ADVERTISEMENT

ಮನೆಯೊಳಗೂ ಪ್ರವೇಶಿಸಿದ ಫ್ಯಾಸಿಸಂ

ಅನಂತಮೂರ್ತಿ ನೆನಪಿನ ಸಂವಾದಗೋಷ್ಠಿಯಲ್ಲಿ ರಾಜೇಂದ್ರ ಚೆನ್ನಿ ಕಳವಳ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2016, 19:44 IST
Last Updated 21 ಡಿಸೆಂಬರ್ 2016, 19:44 IST
ರಾಜೇಂದ್ರ ಚೆನ್ನಿ ಅವರಿಗೆ ‘ಭೀಷ್ಮ ಪ್ರಜ್ಞೆ’ ಕೃತಿಯ ಪ್ರತಿಯನ್ನು ಎನ್‌.ಎ.ಎಂ.ಇಸ್ಮಾಯಿಲ್‌ ನೀಡಿದರು.  ಎಸ್ತರ್‌ ಅನಂತಮೂರ್ತಿ, ಎಚ್‌.ಎಸ್‌. ವೆಂಕಟೇಶಮೂರ್ತಿ ಚಿತ್ರದಲ್ಲಿದ್ದಾರೆ   –ಪ್ರಜಾವಾಣಿ ಚಿತ್ರ
ರಾಜೇಂದ್ರ ಚೆನ್ನಿ ಅವರಿಗೆ ‘ಭೀಷ್ಮ ಪ್ರಜ್ಞೆ’ ಕೃತಿಯ ಪ್ರತಿಯನ್ನು ಎನ್‌.ಎ.ಎಂ.ಇಸ್ಮಾಯಿಲ್‌ ನೀಡಿದರು. ಎಸ್ತರ್‌ ಅನಂತಮೂರ್ತಿ, ಎಚ್‌.ಎಸ್‌. ವೆಂಕಟೇಶಮೂರ್ತಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಫ್ಯಾಸಿಸಂ ಈಗ ನಮ್ಮ ಎದುರಿಗೆ ಇದೆ. ಅದು ನಮ್ಮ ಮನೆಯೊಳಗೂ ಪ್ರವೇಶಿಸಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

‘ಅಭಿನವ ಪ್ರಕಾಶನ’ದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬುಧವಾರ ನಡೆದ ‘ಯು.ಆರ್‌. ಅನಂತಮೂರ್ತಿ ನೆನಪಿನಲ್ಲಿ ಸಂವಾದಗೋಷ್ಠಿ’ಯಲ್ಲಿ ‘ಸಂಶೋಧನೆ ಹೊಸ ಸಾಧ್ಯತೆಗಳು ಮತ್ತು ಸವಾಲುಗಳು’ ಕುರಿತು ಮಾತನಾಡಿದರು.

‘ಅದನ್ನು ಆಚೆಗೆ ಇಡಲು ಸಾಧ್ಯವಿಲ್ಲ.  ನಾವು ಅನಿವಾರ್ಯದ ಸ್ಥಿತಿಗೆ ತಲುಪಿದ್ದೇವೆ. ಭವಿಷ್ಯದಲ್ಲಿ ಅದೇ ಪ್ರಮಾಣದಲ್ಲಿ ಹಿಂಸೆ ತರಬಹುದಾದ ಫ್ಯಾಸಿಸಂ ರಾಜಕೀಯವಾಗಿ, ಕಾಮನ್‌ಸೆನ್ಸ್‌ ಆಗಿ, ಸ್ವೀಕಾರಯೋಗ್ಯವಾಗಿ ನಮ್ಮನ್ನು ಪ್ರವೇಶಿಸಿದೆ’ ಎಂದು ಅವರು ಹೇಳಿದರು.

‘ನಮ್ಮ ಬದ್ಧತೆಯ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲಾಗಿ ಪ್ರತಿಭಟನೆ ಮಾಡಿದ್ದೀರಾ, ಪ್ರಶಸ್ತಿ ವಾಪಸ್‌ ಮಾಡಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಅದರ ಮಟ್ಟವನ್ನು ಇಳಿಸಿದ್ದೇವೆ. ಬದ್ಧತೆಯ ಬಗ್ಗೆ ತಾತ್ವಿಕ ಚರ್ಚೆಗಳು ನಡೆಯುವ ಹೊತ್ತಿನಲ್ಲೇ ಅದನ್ನು ಟೋಕನಿಸಂ ಮಾಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ‘ಇವತ್ತಿನ ಕಾಲದಲ್ಲಿ ಕವಿತೆಯ ಹಸಿವು ಬತ್ತುತ್ತಿದೆ. ಯಾಕೆ ಬರೆದೆ ಎಂದು ಕೇಳುವವರೂ ಇದ್ದಾರೆ. ಅನಂತಮೂರ್ತಿ ಅವರು ಹಾಗಲ್ಲ. ಒಂದು ವೇಳೆ ಹೊಸ ಕವಿತೆಯನ್ನು ಕಳುಹಿಸದೆ ಇದ್ದಲ್ಲಿ ಬೇಜಾರು ಮಾಡಿಕೊಳ್ಳುತ್ತಿದ್ದರು’ ಎಂದರು. 

‘ಜಗತ್ತಿನ ಎಲ್ಲ ಸಮಸ್ಯೆಗಳು ತನ್ನ ಖಾಸಗಿ ಸಮಸ್ಯೆಗಳು ಎನ್ನುವ ರೀತಿಯಲ್ಲಿ ಎಲ್ಲದ್ದಕ್ಕೂ ಅನಂತಮೂರ್ತಿ ಸ್ಪಂದಿಸುತ್ತಿದ್ದರು’ ಎಂದರು.

‘ಪ್ರಜಾವಾಣಿ’ಯ ಸಹಾಯಕ ಸಂಪಾದಕ ಎನ್‌.ಎ.ಎಂ. ಇಸ್ಮಾಯಿಲ್‌ ಮಾತನಾಡಿ, ‘ತನ್ನ ವಿರುದ್ಧ ಪ್ರತಿಭಟನೆ ಮಾಡಿದವರನ್ನು ಒಳಗೊಳ್ಳುವ ಉದಾತ್ತ ಮನೋಭಾವ ಅನಂತಮೂರ್ತಿ ಅವರಿಗೆ ಇತ್ತು. ನರೇಂದ್ರ ಮೋದಿ ಕುರಿತ  ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿ ಕೊಂಡವರೇ ಜಾಸ್ತಿ’ ಎಂದರು.

‘ಅಭಿನವ’ ಪ್ರಕಾಶನದ ರವಿಕುಮಾರ್‌ ಮಾತನಾಡಿ, ‘ಅನಂತಮೂರ್ತಿ ಅವರ 85ನೇ ಜನ್ಮದಿನವನ್ನು ಅನುಸಂಧಾನದ ದಿನವನ್ನಾಗಿ ಆಚರಿಸುತ್ತೇವೆ’ ಎಂದರು.

ಈ ಸಂದರ್ಭದಲ್ಲಿ ಅನಂತಮೂರ್ತಿ ಅವರ ‘politics and fiction in the 1930s’ ಕೃತಿ ಹಾಗೂ ಅವರ ಅಪ್ರಕಟಿತ ಬರಹಗಳ ಸಂಪುಟ ‘ಭೀಷ್ಮ ಪ್ರಜ್ಞೆ’ (ವಿಚಾರ– ವಿಮರ್ಶೆ) ಕೃತಿಗಳ ಬಿಡುಗಡೆ ಮಾಡಲಾಯಿತು.

‘ಅನಂತಮೂರ್ತಿ ಈಗ ಇರಬೇಕಿತ್ತು’
‘ಈಗಿನ ವಿದ್ಯಮಾನ, ರಾಜಕೀಯ ಬೆಳವಣಿಗೆಗಳನ್ನು ಗಮನಿಸುವಾಗ ಈಗ ಪತಿ ಅನಂತಮೂರ್ತಿ ಇದ್ದಿದ್ದರೆ ಚೆನ್ನಾಗಿತ್ತು’ ಎಂದು ಎಸ್ತರ್‌ ಅನಂತಮೂರ್ತಿ ಹೇಳಿದರು.

‘ಅವರು ಪ್ರತಿಯೊಂದು ವಿಷಯಕ್ಕೂ ಪ್ರತಿಸ್ಪಂದಿಸುತ್ತಿದ್ದರು. ಅವರು ಎತ್ತಿದ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿತ್ತು. ಮನೆ ತುಂಬ ಜನರು ಇರುತ್ತಿದ್ದರು. ಈಗ ಮನೆ ಪೂರ್ತಿ ಖಾಲಿಯಾಗಿದೆ’ ಎಂದರು.

*
ಕನ್ನಡವನ್ನು ಅತೀ ಪ್ರಾದೇಶಿಕ ಅರಿವಿನಿಂದ ಹೊರಕ್ಕೆ ತರಬೇಕು.
-ರಾಜೇಂದ್ರ ಚೆನ್ನಿ,
ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.