ADVERTISEMENT

ಮಹೇಶ್‌ನ ಕೆನ್ನೆಗೆ ಹೊಡೆದಿದ್ದ ಗೌತಮಿ

ಹುಟ್ಟುಹಬ್ಬದ ಉಡುಗೊರೆ ನಿರಾಕರಿಸಿ ಎಚ್ಚರಿಕೆ ನೀಡಿದ್ದಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 20:45 IST
Last Updated 1 ಏಪ್ರಿಲ್ 2015, 20:45 IST

ಬೆಂಗಳೂರು: ‘ಕಳೆದ ತಿಂಗಳು ಗೌತಮಿಯ ಹುಟ್ಟು ಹಬ್ಬವಿತ್ತು. ಆಗ ಮಹೇಶ್‌ ಆಕೆಗೆ ಕೆಲ ಉಡುಗೊರೆಗಳನ್ನು ತಂದು ಕೊಟ್ಟಿದ್ದ. ಅವುಗಳನ್ನು ಮುಖದ ಮೇಲೆ ಎಸೆದಿದ್ದ ಗೌತಮಿ, ಕೆನ್ನೆಗೆ ಹೊಡೆದು ಕಳುಹಿಸಿದ್ದಳು’ ಎಂದು ಮೃತ ವಿದ್ಯಾರ್ಥಿನಿಯ ಗೆಳತಿಯರು ಹೇಳಿದರು.

‘ತಿಂಡಿ–ತಿನಿಸು ಸೇರಿದಂತೆ ಅಗತ್ಯ ವಸ್ತುಗಳನ್ನು ತರಲು ಎಲ್ಲ ವಿದ್ಯಾರ್ಥಿನಿಯರು ಆತನನ್ನೇ ಅಂಗಡಿಗೆ ಕಳುಹಿಸುತ್ತಿದ್ದೆವು. ಹೀಗಾಗಿ ಆತನ ಜತೆ ಹೆಚ್ಚು ಮಾತನಾಡಬೇಕಾದ ಅನಿವಾರ್ಯತೆ ಇತ್ತು. ಮಹೇಶ್‌ ಮೊಬೈಲ್‌ನಲ್ಲಿ ಗೌತಮಿ ಸೇರಿದಂತೆ ಕೆಲ ವಿದ್ಯಾರ್ಥಿನಿಯರ ಫೋಟೊಗಳು ಇದ್ದವು. ಎಲ್ಲರ ಎದುರು ಕೆನ್ನೆಗೆ ಹೊಡೆದ ಕಾರಣ ಆಕೆ ಮೇಲೆ ಮಹೇಶ್‌ಗೆ ಹೆಚ್ಚು ಕೋಪವಿತ್ತು’ ಎಂದರು. ಗೌತಮಿ, ಟಿ.ರಮೇಶ್ ಹಾಗೂ ಲಕ್ಷ್ಮಿ ದಂಪತಿಯ ಮಗಳು. ರಮೇಶ್ ಅವರು ಪಾವಗಡದಲ್ಲಿ ಔಷಧದ ಅಂಗಡಿ ಇಟ್ಟುಕೊಂಡಿದ್ದು, ಜತೆಗೆ ಚೀಟಿ ವ್ಯವಹಾರ ನಡೆಸುತ್ತಾರೆ.

ಸಿಬ್ಬಂದಿಯ ಸುಳ್ಳು:  ‘ಮಹೇಶ್ ಹಾಗೂ ಮಗಳ ನಡುವೆ ಒಂದು ವರ್ಷದಿಂದ ಸಲುಗೆ ಇತ್ತು ಎಂದು ಕಾಲೇಜಿನ ಸಿಬ್ಬಂದಿ ಹೇಳುತ್ತಿದ್ದಾರೆ.

ಕೃತ್ಯ ಎಸಗಿದ್ದು ಹೀಗೆ

ಬೆಂಗಳೂರು: ಪ್ರತಿದಿನ ರಾತ್ರಿ 8 ರಿಂದ 10 

ಗಂಟೆವರೆಗೆ ಕಾಲೇಜಿನಲ್ಲಿ ಸಿಇಟಿ ತರಗತಿಗಳು ನಡೆಯುತ್ತವೆ. ಗೌತಮಿ, ಸಿರೀಷಾ ಸೇರಿದಂತೆ ನಾಲ್ವರು ವಿದ್ಯಾರ್ಥಿನಿಯರು ಮಂಗಳವಾರ ಆ ತರಗತಿಗೆ ಹಾಜರಾಗದೆ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಗಳಲ್ಲಿ ಮಲಗಿದ್ದರು. 

ಈ ಬಗ್ಗೆ ಅರಿತ ಮಹೇಶ್, ಮೊದಲು ಗೌತಮಿಯ ಕೊಠಡಿ ಬಳಿ ಹೋಗಿದ್ದ. ಬಾಗಿಲು ತೆರೆದಿದ್ದರಿಂದ ಸುಲಭವಾಗಿ ಒಳ ಹೋದ ಆತ, ಹತ್ತಿರದಿಂದಲೇ ಆಕೆಯ ತಲೆಗೆ ಗುಂಡು ಹೊಡೆದ. ಈ ವೇಳೆ ಅದೇ ಮಂಚದ ಮೇಲಿನ ಸಾಲಿನಲ್ಲಿ ಮಲಗಿದ್ದ ಮತ್ತೊಬ್ಬ ವಿದ್ಯಾರ್ಥಿನಿ ನಿಶ್ಚಿತಾ ಅದೃಷ್ಟವಶಾತ್ ಆತನ ಕಣ್ಣಿಗೆ ಬಿದ್ದಿಲ್ಲ. ಗಾಢ ನಿದ್ರೆಯಲ್ಲಿದ್ದ ಕಾರಣ ಆಕೆಗೂ ಎಚ್ಚರವಾಗಿಲ್ಲ.

ಗೌತಮಿ ನಿತ್ರಾಣಳಾದ ನಂತರ ಆತ, ಮತ್ತೊಂದು ಕೊಠಡಿಗೆ ತೆರಳಿ ಬಾಗಿಲು ಬಡಿದಿದ್ದ. ಈ ವೇಳೆ ಸಿಂಧೂ ಎಂಬ ವಿದ್ಯಾರ್ಥಿನಿ ಬಾಗಿಲು ತೆರೆದಿದ್ದಳು. ಆತನ ಕೈಲಿ ಪಿಸ್ತೂಲು ಇದ್ದುದರಿಂದ ಗಾಬರಿಗೊಂಡ ಆಕೆ, ಕೂಡಲೇ ಬಾಗಿಲು ಮುಚ್ಚಲು ಯತ್ನಿಸಿದಳು. ಈ ಹಂತದಲ್ಲಿ ಪಿಸ್ತೂಲಿನಿಂದ ಹಾರಿದ ಗುಂಡು ಮೂಲೆಯಲ್ಲಿ ಓದುತ್ತಾ ಕುಳಿತಿದ್ದ ಸಿರೀಷಾಳ ಮುಖಕ್ಕೆ ಬಿದ್ದಿತು. ಕೂಡಲೇ ಸಿಂಧೂ ಕೋಣೆಯ ಚಿಲಕ ಹಾಕಿ ಚೀರಿಕೊಂಡಳು.

ಗಾಯಾಳುಗಳಿಗೆ ಆಸ್ಪತ್ರೆಗೆ ಒಯ್ದ ಬಳಿಕ ಹಾಸ್ಟೆಲ್‌ ವಾರ್ಡನ್‌ ಕಲ್ಯಾಣಿ ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ADVERTISEMENT

ಇದು ಸುಳ್ಳು. ಮಗಳು ಅಂಥವಳಲ್ಲ. ಪೊಲೀಸರು ತಮ್ಮ ವಿರುದ್ಧವೂ ಕ್ರಮ ಜರುಗಿಸುತ್ತಾರೆ ಎಂದು ಇಂಥ ಕತೆ ಹೆಣೆದಿದ್ದಾರೆ’ ಎಂದು ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

‘ಮಹೇಶ್‌ನ ಪೂರ್ವಾಪರವೇನು, ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜಿಗೆ ಯಾವ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು, ಭದ್ರತಾ ಸಿಬ್ಬಂದಿಯನ್ನು ಏಕೆ ನಿಯೋಜಿಸಿಲ್ಲ ಎಂಬ ಪ್ರಶ್ನೆಗಳಿಗೆ ಆಡಳಿತ ಮಂಡಳಿ ಬಳಿ ಉತ್ತರಗಳಿಲ್ಲ. ಭದ್ರತಾ ವೈಫಲ್ಯದ ಆರೋಪದಿಂದ ನುಣುಚಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದರು.

‘ದಾವಣಗೆರೆಯ ಅನ್ಮೋಲ್‌ ಪಬ್ಲಿಕ್ ಶಾಲೆಯಲ್ಲಿ ಮಗಳು ಪ್ರೌಢಶಿಕ್ಷಣ ಮುಗಿಸಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ರ್‌್ಯಾಂಕ್‌ ಗಳಿಸಿದ್ದಳು. ಐಎಎಸ್‌ ಮಾಡಬೇಕೆಂಬ ಆಕೆಯ ಕನಸು ನುಚ್ಚು ನೂರಾಯಿತು’ ಎಂದು ರಮೇಶ್ ಕಣ್ಣೀರಿಟ್ಟರು.

‘ವಿದ್ಯಾರ್ಥಿಗಳು ಕಾಲೇಜಿನಲ್ಲಿ ಮೊಬೈಲ್ ಬಳಕೆ ಮಾಡುವಂತಿಲ್ಲ. ಹೀಗಾಗಿ ಎಲ್ಲ ಪೋಷಕರು ಮಹೇಶ್‌ ಮೊಬೈಲ್‌ಗೇ ಕರೆ ಮಾಡಿ ತಮ್ಮ ಮಕ್ಕಳ ಜತೆ ಮಾತನಾಡುತ್ತಾರೆ. ಮಂಗಳವಾರ ಸಂಜೆ ನಾನು ಸಹ 3 ಬಾರಿ ಆತನಿಗೆ ಕರೆ ಮಾಡಿದ್ದೆ. ಆತನಿಂದ ಪ್ರತಿಕ್ರಿಯೆ ದೊರೆಯದ ಕಾರಣ ರಾತ್ರಿ 8 ಗಂಟೆಗೆ ಉಪನ್ಯಾಸಕರೊಬ್ಬರಿಗೆ ಕರೆ ಮಾಡಿ ಮಗಳ ಜತೆ ಮಾತನಾಡಿದ್ದೆ. ಬಹುಶಃ ಗೌತಮಿಯನ್ನು ಕೊಲ್ಲಲು ಮೊದಲೇ ಸಂಚು ರೂಪಿಸಿಕೊಂಡಿದ್ದರಿಂದ ಆತ ಕರೆ ಸ್ವೀಕರಿಸಿದಂತಿಲ್ಲ’ ಎಂದು ರಮೇಶ್ ಅನುಮಾನ ವ್ಯಕ್ತಪಡಿಸಿದರು.

‘ಕಟ್ಟಡದಿಂದ ಬಿದ್ದಳು ಎಂದರು’
‘ಮಂಗಳವಾರ ರಾತ್ರಿ 11 ಗಂಟೆಗೆ ಕರೆ ಮಾಡಿದ್ದ ಕಾಲೇಜು ಸಿಬ್ಬಂದಿ, ಗೌತಮಿ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಳು ಎಂದರು. ಕೂಡಲೇ ಟ್ಯಾಕ್ಸಿ ಮಾಡಿಕೊಂಡು ಕುಟುಂಬ ಸದಸ್ಯರೆಲ್ಲ ಕಾಡುಗೋಡಿಯ ನಾರಾಯಣ ಆಸ್ಪತ್ರೆಗೆ ತೆರಳಿದೆವು. ಆ ನಂತರ ಮಗಳು ಗುಂಡೇಟಿನಿಂದ ಸತ್ತಿರುವುದು ಗೊತ್ತಾಯಿತು’ ಎಂದು ಗೌತಮಿ ಪೋಷಕರು ದೂರಿದರು.

ಅಕ್ಕನ ಮನೆಯಲ್ಲಿ ಅಡಗಿದ್ದ
‘ಕಾಲೇಜಿನ ಆವರಣದಲ್ಲೇ ಆರೋಪಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆತನ ಪೂರ್ವಾಪರದ ಬಗ್ಗೆ ಕಾಲೇಜು ಸಿಬ್ಬಂದಿಯನ್ನು ವಿಚಾರಿಸಿದಾಗ ಬಿ.ನಾರಾಯಣಪುರದಲ್ಲಿ ಆತನ ಅಕ್ಕ ಶೈಲಜಾ ಅವರ ಮನೆ ಇರುವುದು ಗೊತ್ತಾಯಿತು.   ಸ್ಥಳೀಯ ಪೊಲೀಸರನ್ನು ಅವರ ಮನೆಗೆ ಕಳುಹಿಸಿದಾಗ ಆರೋಪಿ ಸಿಕ್ಕಿ ಬಿದ್ದ’ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದರು.

ಸಿರೀಷಾಗೆ ಶಸ್ತ್ರಚಿಕಿತ್ಸೆ
ಗುಂಡೇಟಿನಿಂದ ಗಾಯಗೊಂಡಿರುವ ಸಿರೀಷಾಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

‘ಪ್ರಾಣಾಪಾಯದಿಂದ ಸಂಪೂರ್ಣವಾಗಿ ಪಾರಾಗಿರುವ ಆಕೆ, ಸದ್ಯ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾಳೆ’ ಎಂದು ಮಣಿಪಾಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುದರ್ಶನ ಬಲ್ಲಾಳ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿರೀಷಾಳ ಕೆನ್ನೆ, ತುಟಿ, ವಸಡು ಹಾಗೂ ಗಂಟಲಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ. ನಮ್ಮ ಆಸ್ಪತ್ರೆಯ ಪ್ಲಾಸ್ಟಿಕ್‌ ಹಾಗೂ ಕಿವಿ, ಮೂಗು ಮತ್ತು ಗಂಟಲು ಚಿಕಿತ್ಸಾ ವಿಭಾಗದ ತಜ್ಞರು ಅವಳ ಆರೈಕೆ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಡಾ. ಅಶೋಕ್‌ ಹಾಗೂ ಡಾ.ಸುನಿಲ್‌ ಕಾರಂತ್‌ ನೇತೃತ್ವದ ವೈದ್ಯರ ತಂಡ ಸುಮಾರು ಎರಡೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿದೆ. ಸದ್ಯ ಗಾಯಕ್ಕೆ ಚಿಕಿತ್ಸೆ ನೀಡಲಾಗಿದ್ದು, ಪೂರ್ಣ ಚೇತರಿಸಿಕೊಂಡ ಬಳಿಕ ಮತ್ತೆ ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವಿದೆ’ ಎಂದು ಅವರು ವಿವರಿಸಿದರು.

ಸಮಗ್ರ ತನಿಖೆಗೆ ಆಗ್ರಹಿಸಿ ರಸ್ತೆ ತಡೆ

ದೇವನಹಳ್ಳಿ ವರದಿ: ಬೆಂಗಳೂರು ನಗರದ ಪ್ರಗತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಗೌತಮಿ ಹತ್ಯೆಯ  ಸಮಗ್ರ ತನಿಖೆಗೆ ಆಗ್ರಹಿಸಿ ಸಂಬಂಧಿಕರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ರಸ್ತೆ ತಡೆ ನಡೆಸಿದರು.

ಶವ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್‌ ವಾಹನವನ್ನು ಹೆದ್ದಾರಿಯಲ್ಲಿನ ಗುರುಭವನದ ಎದುರು ಅಡ್ಡಗಟ್ಟಿದ ಸಂಬಂಧಿಕರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ವಿಧಾನಪರಿಷತ್‌ ಸದಸ್ಯ ಶರವಣನ್‌ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ಪ್ರಾಂಶುಪಾಲರು, ಆಡಳಿತ ಮಂಡಳಿ ಅಧ್ಯಕ್ಷರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದರು.

ಮೃತ ಗೌತಮಿ ಸಂಬಂಧಿ ರಮೇಶ್‌ ಮಾತನಾಡಿ, ವಿದ್ಯಾರ್ಥಿ ನಿಲಯದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಬೇಕು. ವಿದ್ಯಾರ್ಥಿ ನಿಲಯದ ಒಳಗೆ ಅನುಮತಿ ಇಲ್ಲದೆ ಹೋಗುವಂತಿಲ್ಲ. ಆದರೂ, ಕಚೇರಿ ಸಹಾಯಕ ಒಳಗೆ ನುಗ್ಗಿ ಹತ್ಯೆ ಮಾಡಿದ್ದಾನೆ. ಇದು ಭದ್ರತಾ ಲೋಪವನ್ನು ತೋರಿಸುತ್ತದೆ. ಕಾಲೇಜಿನ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.