ADVERTISEMENT

ಮದುವೆ ಮಂಟಪದಲ್ಲಿ ಜಲಜಾಗೃತಿ!

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 23 ಮೇ 2015, 20:16 IST
Last Updated 23 ಮೇ 2015, 20:16 IST

ದಾವಣಗೆರೆ: ನೀರಿನ ಸಂಗ್ರಹಣೆ ಮತ್ತು ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಇಲ್ಲೊಂದು ಜೋಡಿಗೆ ತಮ್ಮ ಮದುವೆಯೇ ವೇದಿಕೆ ಆಗಿದೆ.

ಇದೇ 27ರಂದು ಸಂತೆಬೆನ್ನೂರಿನ (ಚನ್ನಗಿರಿ ತಾಲ್ಲೂಕು) ನಂಜುಂಡೇಶ್ವರ ಸಮುದಾಯ ಭವನದಲ್ಲಿ ನಡೆಯಲಿರುವ ತಮ್ಮ ಮಗನ ಮದುವೆ ವೇಳೆ ಜಲ ಸಂಗ್ರಹಣೆ, ಮರುಪೂರಣಕ್ಕೆ ಸಂಬಂಧಿಸಿದ ಗೋಷ್ಠಿ, ವಿಚಾರಸಂಕಿರಣ ನಡೆಸಲು ದಾವಣಗೆರೆ ತಾಲ್ಲೂಕಿನ ಹೊನ್ನನಾಯಕಹಳ್ಳಿಯ ರೈತ ಆನಂದಪ್ಪ  ಮುಂದಾಗಿದ್ದಾರೆ.

ಅವರ ಉತ್ಸಾಹಕ್ಕೆ ಚಿತ್ರದುರ್ಗದ ಅಂತರ್ಜಲ, ಮಳೆ ನೀರು ಸಂಗ್ರಹಣೆ ತಜ್ಞ ಡಾ.ಎನ್‌.ಜೆ.ದೇವರಾಜ ರೆಡ್ಡಿ ಬೆಂಬಲವಾಗಿ ನಿಂತಿದ್ದಾರೆ.
ಎಚ್‌.ಆರ್‌.ಮೀನಾಕ್ಷಮ್ಮ– ಆನಂದಪ್ಪ ದಂಪತಿಯ ಪುತ್ರ ಎಚ್‌.ಎ.ಕಲ್ಲೇಶ್, ಚನ್ನಗಿರಿ ತಾಲ್ಲೂಕು ಕೊರಟಿಕೆರೆಯ ರತ್ನಮ್ಮ– ಸುರೇಶಪ್ಪ ದಂಪತಿ ಪುತ್ರಿ ಶಶಿಕಲಾ ಅವರನ್ನು ಅಂದು ಬೆಳಿಗ್ಗೆ 9 ಗಂಟೆಗೆ ವಿವಾಹವಾಗಲಿದ್ದಾರೆ. ಈ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಣೆ, ಕೊಳವೆಬಾವಿಗೆ ಜಲ ಮರುಪೂರಣ ಬಗ್ಗೆ ಪ್ರಾತ್ಯಕ್ಷಿಕೆ, ವಿಡಿಯೊ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ.

ಬರುವ ಅತಿಥಿಗಳಿಗೆ ಮಳೆ ನೀರು ಸಂಗ್ರಹದ ಬಗ್ಗೆ ಬರೆದಿರುವ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.