ADVERTISEMENT

ಮನೆ ಮುಂದೆ ಶಾಮಿಯಾನ ಏಕೆ ಮಮ್ಮಿ...?

ತಂದೆ ಹತ್ಯೆಯಾದ ಸಂಗತಿ ತಿಳಿಯದ ಮುಗ್ಧ ಮಕ್ಕಳ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 11:04 IST
Last Updated 22 ಅಕ್ಟೋಬರ್ 2016, 11:04 IST
ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್
ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್   

ಬೆಂಗಳೂರು: ‘ಮಮ್ಮಿ ಇಷ್ಟೊಂದು ಜನ ಯಾಕೆ ಮನೆಗೆ ಬಂದು ಹೋಗುತ್ತಿದ್ದಾರೆ? ಮನೆ ಮುಂದೆ ಏಕೆ ಶಾಮಿಯಾನ ಹಾಕಿಸಿದ್ದೀರಿ? ನಾಲ್ಕು ದಿನಗಳಿಂದ ಡ್ಯಾಡಿ ಏಕೆ ಕಾಣಿಸುತ್ತಿಲ್ಲ? ಅವರು ಎಲ್ಲಿ ಹೋಗಿದ್ದಾರೆ? ಫೋನ್ ಮಾಡಿ ಕೊಡಿ ನಾವು ಮಾತನಾಡಬೇಕು....’

ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿರುವ ಬಗ್ಗೆ ಅರಿಯದ ಅವರ ಇಬ್ಬರು ಮಕ್ಕಳು, ನಿತ್ಯ ತಾಯಿ ಬಳಿ ಕೇಳುತ್ತಿರುವ ಪ್ರಶ್ನೆಗಳಿವು.
ರುದ್ರೇಶ್ ಕೊಲೆ, ಸ್ಥಳೀಯರೊಟ್ಟಿಗಿದ್ದ ಅವರ ಒಡನಾಟ ಹಾಗೂ ಕೊಲೆ ವಿಷಯ ಮಕ್ಕಳಿಗೆ ತಿಳಿಸದೆ ತಾವು ಅನುಭವಿಸುತ್ತಿರುವ ನೋವುಗಳನ್ನು ಮೃತರ ಪತ್ನಿ ವಿದ್ಯಾ ‘ಪ್ರಜಾವಾಣಿ’ ಎದುರು ತೋಡಿಕೊಂಡರು.

‘ಮಗಳಿಗೆ ನಾಲ್ಕು ವರ್ಷ. ಎಲ್‌ಕೆಜಿ ಓದುತ್ತಿದ್ದಾಳೆ. ಮಗ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಾನೆ. ತಂದೆ ಕೊಲೆಯಾಗಿದ್ದಾರೆ ಎಂಬ ಸಂಗತಿ ಅವರಿಗೆ ಇನ್ನೂ ಗೊತ್ತಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ಹೇಳಬೇಕೆಂದು ನಾವೂ ಸುಮ್ಮನಿದ್ದೇವೆ.’

‘ಬಿಜೆಪಿ ಮುಖಂಡರು, ಕಾರ್ಯಕರ್ತರು, ಪತಿಯ ಸ್ನೇಹಿತರು, ಸ್ಥಳೀಯರು ಸೇರಿದಂತೆ ನಿತ್ಯ ನೂರಾರು ಮಂದಿ ಮನೆಗೆ ಬಂದು ಸಾಂತ್ವನ ಹೇಳುತ್ತಾರೆ. ಅವರನ್ನು ನೋಡುವ ಮಕ್ಕಳು, ‘ಅಮ್ಮ ಇಷ್ಟೊಂದು ಜನ ಏಕೆ ಮನೆಗೆ ಬರುತ್ತಿದ್ದಾರೆ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆ ಬಗ್ಗೆ ಮಾತನಾಡಲು ಬರುತ್ತಿದ್ದಾರೆ ಎಂದು ಸುಳ್ಳು ಹೇಳಿ ಅವರನ್ನು ನಂಬಿಸುತ್ತಿದ್ದೇವೆ.’

‘ಐದು ದಿನಗಳಿಂದ ತಂದೆ ಮನೆಗೆ ಬಂದಿಲ್ಲ ಎಂದು ಪದೇ ಪದೇ ಪ್ರಶ್ನೆ ಮಾಡುತ್ತಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳುತ್ತೇನೆ. ಕೆಲವೊಮ್ಮೆ, ‘ಕರೆ ಮಾಡಿಕೊಡಿ. ನಾವು ಮಾತನಾಡಬೇಕು’ ಎಂದು ಹಟ ಹಿಡಿಯುತ್ತಾರೆ. ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಅವರು ಮಾತನಾಡಲು ಆಗುವುದಿಲ್ಲ. ಸ್ವಲ್ಪ ದಿನ ಬಿಟ್ಟು ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಸಮಾಧಾನ ಮಾಡುತ್ತಿದ್ದೇನೆ’ ಎಂದು ದುಃಖತಪ್ತರಾದರು.

ಆ ದಿನ ಆಗಿದ್ದೇನು: ‘ಕೆಮ್ಮಣ್ಣುಗುಂಡಿ ಪ್ರವಾಸಕ್ಕೆ ಹೋಗಿದ್ದ ಪತಿ, ಅ.14ರ ಸಂಜೆ ಮನೆಗೆ ಮರಳಿದರು. ಆ ನಂತರ ಪಥಸಂಚಲನದ ಸಿದ್ಧತಾ ಕೆಲಸಗಳಲ್ಲಿ ನಿರತರಾದರು. ಭಾನುವಾರ (ಅಕ್ಟೋಬರ್ 16) ಕಮರ್ಷಿಯಲ್‌ ಸ್ಟ್ರೀಟ್ ಸುತ್ತಮುತ್ತಲ ರಸ್ತೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಪಥಸಂಚಲನ ನಡೆಸಿದರು. ಅಲ್ಲಿ ವಿತರಿಸಲು ಸುಮಾರು 700 ಜನಕ್ಕೆ ಮನೆಯಲ್ಲೇ ಅಡುಗೆ ಮಾಡಿಸಿದ್ದ ಪತಿ, ಅದನ್ನು ತೆಗೆದುಕೊಂಡು ಬೆಳಿಗ್ಗೆ 9.15ಕ್ಕೆ ಮನೆ ಬಿಟ್ಟಿದ್ದರು’ ಎಂದು ವಿದ್ಯಾ ವಿವರಿಸಿದರು.

‘ಮಗಳು ಸಹ ಗಣವೇಷದಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಳು. ಕಾರ್ಯಕ್ರಮ ಮುಗಿದ ಬಳಿಕ 11 ಗಂಟೆಗೆ ಆಕೆಯನ್ನು ಮನೆಗೆ ಕಳುಹಿಸಿದ ಪತಿ, ಉಳಿದ ಅಡುಗೆಯನ್ನು ಆಶ್ರಮಕ್ಕೆ ಕೊಟ್ಟು ಬರುವುದಾಗಿ ನಾಲಾ ಜಂಕ್ಷನ್‌ ಮಾರ್ಗವಾಗಿ ಹೋಗಿದ್ದರು. ಈ ವೇಳೆ ಅವರಿಗೆ ಯಾರೊ ಕರೆ ಮಾಡಿ ಶಿವಾಜಿ ವೃತ್ತಕ್ಕೆ ಬರುವಂತೆ ತಿಳಿಸಿದ್ದಾರೆ. ಅಂತೆಯೇ ವಾಪಸ್ ಬಂದ ಅವರು, ಸ್ನೇಹಿತರ ಜತೆ ಮಾತನಾಡುತ್ತಾ ನಿಂತಿದ್ದಾಗ ಹಂತಕರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ.’

‘ಘಟನೆ ನಡೆದು ಐದು ದಿನಗಳಾಯಿತು. ಕೊಂದವರು ಯಾರು ಎಂಬುದಿರಲಿ, ಕರೆ ಮಾಡಿ ಕರೆಸಿದವರು ಯಾರೆಂಬುದು ಸಹ ಪತ್ತೆಯಾಗಿಲ್ಲ. ಮಗನನ್ನು ಸೈನಿಕನನ್ನಾಗಿ ನೋಡುವ ಕನಸು ಹೊಂದಿದ್ದ ನನ್ನ ಪತಿ, ಯಾರದ್ದೋ ದುಷ್ಕೃತ್ಯಕ್ಕೆ ಬಲಿಯಾದರು’ ಎಂದು ವಿದ್ಯಾ ಕಣ್ಣೀರಿಟ್ಟರು.

‘ಸಾವಿನ ಮನೆಯಲ್ಲೂ ರಾಜಕೀಯ’
‘ರುದ್ರೇಶ್ ಕೊಲೆ ನಂತರ ಬಿಜೆಪಿ ಮುಖಂಡರು ಮನೆಗೆ ಬಂದು ಸಾಂತ್ವನ ಹೇಳಿದರು. ಆದರೆ, ಆಡಳಿತ ಪಕ್ಷದ ಯಾವೊಬ್ಬ ಜನಪ್ರತಿನಿಧಿಯೂ ಕಣ್ಣೊರೆಸುವ ಕೆಲಸ ಮಾಡಲಿಲ್ಲ. ವ್ಯಕ್ತಿಯ ಹತ್ಯೆಗಿಂತ ಇಲ್ಲಿ ಪಕ್ಷದ ವರ್ಚಸ್ಸೇ ಮುಖ್ಯವಾಯಿತು. ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ’ ಎಂದು ರುದ್ರೇಶ್ ಮಾವ ಯಾದವನ್ ಬೇಸರ ವ್ಯಕ್ತಪಡಿಸಿದರು.

‘ನನ್ನ ಅಳಿಯ ಎಲ್ಲ ಸಮುದಾಯದವರ ಜತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಹೀಗಾಗಿ, ಕೋಮು ದ್ವೇಷಕ್ಕೆ ಹತ್ಯೆಯಾಯಿತು ಎಂಬುದನ್ನೂ ಒಪ್ಪಿಕೊಳ್ಳಲು ಆಗುತ್ತಿಲ್ಲ.’

‘ನಮ್ಮ ಕುಟುಂಬಕ್ಕೆ ಯಾವುದೇ ರಕ್ಷಣೆ ಕೋರಿಲ್ಲ. ಹಾಗೆಯೇ ತನಿಖೆಯನ್ನು ಸಿಬಿಐಗೆ ಕೊಡಿ, ಎನ್‌ಐಎಗೆ ಕೊಡಿ ಎಂಬ ಬೇಡಿಕೆಗಳನ್ನೂ ಇಟ್ಟಿಲ್ಲ. ಯಾವ ಪೊಲೀಸರು ಬೇಕಾದರೂ ತನಿಖೆ ನಡೆಸಿಕೊಳ್ಳಲಿ. ಆದರೆ, ಆ ಹಂತಕರಿಂದ ಇನ್ನೊಬ್ಬ ಮುಖಂಡ ಸಾಯುವ ಮೊದಲು ಅವರನ್ನು ಬಂಧಿಸಲಿ’ ಎಂದು ಯಾದವನ್ ಹೇಳಿದರು.

ADVERTISEMENT

ತನಿಖೆಗೆ ಪೊಲೀಸರು ಸಮರ್ಥರು: ಸಚಿವ ಪರಮೇಶ್ವರ್
ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಅವರ ಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವಹಿಸುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಶುಕ್ರವಾರ ರಾಜಭವನದಲ್ಲಿ ಭೇಟಿ ಮಾಡಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ರುದ್ರೇಶ್‌ ಹತ್ಯೆ ತನಿಖೆ ಈಗಾಗಲೇ ಪ್ರಗತಿಯಲ್ಲಿದೆ. ಪ್ರಕರಣ ಭೇದಿಸಲು ನಮ್ಮ ಪೊಲೀಸರು ಸಮರ್ಥರಿದ್ದಾರೆ. ಹೀಗಾಗಿ ಯಾವುದೇ ರಾಷ್ಟ್ರೀಯ ಸಂಸ್ಥೆಗಳಿಗೆ ವಹಿಸುವ ಅಗತ್ಯ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಕೊಲೆಗಡುಕರಿಗೆ ಆಶ್ರಯ ನೀಡುತ್ತಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆಯಲ್ಲ? ಎಂಬ ಪ್ರಶ್ನೆಗೆ, ‘ಪ್ರಕರಣದ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು. ಸರ್ಕಾರವನ್ನು ಟೀಕಿಸುವುದಕ್ಕೆ ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದರು.

‘ನಾನೇ ಸ್ವತಃ ಬಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇನೆ.  ಅವರೇನು ಕರೆದಿರಲಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ದೂರು ನೀಡಿರುವಾಗ ರಾಜ್ಯಪಾಲರಿಗೆ ಅಗತ್ಯ ಮಾಹಿತಿ ನೀಡುವುದು ನಮ್ಮ ಜವಾಬ್ದಾರಿ’ ಎಂದೂ ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.