ADVERTISEMENT

ಮಾಸ್ತಿಗುಡಿ ದುರಂತ: ಮೃತರ ಕುಟುಂಬಕ್ಕೆ ₹5.25 ಲಕ್ಷ ಸಹಾಯಧನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2016, 19:42 IST
Last Updated 2 ಡಿಸೆಂಬರ್ 2016, 19:42 IST
ಅನಿಲ್‌ ಸಹೋದರ ಶ್ರೀಕಾಂತ್‌ (ಎಡದಿಂದ ಮೂರನೆಯವರು) ಹಾಗೂ ಉದಯ್‌ ತಂದೆ ವೆಂಕಟೇಶ್‌ (ಎಡದಿಂದ ನಾಲ್ಕನೆಯವರು) ಅವರಿಗೆ ನಟ ಅಂಬರೀಷ್‌ ಚೆಕ್‌ ಹಸ್ತಾಂತರಿಸಿದರು. ನಿರ್ಮಾಪಕ ಪದ್ಮನಾಭ್ ಹಾಗೂ ಏಷ್ಯಾನೆಟ್‌ ಕಮ್ಯೂನಿಕೇಷನ್‌ ಲಿಮಿಟೆಡ್‌ನ ಕಾರ್ಯಕಾರಿ ನಿರ್ದೇಶಕ ಸಂಜಯ್‌ ಪ್ರಭು ಇದ್ದರು –ಪ್ರಜಾವಾಣಿ ಚಿತ್ರ
ಅನಿಲ್‌ ಸಹೋದರ ಶ್ರೀಕಾಂತ್‌ (ಎಡದಿಂದ ಮೂರನೆಯವರು) ಹಾಗೂ ಉದಯ್‌ ತಂದೆ ವೆಂಕಟೇಶ್‌ (ಎಡದಿಂದ ನಾಲ್ಕನೆಯವರು) ಅವರಿಗೆ ನಟ ಅಂಬರೀಷ್‌ ಚೆಕ್‌ ಹಸ್ತಾಂತರಿಸಿದರು. ನಿರ್ಮಾಪಕ ಪದ್ಮನಾಭ್ ಹಾಗೂ ಏಷ್ಯಾನೆಟ್‌ ಕಮ್ಯೂನಿಕೇಷನ್‌ ಲಿಮಿಟೆಡ್‌ನ ಕಾರ್ಯಕಾರಿ ನಿರ್ದೇಶಕ ಸಂಜಯ್‌ ಪ್ರಭು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ದುನಿಯಾ ವಿಜಯ್‌ ನಟನೆಯ ‘ಮಾಸ್ತಿಗುಡಿ’ ಚಿತ್ರದ ಕೊನೆಯ ಹಂತದ ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಇಬ್ಬರು ಕಲಾವಿದರ ಕುಟುಂಬಕ್ಕೆ ತಲಾ ₹5.25 ಲಕ್ಷ ಸಹಾಯಧನವನ್ನು ವಿತರಣೆ ಮಾಡಲಾಯಿತು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು ನೀಡಿದ ₹5 ಲಕ್ಷ ಹಾಗೂ ಜಾನ್ ಜಾನಿ ಜನಾರ್ಧನ್ ಸಿನಿಮಾ ನಿರ್ಮಾಪಕ ಪದ್ಮನಾಭ ಅವರು ನೀಡಿದ ₹25 ಸಾವಿರದ ಚೆಕ್‌ ಅನ್ನು ಉದಯ್‌ ತಂದೆ ವೆಂಕಟೇಶ್‌ ಮತ್ತು ಅನಿಲ್‌ ಸಹೋದರ ಶ್ರೀಕಾಂತ್‌ ಅವರಿಗೆ ನೀಡಿಲಾಯಿತು. ಹಣದ ಚೆಕ್‌ ಅನ್ನು ನಟ ಅಂಬರೀಷ್‌ ಹಸ್ತಾಂತರಿಸಿದರು.

ವೇತನ ಪರಿಷ್ಕರಣೆ: ಇದೇ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ ಮಧ್ಯೆ ಆದ ವೇತನ ಪರಿಷ್ಕರಣೆ ಸೇರಿ ಇತರೆ ಕರಾರು ಒಪ್ಪಂದಗಳ ಪುಸ್ತಕವನ್ನು ಅಂಬರೀಶ್‌ ಬಿಡುಗಡೆ ಮಾಡಿದರು.

ADVERTISEMENT

‘ಪ್ರತಿ ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತದೆ. ನಿರ್ಮಾಣ ಸಹಾಯಕರು, ಸೆಟ್‌ ಸಹಾಯಕರು, ವಾಹನ ಚಾಲಕರ ಭತ್ಯೆ,  ಸಾಹಸ ಕಲಾವಿದರ ಭತ್ಯೆ ಸೇರಿದಂತೆ ಚಿತ್ರೀಕರಣಕ್ಕೆ ನೆರವಾಗುವ ಎಲ್ಲರ ವೇತನ ಪರಿಷ್ಕರಣೆ ಮಾಡಲಾಗಿದೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು.

ನೋಟಿಸ್‌ ಜಾರಿಗೆ  ಆದೇಶ
ಬೆಂಗಳೂರು:  ‘ಮಾಸ್ತಿಗುಡಿ’ ಚಲನಚಿತ್ರದ ಚಿತ್ರೀಕರಣದ ವೇಳೆ ಸಾಹಸ ಕಲಾವಿದರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸಾಹಸ ನಿರ್ದೇಶಕ ರವಿವರ್ಮ ಮತ್ತು ನಿರ್ದೇಶಕ ನಾಗಶೇಖರ್‌ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಈ ಅರ್ಜಿಗಳನ್ನು  ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿ ಪ್ರತಿವಾದಿಗಳಾದ ತಾವರೆಕೆರೆ ಪೊಲೀಸ್ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದೆ. ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

‘ಸಾಹಸ ದೃಶ್ಯದಲ್ಲಿ ಈ ಇಬ್ಬರೂ ಮೃತಪಟ್ಟಿದ್ದಾರೆ. ಚಿತ್ರೀಕರಣಕ್ಕೂ ಮುನ್ನ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿ ರವಿವರ್ಮ, ನಿರ್ದೇಶಕ ನಾಗಶೇಖರ್, ನಿರ್ಮಾಪಕ ಸಂದೇಶ ಗೌಡ, ಯುನಿಟ್‌ ಮ್ಯಾನೇಜರ್ ಭರತ್‌ರಾವ್‌ ಹಾಗೂ ಸಹ ನಿರ್ದೇಶಕ ಸಿದ್ದು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆ ಕಲಂ 304 ಅಡಿ (ಉದ್ದೇಶಪೂರ್ವಕವಲ್ಲದ ಕೊಲೆ ಆರೋಪ) ಆರೋಪ ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.