ADVERTISEMENT

ಮಗಳ ಕೊಂದು ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:45 IST
Last Updated 18 ನವೆಂಬರ್ 2017, 19:45 IST

ಬೆಂಗಳೂರು: ಕೋಣನಕುಂಟೆ ಸಮೀಪದ ಚುಂಚಘಟ್ಟದಲ್ಲಿ ಶೀಲು (27) ಎಂಬುವರು ಶುಕ್ರವಾರ ರಾತ್ರಿ ತಮ್ಮ ನಾಲ್ಕು ವರ್ಷದ ಮಗಳು ಹಂಶಿಕಾಳನ್ನು ಕತ್ತು ಹಿಸುಕಿ ಕೊಂದು, ನಂತರ ತಾವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರಪ್ರದೇಶದ ಶೀಲು, ಮೊದಲ ಪತಿಯಿಂದ ಪ್ರತ್ಯೇಕವಾಗಿ ಮಗಳ ಜತೆ ತವರಿನಲ್ಲಿ ನೆಲೆಸಿದ್ದರು. ನಗರದ ಚುಂಚಘಟ್ಟದಲ್ಲಿ ಪಾನೀಪೂರಿ ಅಂಗಡಿ ಇಟ್ಟುಕೊಂಡಿರುವ ಸಂಜಯ್‌ದಾಸ್ ಗುಪ್ತಾ ಎಂಬುವರು, ಎಂಟು ತಿಂಗಳ ಹಿಂದೆ ಶೀಲು ಅವರನ್ನು 2ನೇ ಮದುವೆಯಾಗಿದ್ದರು.

ವಿವಾಹದ ನಂತರವೂ ಉತ್ತರಪ್ರದೇಶದಲ್ಲೇ ಇದ್ದ ಶೀಲು, ಮಗಳನ್ನು ಕರೆದುಕೊಂಡು ನಾಲ್ಕು ದಿನಗಳ ಹಿಂದಷ್ಟೇ ಗಂಡನ ಮನೆಗೆ ಬಂದಿದ್ದರು. ’ವ್ಯಾಪಾರ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಒಳಗಿನಿಂದ ಚಿಲಕ ಹಾಕಿತ್ತು. ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಇರಲಿಲ್ಲ. ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋದಾಗ ಪತ್ನಿ–ಮಗಳು ಮೃತಪಟ್ಟಿದ್ದರು’ ಎಂದು ಸಂಜಯ್ ಹೇಳಿಕೆ ಕೊಟ್ಟಿರುವುದಾಗಿ ಕೋಣನಕುಂಟೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ದಂಪತಿ ನಡುವೆ ಅನ್ಯೋನ್ಯತೆ ಇರಲಿಲ್ಲ. ನಿತ್ಯವೂ ಪರಸ್ಪರ ಜಗಳವಾಡುತ್ತಿದ್ದರು. ನಾವೇ ಬುದ್ಧಿ ಹೇಳಿ ಸಮಾಧಾನಪಡಿಸುತ್ತಿದ್ದೆವು’ ಎಂದು ನೆರೆಹೊರೆಯವರು ಹೇಳಿದ್ದಾರೆ. ಸದ್ಯ ಕೊಲೆ ಹಾಗೂ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮೃತರ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಅವರ ದೂರು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆಯಾದ ಮೊದಲ ಪತ್ನಿ: ಸಂಜಯ್ ಕೂಡ ಉತ್ತರಪ್ರದೇಶದವರು. ಮೊದಲ ಪತ್ನಿ ಊರ್ಮಿಳಾದೇವಿ ಹಾಗೂ ತಮ್ಮ ಇಬ್ಬರು ಬುದ್ಧಿಮಾಂದ್ಯ ಮಕ್ಕಳ ಜತೆ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅವರು, ಚುಂಚಘಟ್ಟದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು.

ಸಂಜಯ್ ತಮ್ಮ ಅಂಗಡಿಯಲ್ಲಿ ಅಜಾದ್ ಅಲಿ ಎಂಬಾತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಮಾಲೀಕರು ₹ 7,500 ಸಂಬಳ ಬಾಕಿ ಉಳಿಸಿಕೊಂಡಿದ್ದರಿಂದ ಕೆಲಸ ತೊರೆದಿದ್ದ ಆತ, ತಾನೇ ಪಾನೀಪೂರಿ ವ್ಯಾಪಾರ ಪ್ರಾರಂಭಿಸಿದ್ದ. ಆ ನಂತರ ಕೂಡ ಬಾಕಿ ಹಣ ನೀಡುವಂತೆ ಪ್ರತಿದಿನ ಮನೆ ಹತ್ತಿರ ಹೋಗಿ ಗಲಾಟೆ ಮಾಡಿ ಬರುತ್ತಿದ್ದ.

2016ರ ಆ.14ರ ಸಂಜೆ ಸ್ನೇಹಿತ ಘನಶ್ಯಾಮ್‌ನನ್ನು ಕರೆದುಕೊಂಡು ಆತ ಸಂಜಯ್ ಅವರ ಮನೆ ಹತ್ತಿರ ಹೋಗಿದ್ದ. ಆಗ ಊರ್ಮಿಳಾದೇವಿ ಹಾಗೂ ಮಕ್ಕಳು ಮಾತ್ರ ಮನೆಯಲ್ಲಿದ್ದರು.

ಈ ವೇಳೆ ತಲೆಯನ್ನು ಕಲ್ಲಿನಿಂದ ಜಜ್ಜಿ ಊರ್ಮಿಳಾದೇವಿ ಅವರನ್ನು ಕೊಂದಿದ್ದ ಆರೋಪಿಗಳು, ಬಳಿಕ ಅವರ ಮೇಲೆ ಅತ್ಯಾಚಾರ ಎಸಗಿದ್ದರು. ಹತ್ಯೆ ನಡೆದ ನಾಲ್ಕೇ ದಿನಗಳಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಅವರಿಬ್ಬರನ್ನೂ ಬಂಧಿಸಿದ್ದರು.

ಪತ್ನಿ ಸಾವಿನ ಬಳಿಕ ಖಿನ್ನತೆಗೆ ಒಳಗಾಗಿದ್ದ ಸಂಜಯ್, ಮಕ್ಕಳಿಬ್ಬರನ್ನೂ ಪೋಷಕರ ಬಳಿ ಬಿಟ್ಟು ಬಂದಿದ್ದರು. ನಂತರ ಸಂಬಂಧಿಕರ ಒತ್ತಾಯಕ್ಕೆ ಮಣಿದು ಶೀಲು ಅವರನ್ನು ಎರಡನೇ ಮದುವೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

**

ಶೀಲು ಅವರೇ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಯಾವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡರು ಎಂಬುದಷ್ಟೇ ತಿಳಿಯಬೇಕಿದೆ.
–ಕೋಣನಕುಂಟೆ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.