರೆ. ಈಗ ಅವರ ವ್ಯವಹಾರ ನಿಲ್ಲಲಿದೆ. ಆದರೆ, ಪೋಷಕರು ಪುಸ್ತಕಗಳನ್ನು ಎಲ್ಲಿ ಕೊಳ್ಳಬೇಕು’ ಎಂದು ಪ್ರಶ್ನಿಸಿದರು.
 
‘ಪ್ರತಿಯೊಂದು ಶಾಲೆಗೂ ಪಠ್ಯಕ್ರಮ ಬೇರೆ ಇದೆ. ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಪುಸ್ತಕಗಳ ಪ್ರಕಾಶಕರು ದೆಹಲಿಯಲ್ಲಿ ಇದ್ದಾರೆ. ಅವರ ಬಳಿಯೇ ಪಠ್ಯಪುಸ್ತಕ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪೋಷಕರು ತೊಂದರೆ ಅನುಭವಿಸುವಂತಾಗಿದೆ’ ಎಂದರು.
 
‘ಶಾಲಾ ಆಡಳಿತ ಮಂಡಳಿಯವರು ದೆಹಲಿಯ ಪುಸ್ತಕ ಅಂಗಡಿಗಳ ವಿಳಾಸ ನೀಡಿ, ಅಲ್ಲಿಂದಲೇ ಪಠ್ಯಪುಸ್ತಕ ಖರೀದಿಸುವಂತೆ ಪೋಷಕರಿಗೆ ಸೂಚಿಸುತ್ತಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಲಾಗಿದೆ’ ಎಂದು ತಿಳಿಸಿದರು.
 
‘ಕ್ಷೇತ್ರ ಶಿಕ್ಷಣಾಧಿಕಾರಿಗಳ  ಕಚೇರಿಗಳಲ್ಲಿ ಪಠ್ಯಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇದರಿಂದ ಪೋಷಕರು ಹಾಗೂ ಮಕ್ಕಳಿಗೆ ಅನುಕೂಲವಾಗುತ್ತದೆ’ ಎಂದು ಒತ್ತಾಯಿಸಿದರು.
****
‘ಸುತ್ತೋಲೆಯಲ್ಲಿನ ದೋಷ ಪರಿಹರಿಸಿ’
‘ಶಾಲೆಯ ಆವರಣದ ಒಳಗೆ ಪುಸ್ತಕ ಮತ್ತು ಸಮವಸ್ತ್ರಗಳನ್ನು ಮಾರಾಟ ಮಾಡದಂತೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಆದೇಶ ಹೊರಡಿಸಿದೆ.

ಇದಕ್ಕೆ ಪೂರಕವಾಗಿ ರಾಜ್ಯ ಶಿಕ್ಷಣ ಇಲಾಖೆಯು, ಖಾಸಗಿ ಶಾಲೆಗಳು ಸಮವಸ್ತ್ರ ಹಾಗೂ ಪಠ್ಯಪುಸ್ತಕ ಮಾರಾಟ ಮಾಡದಂತೆ ಮೇ 2ರಂದು ಸುತ್ತೋಲೆ ಹೊರಡಿಸಿದೆ. ಆದರೆ, ಆರ್‌.ಟಿ.ಇ ಅಡಿ ದಾಖಲಾಗುವ ಮಕ್ಕಳು

ಸಹ ಸಮವಸ್ತ್ರ, ಪಠ್ಯಪುಸ್ತಕಗಳನ್ನು ಹೊರಗೆ ತೆಗೆದುಕೊಳ್ಳಬೇಕು ಎಂಬ ಅಂಶ ಸೇರಿಸಲಾಗಿದೆ. ಇದು ಆರ್‌.ಟಿ.ಇ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ನಾಗಸಿಂಹ ದೂರಿದರು.

‘ಆರ್.ಟಿ.ಇ– 2009ರ ಕಾಯ್ದೆ ಮತ್ತು ರಾಜ್ಯ ಸರ್ಕಾರದ ನಿಯಮಗಳನ್ವಯ ಶಿಕ್ಷಣ ಇಲಾಖೆಯ ಆಯುಕ್ತರು 2015 ಮೇ 25 ಹಾಗೂ 2016ರ ಮೇ 19ರಂದು ಹೊರಡಿಸಿರುವ ಸುತ್ತೋಲೆಗಳ ಪ್ರಕಾರ, ಆರ್.ಟಿ.ಇ. ಅಡಿ ದಾಖಲಾದ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಬೋಧನಾ ಸಾಮಗ್ರಿ, ಕಲಿಕಾ ಸಾಮಗ್ರಿಗಳನ್ನು ಶಾಲೆಯವರೇ ಉಚಿತವಾಗಿ ನೀಡಬೇಕು’ ಎಂದರು.

‘ಆರ್.ಟಿ.ಇ ಅಡಿ ದಾಖಲಾಗಿರುವ ಮಕ್ಕಳಿಗೆ ಸರ್ಕಾರವೇ ಪಠ್ಯಪುಸ್ತಕ ನೀಡುತ್ತದೆ ಎಂದೂ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.  ಆದರೆ, ಮೇ 2ರಂದು ಹೊರಡಿಸಿರುವ ಸುತ್ತೋಲೆ ಈ ಎರಡೂ ಸುತ್ತೋಲೆಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅದರಲ್ಲಿರುವ ದೋಷವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.