ADVERTISEMENT

ಮಳೆ ನೀರು ಸಂಗ್ರಹ ಜಾಗೃತಿಗೆ ವಾಹನ

ಅಮೃತ ಕಿರಣ ಬಿ.ಎಂ.
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಮಳೆ ನೀರು ಸಂಗ್ರಹದ ಪ್ರಾತ್ಯಕ್ಷಿಕೆ ವಾಹನ
ಮಳೆ ನೀರು ಸಂಗ್ರಹದ ಪ್ರಾತ್ಯಕ್ಷಿಕೆ ವಾಹನ   

ಬೆಂಗಳೂರು: ಮಳೆ ನೀರು ಸಂಗ್ರಹಿಸಬೇಕು ಎನ್ನುವ ಬಹುತೇಕರ ಉತ್ಸಾಹ ಮಳೆಗಾಲದಲ್ಲೇ ಇಂಗಿ ಹೋಗುತ್ತದೆ. ಮಳೆ ನೀರು ಸಂಗ್ರಹ ಅಂದರೆ ಏನು, ವಿಧಾನ ಹೇಗಿರುತ್ತದೆ, ಎಷ್ಟು ಖರ್ಚು ತಗಲುತ್ತದೆ, ಎಂತಹ ಮನೆಗಳಿಗೆ ಇದು ಸೂಕ್ತ ಎಂಬ ಗೊಂದಲಗಳು ಉಳಿದುಕೊಂಡಿರುವುದೂ ಇದಕ್ಕೆ ಕಾರಣ.

ಜನಸಾಮಾನ್ಯರಲ್ಲಿ ಜಲಸಂಗ್ರಹದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಚಿಕ್ಕಮಗಳೂರಿನ ಜಲತಜ್ಞ ವಿಜಯ್‍ರಾಜ್ ಸಿಸೋಡಿಯಾ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಾತ್ಯಕ್ಷಿಕೆ ವಾಹನವೊಂದನ್ನು ಸಿದ್ಧಪಡಿಸಿದ್ದಾರೆ. ಈ ಬಾರಿಯ ಕೃಷಿ ಮೇಳದಲ್ಲಿ ಇದು ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.

ವಾಹನವೊಂದರ ಮೇಲೆ ಮನೆಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಗೋಡೆ, ಚಾವಣಿ, ಅಂಗಳ ಸೇರಿದಂತೆ ಮನೆಯ ಹೊರಭಾಗವನ್ನು ಇಲ್ಲಿ ಕಾಣಬಹುದು. ಮಳೆ ಬಂದಾಗ ನೀರಿನ ಸಂಗ್ರಹ ಹೇಗೆ ಆಗುತ್ತದೆ ಎಂದು ಈ ಮಾದರಿ ಮನೆಯ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದೆ.

ADVERTISEMENT

ಮಳೆ ಆರಂಭವಾದ ಕೂಡಲೇ ನೀರು ಚಾವಣಿಯ ಮೇಲೆ ಬೀಳಲಾರಂಭಿಸುತ್ತದೆ. ಅಲ್ಲಿಂದ ಹರಿದುಬರುವ ನೀರನ್ನು ಪೈಪ್‍ಗಳ ಮೂಲಕ ಮನೆಯ ನೆಲಮಟ್ಟಕ್ಕೆ ತಂದು ಅಲ್ಲಿ ಅಳವಡಿಸಿರುವ ರೈನಿಫಿಲ್ಟರ್‌ಗೆ ಸಂಪರ್ಕಿಸಲಾಗುತ್ತದೆ. ನೀರಿನಲ್ಲಿರುವ ಕಸ, ಕಲ್ಮಶವನ್ನು ಈ ಶೋಧಕವು ತೆಗೆದುಹಾಕುತ್ತದೆ. ಶುದ್ಧ ನೀರನ್ನು ಮನೆಯ ಸಂಪ್‍ಗೆ ರವಾನಿಸುತ್ತದೆ. ಇದೆಲ್ಲವೂ ಮಳೆ ಬಂದಾಗ ಸ್ವಯಂಚಾಲಿತವಾಗಿ ಆಗುವ ಕೆಲಸ. ಕೃತಕ ಮನೆಯ ಮಾದರಿ ಮೂಲಕ ಈ ಎಲ್ಲ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಪ್ರಾತ್ಯಕ್ಷಿಕೆ ನೋಡಲು ನೆರೆದಿದ್ದ ಆಸಕ್ತರು, ಮಳೆ ನೀರು ಸಂಗ್ರಹ ವಿಧಾನ ಇಷ್ಟೊಂದು ಸರಳವೇ ಎಂದು ಅಚ್ಚರಿಗೊಂಡರು.

ಈ ವಾಹನವು ರಾಜ್ಯವಷ್ಟೇ ಅಲ್ಲದೇ, ನೆರೆಯ ಮಹಾರಾಷ್ಟ್ರದಲ್ಲೂ ಸಂಚರಿಸಿ, ಮಾರ್ಗದರ್ಶನ ನೀಡಿದೆ. ವಿವಿಧ ವಸ್ತು ಪ್ರದರ್ಶನಗಳಲ್ಲಿಯೂ ಜನರಿಗೆ ಮಾಹಿತಿ ನೀಡಲಾಗುತ್ತಿದೆ.

ವಿಜಯ್‌ ಜಲಕಾಯಕ: ವಿಜಯ್‍ರಾಜ್ ತಮ್ಮ ಸ್ನೇಹಿತನ ಜೊತೆಗೂಡಿ ಕೆಲವು ವರ್ಷಗಳ ಹಿಂದೆ ‘ಫಾರ್ಮ್‌ಲ್ಯಾಂಡ್ ರೈನ್‍ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಎಂಬ ಸಂಸ್ಥೆ ಆರಂಭಿಸಿದರು. ಚಾವಣಿ ಮೇಲೆ ಬೀಳುವ ಮಳೆ ನೀರು ಸಂಗ್ರಹ, ಬತ್ತಿರುವ ಬಾವಿಗೆ ಜಲಮರುಪೂರಣ, ಬತ್ತಿರುವ ಕೊಳವೆ ಬಾವಿಗೆ ನೀರು ಇಂಗಿಸುವುದು- ಹೀಗೆ ನೂತನ ತಂತ್ರಜ್ಞಾನದ ಮೂಲಕ ಈ ಸಂಸ್ಥೆ ಜಲಕಾಯಕವನ್ನು ಸದ್ದಿಲ್ಲದೇ ನಡೆಸಿಕೊಂಡು ಬರುತ್ತಿದೆ.

ನೀರು ಇಂಗಿಸುವುದಾದರೆ, ಶುದ್ಧ ನೀರನ್ನೇ ಇಂಗಿಸಬೇಕು ಎಂಬ ಆಲೋಚನೆಯಿಂದ ಅಭಿವೃದ್ಧಿಪಡಿಸಿದ ಸಾಧನವೇ ‘ರೈನಿ ಫಿಲ್ಟರ್’. ಇದು ಮಳೆ ನೀರನ್ನು ಕಸದಿಂದ ಬೇರ್ಪಡಿಸಿ, ಶುದ್ಧ ನೀರನ್ನು ಮಾತ್ರ ಸಂಗ್ರಹಣಾ ತೊಟ್ಟಿಗೆ ಕಳುಹಿಸುತ್ತದೆ. ಸ್ವಯಂಚಾಲಿತವಾಗಿ ಈ ಕೆಲಸ ಆಗುತ್ತದೆ. ಗುರುತ್ವಾಕರ್ಷಣೆ ತತ್ವದ ಆಧಾರದ ಮೇಲೆ ಕೆಲಸ ಮಾಡುವ ಈ ಫಿಲ್ಟರ್‌ನಲ್ಲಿ ನೀರನ್ನು ಸೋಸಲು ಮೈಕ್ರಾನ್ ಸ್ಕ್ರೀನ್ ಬಲೆ ಅಳವಡಿಸಲಾಗಿದೆ. ಈ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯೂ ಸಂದಿದೆ. ವಿಜಯ್‍ರಾಜ್ ಅವರು ಈ ಪ್ರಯತ್ನಕ್ಕೆ ಪೇಟೆಂಟ್ (ಹಕ್ಕುಸ್ವಾಮ್ಯ) ಕೂಡಾ ಪಡೆದಿದ್ದಾರೆ.

ಸಂಪರ್ಕಕ್ಕೆ: ವಿಜಯ್‌ರಾಜ್‌– 9448130524

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.