ADVERTISEMENT

ಮಹಿಳೆ ಕೊಂದು ಬಾಗಿಲು ಹಾಕಿಕೊಂಡು ಹೋಗಿದ್ದ!

* ಕೇರಳದಲ್ಲಿ ಸೆರೆ ಸಿಕ್ಕ ಹಂತಕ * ಜೀವಕ್ಕೇ ಕುತ್ತು ತಂದ ಅನೈತಿಕ ಸಂಬಂಧ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:49 IST
Last Updated 19 ಆಗಸ್ಟ್ 2017, 19:49 IST

ಬೆಂಗಳೂರು: ಮಚ್ಚಿನಿಂದ ಮಹಿಳೆಯ ಮುಖಕ್ಕೆ ಹೊಡೆದು ಮನೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ ಬಾಣಸಿಗ ಮಂಜುನಾಥ್ ಅಲಿಯಾಸ್ ರವಿ (40) ಎಂಬಾತ ಕೇರಳದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತುರುವೇಕೆರೆಯ ಮಂಜುನಾಥ್, ಯಶವಂತಪುರದ ಹೋಟೆಲ್‌ವೊಂದರಲ್ಲಿ ಬಾಣಸಿಗನಾಗಿದ್ದ. ಎರಡು ವರ್ಷಗಳ ಹಿಂದೆ ಆತನಿಗೆ ಮತ್ತೀಕೆರೆ ನಿವಾಸಿ ಅನಿತಾ (35) ಎಂಬುವರ ಪರಿಚಯವಾಗಿತ್ತು.

ದಿನ ಕಳೆದಂತೆ ಆ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಆ.9ರಂದು ಅವರನ್ನು ಬಿ.ಕೆ.ನಗರದಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ, ಜಗಳ ತೆಗೆದು ಮಚ್ಚಿನಿಂದ ತಲೆಗೆ ಹೊಡೆದಿದ್ದ. ನಂತರ ಹೊರಗಿನಿಂದ ಚಿಲಕ ಹಾಕಿಕೊಂಡು ಪರಾರಿಯಾಗಿದ್ದ.

ADVERTISEMENT

ತೀವ್ರ ರಕ್ತಸ್ರಾವವಾಗಿದ್ದರಿಂದ ಅನಿತಾ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದರು. ಆ.13ರಂದು ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಅನುಮಾನಗೊಂಡ ನೆರೆಹೊರೆಯವರು, ಮನೆಯೊಳಗೆ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಅವರು ಪೊಲೀಸರಿಗೆ ಹಾಗೂ ಮೃತರ 17 ವರ್ಷದ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ದೂರು ಕೊಟ್ಟ ಮಗ: ‘ನಾನು ಹಾಗೂ ತಾಯಿ ಆಂಧ್ರಪ್ರದೇಶದವರಾಗಿದ್ದು, ತಂದೆ ನಿಧನದ ನಂತರ ನಗರಕ್ಕೆ ಬಂದು ನೆಲೆಸಿದ್ದೇವೆ. ‘ಕಲಾ ಆಂಟಿ ಮನೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಆ.9ರ ಸಂಜೆ 5.30ರ ಸುಮಾರಿಗೆ ಮನೆಯಿಂದ ಹೋದ ತಾಯಿ, ಮರುದಿನ ಸಂಜೆಯಾದರೂ ವಾಪಸಾಗಲಿಲ್ಲ.

ಅನುಮಾನಗೊಂಡ ಕಲಾ ಆಂಟಿ ಮನೆಗೆ ಹೋಗಿ ವಿಚಾರಿಸಿದಾಗ, ‘ನಿನ್ನೆ ಸಂಜೆ ಮನೆಗೆ ಬಂದಿದ್ದರು. ಮಾತನಾಡಿಸಿಕೊಂಡು ಹತ್ತೇ ನಿಮಿಷದಲ್ಲಿ ಹೊರಟು ಹೋದರು’ ಎಂದು ಹೇಳಿದರು. ತಕ್ಷಣ ತಾಯಿ ಕೆಲಸ ಮಾಡುತ್ತಿದ್ದ ಹೋಟೆಲ್ ಬಳಿ ಹೋಗಿ ವಿಚಾರಿಸಿದಾಗ ಅವರು ಮಂಜುನಾಥ್ ಜತೆ ಹೋಗಿರುವುದು ಗೊತ್ತಾಯಿತು’ ಎಂದು ಮೃತರ ಮಗ ದೂರಿನಲ್ಲಿ ಹೇಳಿದ್ದರು.

‘ತಾಯಿ ಮಂಜುನಾಥ್ ಜತೆ ಅಕ್ರಮ ಸಂಬಂಧ ಹೊಂದಿದ್ದರು. ನನಗೆ ಸುಳ್ಳು ಹೇಳಿ ಆತನ ಮನೆಗೆ ಹೋಗಿದ್ದರಿಂದ ಕೋಪಗೊಂಡು ಹೇಳದೆ ಕೇಳದೆ ಅದೇ ದಿನ ಊರಿಗೆ ಬಸ್ಸು ಹತ್ತಿದೆ. ಆ.13ರಂದು ಕರೆ ಮಾಡಿದ ವ್ಯಕ್ತಿಯೊಬ್ಬರು, ತಾಯಿ ಕೊಲೆಯಾಗಿರುವ ವಿಷಯ ತಿಳಿಸಿದರು.’

‘ತಾಯಿ ಕೆಲಸ ಮಾಡುವ ಸ್ಥಳಕ್ಕೆ ಆಗಾಗ್ಗೆ ಹೋಗುತ್ತಿದ್ದ ಮಂಜುನಾಥ್, ತನ್ನೊಂದಿಗೆ ಬರುವಂತೆ ಅವರನ್ನು ಪೀಡಿಸುತ್ತಿದ್ದ. ಹೋಗದಿದ್ದರೆ, ನಮ್ಮ ಮನೆಗೇ ಬಂದು ಗಲಾಟೆ ಮಾಡುತ್ತಿದ್ದ. ಆತನ ಈ ವರ್ತನೆ ಅಮ್ಮನಿಗೆ ಬೇಸರ ತರಿಸಿತ್ತು. ‘ಮನೆಗೆ ಕರೆದುಕೊಂಡು ಹೋಗಿ ನನಗೆ ಹಿಂಸಿಸುತ್ತಾನೆ’ ಎಂದು ತಾಯಿ ಆತನಿಗೆ ಬೈದುಕೊಂಡು ಓಡಾಡುತ್ತಿದ್ದಳು. ಇದೇ ವಿಚಾರವಾಗಿ ಅವರಿಬ್ಬರ ನಡುವೆ ಹಲವು ಸಲ ಜಗಳವಾಗಿತ್ತು. ಆತನೇ ತಾಯಿಯನ್ನು ಕೊಲೆಗೈದಿದ್ದಾನೆ’ ಎಂದು ದೂರಿನಲ್ಲಿ ವಿವರಿಸಿದ್ದರು.

***

ಕೇರಳದಲ್ಲಿ ಸೆರೆ

‘ಮಂಜುನಾಥ್‌ನ ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ, ಆತ ಕೇರಳದಲ್ಲಿರುವುದು ಗೊತ್ತಾಗಿತ್ತು. ತಕ್ಷಣ ಒಂದು ತಂಡವನ್ನು ಅಲ್ಲಿಗೆ ಕಳುಹಿಸಿದ್ದೆವು. ಶುಕ್ರವಾರ ಬೆಳಿಗ್ಗೆ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.