ADVERTISEMENT

ಮಾ 10ರಿಂದ ಪೆಟ್ರೋಲ್‌ ವಿತರಕರ ಮುಷ್ಕರ

ಕಮಿಷನ್‌ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 20:01 IST
Last Updated 2 ಮಾರ್ಚ್ 2015, 20:01 IST

ಬೆಂಗಳೂರು: ಕಮಿಷನ್ ಪ್ರಮಾಣ  ಹೆಚ್ಚಿಸುವಂತೆ ಆಗ್ರಹಿಸಿ ಭಾರತ ಪೆಟ್ರೋಲ್ ವಿತರಕರ ಒಕ್ಕೂಟವು (ಸಿಐಪಿಡಿ) ಮಾ.10ರಂದು ದೇಶವ್ಯಾಪಿ ಬಂಕ್‌ಗಳ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ತೈಲ ಕಂಪೆನಿಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಖರೀದಿ ಮಾಡದಿರಲು ಹಾಗೂ ವಹಿವಾಟು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 

‘ತೈಲ ಕಂಪೆನಿಗಳು ಪ್ರತಿ ಆರು ತಿಂಗಳಿಗೊಮ್ಮೆ ಕಮಿಷನ್‌ ಪ್ರಮಾಣವನ್ನು ಪರಿಷ್ಕರಿಸಬೇಕು. ಆದರೆ, ಎರಡು ವರ್ಷಗಳಿಂದ ಕಮಿಷನ್‌ ಪರಿಷ್ಕರಣೆಯಾಗಿಲ್ಲ’ ಎಂದು ಬೆಂಗಳೂರು ಪೆಟ್ರೋಲ್ ವಿತರಕರ ಸಂಘದ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ ಪೆಟ್ರೋಲ್‌ಗೆ ₹2 ಮತ್ತು ಡೀಸೆಲ್‌ಗೆ ₹ 1 ಕಮಿಷನ್‌ ನೀಡಲಾಗುತ್ತಿದೆ. ಆ ಪ್ರಮಾಣವನ್ನು  ಶೇ 5ರಷ್ಟು ಹೆಚ್ಚಿಸಬೇಕೆಂದು ಒತ್ತಾಯಿಸಿ  ಸಿಐಪಿಡಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮುಷ್ಕರ ಬೆಂಬಲಿಸಿ ಮಾ.10ರಂದು ತೈಲ ಕಂಪೆನಿಗಳಿಂದ ಪೆಟ್ರೋಲ್ ಹಾಗೂ ಡೀಸೆಲ್‌ ಖರೀದಿಸದಿರಲು ನಿರ್ಧರಿಸಲಾಗಿದೆ.

ಜತೆಗೆ ಮಾ.16ರಂದು ನಗರದ ಒಳಭಾಗದ ಬಂಕ್‌ಗಳಲ್ಲಿ ರಾತ್ರಿ ಪಾಳಿಯ  (ಸಂಜೆ 7ರಿಂದ ಬೆಳಿಗ್ಗೆ 7 ಗಂಟೆವರೆಗೆ) ವಹಿವಾಟು ಸ್ಥಗಿತಗೊಳಿಸಲಾಗುತ್ತದೆ. ನಗರದ ಹೊರ ಭಾಗದ ಬಂಕ್‌ಗಳಲ್ಲಿ ಬೆಳಗಿನ ಪಾಳಿಯಲ್ಲಿ (ಬೆಳಿಗ್ಗೆ 7ರಿಂದ ಸಂಜೆ 7ಗಂಟೆವರೆಗೆ) ವಹಿವಾಟು ನಿಲ್ಲಿಸುತ್ತೇವೆ. ಬೇಡಿಕೆ ಈಡೇರುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ರವೀಂದ್ರನಾಥ್‌  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.