ADVERTISEMENT

ಮಾಲಿನ್ಯ ನಿಯಂತ್ರಣ ಸಮರ್ಪಕವಾಗಿಲ್ಲ

ಮಂಡಳಿ ಧೋರಣೆ ಆಘಾತಕಾರಿ: ಅಶ್ವನಿ ಕುಮಾರ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ವನಿ ಕುಮಾರ್‌ ಮಾತನಾಡಿದರು. ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್ ಚಿತ್ರದಲ್ಲಿದ್ದಾರೆ  ಪ್ರಜಾವಾಣಿ ಚಿತ್ರ
ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶ್ವನಿ ಕುಮಾರ್‌ ಮಾತನಾಡಿದರು. ಇಸ್ರೊ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್ ಚಿತ್ರದಲ್ಲಿದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಸಂಸದೀಯ ಸ್ಥಾಯಿ ಸಮಿತಿಯ (ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಹಾಗೂ ಅರಣ್ಯ) ಅಧ್ಯಕ್ಷ ಅಶ್ವನಿ ಕುಮಾರ್‌ ಕಿಡಿಕಾರಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉಪಗ್ರಹ ಕೇಂದ್ರಕ್ಕೆ ಸಮಿತಿಯ ಸದಸ್ಯರು ಶುಕ್ರವಾರ ಭೇಟಿ ನೀಡಿ ಇಸ್ರೊ ವಿಜ್ಞಾನಿಗಳ ಜತೆಗೆ ಸಭೆ ನಡೆಸಿದರು. ಬಳಿಕ  ಅಶ್ವನಿ ಕುಮಾರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಗರದಲ್ಲಿ ವಾಯುಮಾಲಿನ್ಯ  ಹಾಗೂ ಶಬ್ದ ಮಾಲಿನ್ಯ ವಿಪರೀತವಾಗಿದೆ. ಕೆರೆಗಳೆಲ್ಲ ಕಲುಷಿತಗೊಂಡಿವೆ. ಕಸ ಸಮಸ್ಯೆ ಗಂಭೀರವಾಗಿದೆ. ಇವುಗಳ ನಿಯಂತ್ರಣಕ್ಕೆ ಮಂಡಳಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಮಂಡಳಿಯ ಧೋರಣೆ ನೋಡಿ ಆಘಾತ ಉಂಟಾಗಿದೆ’ ಎಂದರು.

‘ಪರಿಸರ ನಿಯಮಗಳನ್ನು ಉಲ್ಲಂಘಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಮಂಡಳಿಯಲ್ಲಿ 211 ಪ್ರಕರಣಗಳು ದಾಖಲಾಗಿವೆ. ಒಂದೇ ಒಂದು ಪ್ರಕರಣ ಇತ್ಯರ್ಥವಾಗಿಲ್ಲ. ಮಂಡಳಿ ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿ’ ಎಂದರು.

‘ವಾಯು, ಶಬ್ದ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಹಾಗೂ ನೀರಿನ ಗುಣಮಟ್ಟ ಕಾಪಾಡಲು ರಾಜ್ಯ ಸರ್ಕಾರ ಕ್ರಿಯಾಯೋಜನೆ ರೂಪಿಸಬೇಕು. ಜತೆಗೆ ಬೆಂಗಳೂರಿನ ಪರಿಸರ ಮಾಲಿನ್ಯದ ಕುರಿತ ವರದಿ ಸಲ್ಲಿಸಬೇಕು’ ಎಂದರು.

‘ಬೆಂಗಳೂರಿನಲ್ಲಿ ಸುಮಾರು 9 ಸಾವಿರ ವೈದ್ಯಕೀಯ ಸಂಸ್ಥೆಗಳಿವೆ. ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿಗೆ ಕೇವಲ ನಾಲ್ಕು ಸೇವಾ ಸಂಸ್ಥೆಗಳಿವೆ. ಅದರಲ್ಲಿ ಮೂರು ಸಂಸ್ಥೆಗಳು  ಕಾರ್ಯನಿರ್ವಹಿಸುತ್ತಿವೆ. ವೈದ್ಯಕೀಯ ತ್ಯಾಜ್ಯಗಳ ಸಮರ್ಪಕ ವಿಲೇವಾರಿಗೆ ಸ್ಥಳೀಯ ಆಡಳಿತ ಕ್ರಿಯಾಯೋಜನೆ ರೂಪಿಸಬೇಕು’ ಎಂದು ಅವರು ಸೂಚನೆ ನೀಡಿದರು.

‘ನಗರದಲ್ಲಿ ಕಸ ಸಮಸ್ಯೆ ಗಂಭೀರವಾಗಿದೆ. ಎಲ್ಲ ನಗರಗಳ ಸಮಸ್ಯೆಯೂ ಹೌದು. ಭೂಭರ್ತಿ ಘಟಕಗಳ ಸ್ಥಾಪನೆಗೆ ಅಗತ್ಯ ಜಾಗ ಸಿಗುತ್ತಿಲ್ಲ. ಇದರಿಂದ ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೆ ಈ ಸಮಸ್ಯೆ ಪರಿಹಾರಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯ’ ಎಂದರು.

‘ನಗರ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ  ಚಟುವಟಿಕೆ ಕೈಗೊಳ್ಳಬೇಕಿದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಸುಸ್ಥಿರ ಅಭಿವೃದ್ಧಿ ಮಾಡಬೇಕಿದೆ. ಈ ಸಂಬಂಧ ಗುರುವಾರ ಮುಖ್ಯಮಂತ್ರಿ ಅವರ ಜತೆಗೆ ಸಭೆ ನಡೆಸಲಾಗಿದೆ. ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ತಂಬಾಕು ದುಷ್ಪರಿಣಾಮ: 6 ತಿಂಗಳಲ್ಲಿ ವರದಿ
ತಂಬಾಕು ದುಷ್ಪರಿಣಾಮದ ಬಗ್ಗೆ ತಂಬಾಕು ಮಂಡಳಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಧ್ಯಯನ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಅಶ್ವನಿ ಕುಮಾರ್‌ ತಿಳಿಸಿದರು.

‘ದೇಶದಲ್ಲಿ ವಾರ್ಷಿಕ ತಂಬಾಕು ವಹಿವಾಟು ₹17 ಸಾವಿರ ಕೋಟಿ.  ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆ ನಿವಾರಣೆಗೆ ₹1 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದೇವೆ. ರೈತರನ್ನು ಪರ್ಯಾಯ ಬೆಳೆ ಬೆಳೆಯಲು ಉತ್ತೇಜಿಸಬೇಕಿದೆ. ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕಿದೆ’ ಎಂದರು.

ಇಸ್ರೊ ಅನುದಾನ ಶೇ 50 ಹೆಚ್ಚಳಕ್ಕೆ ಶಿಫಾರಸು
ಇಸ್ರೊಗೆ ನೀಡುತ್ತಿರುವ ಯೋಜನಾ ಅನುದಾನವನ್ನು ಶೇ 50ರಷ್ಟು ಹೆಚ್ಚಳ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಶ್ವನಿ ಕುಮಾರ್‌ ತಿಳಿಸಿದರು.

‘ಪ್ರಸ್ತುತ ಸಂಸ್ಥೆಗೆ ₹5800 ಕೋಟಿ ಯೋಜನಾ ಅನುದಾನ ಹಾಗೂ ₹1400 ಕೋಟಿ ಯೋಜನೇತರ ಅನುದಾನ ನೀಡಲಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ ₹2800 ಕೋಟಿ ಯೋಜನಾ ಅನುದಾನ ನೀಡಲು ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು.

‘ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮವಾಗಿ ಇಸ್ರೊ ಕೆಲಸ ಮಾಡಬೇಕಿದೆ. ಇದಕ್ಕೆ  ಹೆಚ್ಚಿನ ವೈಜ್ಞಾನಿಕ ಮಾನವ ಸಂಪನ್ಮೂಲ ಅಗತ್ಯ. ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗೂ ಒತ್ತು ನೀಡಬೇಕಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.