ADVERTISEMENT

ಮತ್ತೆ ಮಳೆ ಹುಯ್ಯುತಿದೆ; ಎಲ್ಲ ಮರೆತುಹೋಗಿದೆ!

ತುಂಬಿದ ರಾಜಕಾಲುವೆ, ಒತ್ತುವರಿಯಾದ ಕೆರೆ, ಎಲ್ಲೆಡೆ ಪ್ಲಾಸ್ಟಿಕ್‌ ರಾಜ್ಯಭಾರ, ತಪ್ಪಿದ ನೀರಿನ ಜಾಡು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 20:19 IST
Last Updated 26 ಏಪ್ರಿಲ್ 2015, 20:19 IST
ನಗರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಮಿನ್ಸ್ಕ್‌ ಚೌಕದ ಬಳಿ ಬೃಹತ್‌ ಮರವೊಂದು ಬುಡಸಮೇತ  ನೆಲಕ್ಕುರುಳಿತ್ತು
ನಗರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಮಿನ್ಸ್ಕ್‌ ಚೌಕದ ಬಳಿ ಬೃಹತ್‌ ಮರವೊಂದು ಬುಡಸಮೇತ ನೆಲಕ್ಕುರುಳಿತ್ತು   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಜಲಮಂಡಳಿ ಮಳೆಗಾಲದ ಪರಿಸ್ಥಿತಿಯನ್ನು ಎದುರಿಸಲು ಮುಂಚಿತವಾಗಿಯೇ ಸೂಕ್ತ ಸಿದ್ಧತೆ ಮಾಡಿಕೊಳ್ಳದ ಕಾರಣ ಮಳೆ ಆರ್ಭಟ ಹೆಚ್ಚಿರುವ ಈ ದಿನಗಳಲ್ಲಿ ನಗರದ ಜನ ಪಡಿಪಾಟಲು ಅನುಭವಿಸಬೇಕಿದೆ.

ಪ್ರತಿವರ್ಷವೂ ಎದುರಾಗುವ ಗೋಳು ಇದಾಗಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಕೆಲಸ ಆಗುತ್ತಿಲ್ಲ ಎಂದು ನಗರ ಯೋಜನಾತಜ್ಞರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬೇಸಿಗೆ ಶುರುವಾದೊಡನೆ ಮಳೆಗಾ­ಲದ ಸಿದ್ಧತೆ ಮಾಡಿಕೊಳ್ಳುವುದು ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಇಡುವ ಮೊದಲ ಹೆಜ್ಜೆ. ಚರಂಡಿಗಳ ಹೂಳು ತೆಗೆಯುವುದು ಮುಖ್ಯವಾಗಿ ಆಗಬೇಕಾದ ಕೆಲಸ. ಮಳೆಗಾಲ ಹೊಸ್ತಿಲಲ್ಲಿದ್ದರೂ ಬಿಬಿಎಂಪಿ ಆ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂ­ಡಿಲ್ಲ ಎಂದು ಅವರು ಲೋಪಗಳತ್ತ ಬೊಟ್ಟು ಮಾಡಿ ತೋರುತ್ತಾರೆ.

ದಶಕಗಳ ಹಿಂದೆ ಬೆಂಗಳೂರು ನಗರ ಮಳೆ ನೀರನ್ನು ನಿರ್ವಹಣೆ ಮಾಡಲು ನಾಲ್ಕು ಅಚ್ಚುಕಟ್ಟು ಪ್ರದೇಶಗಳನ್ನು ಹೊಂ­ದಿತ್ತು. ಅವುಗಳೇ ವೃಷಭಾವತಿ, ಚಳ್ಳಘಟ್ಟ, ಕೋರಮಂಗಲ ಹಾಗೂ ಹೆಬ್ಬಾಳ ಕಣಿವೆ ಪ್ರದೇಶಗಳು. ಆಗಿನ ನಗರ ವ್ಯವಸ್ಥೆಗೆ ಈ ಕಣಿವೆ ಪ್ರದೇಶಗಳೇ ಸಾಕಿದ್ದವು. ಆದರೆ, ನಗರ ಬೆಳೆದಂತೆ ಅಚ್ಚು­ಕಟ್ಟು ಪ್ರದೇಶದ ‘ಒದ್ದೆ ನೆಲ’­ಗಳೆಲ್ಲ ಕಾಣೆಯಾದ ಮೇಲೆ ನೀರಿನ ಜಾಡು ಪೂರ್ಣವಾಗಿ ತಪ್ಪಿಹೋಗಿದೆ.

ಮಳೆನೀರು ಸಾಗಿ­ಸುವ ಕಾಲುವೆಗಳು, ಕೊಳಚೆ­ ಸಾಗಿಸುವ ಒಳಚರಂಡಿಗಳು, ರಸ್ತೆಬದಿ ಪುಟ್ಟ ಕಾಲುವೆಗಳು ತಮ್ಮ ಮೇಲೆ ಬಿದ್ದ ಅಧಿಕ ಒತ್ತಡವನ್ನು ನಿಭಾ­ಯಿಸಲು ಸಾಧ್ಯವಾಗದೆ ಹೆಚ್ಚುವರಿ ನೀರ­ನ್ನೆಲ್ಲ ರಸ್ತೆ ಕಡೆಗೆ ತಳ್ಳಲು ಆರಂಭಿಸಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ.
ನಗರದ ಚರಂಡಿ ವ್ಯವಸ್ಥೆಯು ಹೆಚ್ಚೆಂದರೆ ಗಂಟೆಗೆ 45 ಮಿ.ಮೀ. ಮಳೆ ಸುರಿವ ಒತ್ತಡವನ್ನು ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ, ಗಂಟೆಗೆ 100 ಮಿ.ಮೀ ಪ್ರಮಾಣ­ದಲ್ಲಿ ಮಳೆ ಸುರಿದ ಇತಿಹಾಸ ಈ ಊರಿಗಿದೆ.

ಮಳೆಗಾಲದಲ್ಲಿ ಹೂಳು ಎತ್ತಿದರೆ ಅದೇ ಮಳೆ ನೀರಿನಲ್ಲಿ ಆ ಹೂಳು ಮತ್ತೆ ಚರಂಡಿಯನ್ನು ಸೇರುತ್ತದೆ. ಹೀಗಾಗಿ ಬೇಸಿಗೆಯಲ್ಲೇ ಅವುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಗರ ಯೋಜನೆ ತಜ್ಞ ಟಿ.ವಿ. ರಾಮಚಂದ್ರ.

ಕೆರೆ ಹಾಗೂ ರಾಜಕಾಲುವೆಗಳ ಎಲ್ಲ ಒತ್ತುವರಿಯನ್ನೂ ತೆರವುಗೊಳಿಸಬೇಕು. ಮಳೆ ನೀರಿನ ಕಾಲುವೆ ಮತ್ತು ಕೊಳಚೆ ಚರಂಡಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಒಂದರ ನೀರು ಮತ್ತೊಂದನ್ನು ಸೇರದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುತ್ತಾರೆ.

ಯಾವುದೇ ಪ್ರದೇಶದಲ್ಲಿ ಬಿದ್ದ ಮಳೆ ನೀರು ಅಡೆತಡೆ ಇಲ್ಲದಂತೆ ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ನೈಸರ್ಗಿಕ ಕಣಿವೆ ಪ್ರದೇಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರವಾಹ ಪ್ರದೇಶಗಳ ಕೊಳೆಗೇರಿಗಳನ್ನು ಸ್ಥಳಾಂತರ ಮಾಡಬೇಕು ಎನ್ನುತ್ತಾರೆ.

ಮಳೆ ನೀರು ಕಾಲುವೆಗಳು 5.20 ಮೀಟರ್‌ ಅಗಲ ಮತ್ತು 2.40 ಮೀಟರ್‌ ಎತ್ತರ ಇರುವಂತೆ ಮರು ವಿನ್ಯಾಸ ಮಾಡಬೇಕು. ಬೃಹತ್‌ ನೀರುಗಾಲುವೆಗಳ ಒತ್ತಡ ಕಡಿಮೆ ಮಾಡಲು ಪರ್ಯಾಯ ಕಾಲುವೆಗಳ ನಿರ್ಮಾಣ ಮಾಡಬೇಕು. ಕೆರೆ ಸುತ್ತಲಿನ 500 ಮೀ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಬೇಕು ಎಂದು ರಾಮಚಂದ್ರ ವಿವರಿಸುತ್ತಾರೆ.

ತ್ಯಾಜ್ಯ ನಿರ್ವಹಣೆಯಲ್ಲಿ ಹೈಕೋರ್ಟ್‌ ಎಷ್ಟೆಲ್ಲ ಸೂಚನೆಗಳನ್ನು ನೀಡಿದರೂ ಗುತ್ತಿಗೆದಾರರಿಂದ ಅವು ಸಮರ್ಪಕವಾಗಿ ಪಾಲನೆ ಆಗುತ್ತಿಲ್ಲ. ಹೀಗಾಗಿ ಪ್ಲಾಸ್ಟಿಕ್‌ ಸೇರಿದಂತೆ ಘನ­ತ್ಯಾಜ್ಯ ಚರಂಡಿಗಳಲ್ಲಿ ತುಂಬಿಕೊಂಡಿದ್ದು, ನೀರಿನ ಹರಿವಿಗೆ ಅಡ್ಡಿ ಮಾಡುತ್ತಿದೆ. ರಾಜಕಾಲುವೆಗಳು ಮತ್ತು ಕೆರೆಗಳ ಒತ್ತುವರಿಯಿಂದ ನೀರಿನ ನೈಸರ್ಗಿಕ ಜಾಡು ತಪ್ಪಿಹೋಗಿದ್ದು, ಸಿಕ್ಕ–ಸಿಕ್ಕಲ್ಲಿ ನುಗ್ಗುವಂತಾಗಿದೆ ಎಂದು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಮುಖ್ಯಸ್ಥರು ದೂರುತ್ತಾರೆ.

ಪ್ರವಾಹ ಎದುರಿಸುವ ಪ್ರದೇಶಗಳು
ನಗರದ ಮಾರುಕಟ್ಟೆ ಪ್ರದೇಶ, ಹೊಸೂರು ರಸ್ತೆ, ಸುಲ್ತಾನ್ ಪಾಳ್ಯ ಮುಖ್ಯರಸ್ತೆ, ಜಯನಗರ 3ನೇ ಬ್ಲಾಕ್ ಎಲ್ಐಸಿ ಕಾಲೊನಿ, ಬೈರಸಂದ್ರ ಟ್ಯಾಂಕ್ ಹಿಂಭಾಗದ ಕೃಷ್ಣಪ್ಪ ಗಾರ್ಡನ್, ವಿಲ್ಸನ್ ಗಾರ್ಡನ್ ಪ್ರದೇಶ (ಬನ್ನೇರುಘಟ್ಟ ರಸ್ತೆವರೆಗೆ), ಅರೆಕೆಂಪನಹಳ್ಳಿ ಪ್ರದೇಶ, ಬಿಸ್ಮಿಲ್ಲಾನಗರ, ಪಿಳ್ಳಪ್ಪ ಗಾರ್ಡನ್‌, ಈಜಿಪುರ, ಕೋರಮಂಗಲ ಕೊಳೆಗೇರಿ, ಸಂಪಂಗಿರಾಮನಗರ, ವಿಪ್ರೊ ಜಂಕ್ಷನ್‌.

ಬೃಂದಾವನನಗರ, ಮತ್ತಿಕೆರೆ ಕೆಇಬಿ ಕಾಂಪೌಂಡ್‌, ಆನಂದನಗರ, ಮಿಲ್ಲರ್‌ ಟ್ಯಾಂಕ್‌, ಚಿನ್ನಪ್ಪ ಗಾರ್ಡನ್‌, ಮುನಿರೆಡ್ಡಿ ಪಾಳ್ಯ (ಶಿವಾಜಿನಗರ), ಜೋಗುಪಾಳ್ಯ, ಕೆ.ಆರ್‌. ಗಾರ್ಡನ್‌, ಗುಬ್ಬಣ್ಣ ಲೇಔಟ್‌, ಶಂಕರಪ್ಪ ಗಾರ್ಡನ್‌ (ಗೋಪಾಲಪುರ), ಬಾಪೂಜಿನಗರ, ಮಿನರ್ವ ವೃತ್ತ, ಕಾಮಾಕ್ಷಿಪಾಳ್ಯ ಕೊಳೆಗೇರಿ, ಬಿನ್ನಿ ಮಿಲ್‌ ಕೆರೆ ಪ್ರದೇಶ, ಮಾರ್ಕಂಡೇಯನಗರ, ಸಂಜಯ್‌ ಗಾಂಧಿ ಕೊಳೆಗೇರಿ, ರುದ್ರಪ್ಪ ಗಾರ್ಡನ್‌ ಮತ್ತು ಬಿಬಿಎಂಪಿ ಸೇರ್ಪಡೆಯಾದ 110 ಹಳ್ಳಿಗಳು.

ಕುಸಿದ ಒದ್ದೆನೆಲ ಪ್ರದೇಶ
1970ರ ದಶಕ­ದಲ್ಲಿ 2,324 ಹೆಕ್ಟೇರ್‌ ಇದ್ದ ಕೆರೆ ಪ್ರದೇಶ, ಈಗ 800 ಹೆಕ್ಟೇರ್‌ಗೆ ಕುಸಿ­ದಿದೆ. ನಗರದ ಶೇ 1.3ರಷ್ಟು ಭೂಭಾಗ­ದಲ್ಲಿ ಮಾತ್ರ ಜಲ ಪ್ರದೇಶ ಇದ್ದು, ಆ ನೀರೂ ಕಲುಷಿತ­ವಾಗಿದೆ. ನಗರೀಕರ­ಣದ ದಾಳಿಯಲ್ಲಿ ಕೆರೆಗಳ ಸರಪಳಿಯೇ ತುಂಡರಿಸಿ ಬಿದ್ದಿದೆ. ಮಳೆನೀರು ಒಯ್ಯುತ್ತಿದ್ದ ರಾಜಕಾಲು­ವೆ­ಗಳೆಲ್ಲ ಈಗ ಚರಂಡಿಗಳಾಗಿ ಪರಿ­ವ­ರ್ತನೆ­ಯಾಗಿದ್ದು, ಪರಿಶುದ್ಧ ನೀರೆಲ್ಲ ಕೊಳಚೆಯಾಗುತ್ತಿದೆ. ಮಳೆ ನೀರಿನ ಕಾಲು­­ವೆಗಳಿಗೂ ಕೊಳಚೆ ಸಾಗಿಸುವ ಚರಂಡಿಗಳಿಗೂ ವ್ಯತ್ಯಾಸವೇ ಅಳಿಸಿ­ಹೋಗಿದ್ದು, ಎರಡೂ ನೀರನ್ನು ಒಟ್ಟಾಗಿ ಸಾಗಿಸುತ್ತಿವೆ. ಕೆರೆಗಳ ಕಣ್ಮರೆಗೆ ಈ ಅವ್ಯವಸ್ಥೆ ಕೊಡುಗೆ ಹಿರಿದಾಗಿದೆ ಎಂದು ನಗರ ಯೋಜನಾ ತಜ್ಞರು ದೂರುತ್ತಾರೆ.

ಅಂಕಿ ಅಂಶಗಳು
13 ಸಾವಿರ ಕಿ.ಮೀ ನಗರದಲ್ಲಿರುವ ರಸ್ತೆಜಾಲ, 970 ಮಿ.ಮೀ. ವಾರ್ಷಿಕ ಸರಾಸರಿ ಮಳೆ ಪ್ರಮಾಣ, 820 ಕಿ.ಮೀ. ನಗರದಲ್ಲಿರುವ ರಾಜಕಾಲುವೆ ಉದ್ದ, 59.8 ವಾರ್ಷಿಕ ಸರಾಸರಿ ಮಳೆ ದಿನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT