ADVERTISEMENT

ಮುಲಾಜಿಲ್ಲದೆ ತೆರವುಗೊಳಿಸಿ–ಹೈಕೋರ್ಟ್

ಪಾದಚಾರಿ ಮಾರ್ಗ ಒತ್ತುವರಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:34 IST
Last Updated 25 ನವೆಂಬರ್ 2014, 19:34 IST
ಮುಲಾಜಿಲ್ಲದೆ ತೆರವುಗೊಳಿಸಿ–ಹೈಕೋರ್ಟ್
ಮುಲಾಜಿಲ್ಲದೆ ತೆರವುಗೊಳಿಸಿ–ಹೈಕೋರ್ಟ್   

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಗೊಳಿಸಿ’ ಎಂದು ಹೈಕೋರ್ಟ್ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿದೆ.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಸಂಬಂಧ ‘ನಮ್ಮ ಬೆಂಗಳೂರು ಫೌಂಡೇಶನ್’ ಸಲ್ಲಿಸಿ­ರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ಮುಂದುವರಿಸಿತು.
‘ಒತ್ತುವರಿ ತೆರವಿಗೆ ವಿರೋಧ ಕಂಡು ಬಂದಲ್ಲಿ ಪೊಲೀಸರ ನೆರವು ಪಡೆಯಿರಿ. ರಾಜಕಾರಣಿಗಳ ಒತ್ತಡ ಬಂದರೆ ನೋಟಿಸ್ ನೀಡದೆಯೇ ಕಾರ್ಯಾ­ಚರಣೆ ನಡೆಸಿ’ ಎಂದು ಪೀಠವು ತಾಕೀತು ಮಾಡಿತು.

ನಾಲ್ವರು ಎಂಜಿನಿಯರ್ ಅಮಾನತು: ‘ಚರಂಡಿಯಲ್ಲಿ ಕೊಚ್ಚಿ ಹೋದ 9 ವರ್ಷದ ಬಾಲಕಿ ಗೀತಾಲಕ್ಷ್ಮೀ ಸಾವಿಗೆ ಸಂಬಂಧಿಸಿದಂತೆ ನಾಲ್ವರು ಎಂಜಿನಿಯರ್‌ ಗಳನ್ನು ಅಮಾನತು ಮಾಡಲಾಗಿದೆ’ ಎಂದು ಬಿಬಿಎಂಪಿ ಪರ ವಕೀಲರು ಇದೇ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

2014ರ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿ ಬಳಿ ಕಾಲುಜಾರಿ ಚರಂಡಿಗೆ ಬಿದ್ದಿದ್ದ ಬಾಲಕಿ ಗೀತಾ ಲಕ್ಷ್ಮೀ ಶವ ಎರಡು ದಿನಗಳ ನಂತರ ಪತ್ತೆಯಾಗಿತ್ತು. ಮಡಿವಾಳ ಕೆರೆಯ ಬಳಿಯ ರಾಜಕಾಲುವೆಯಲ್ಲಿ ಈಕೆಯ ಶವ ಪತ್ತೆಯಾಗಿತ್ತು. ಹತ್ತು ಅಡಿ ಆಳದಲ್ಲಿ ಸಿಲುಕಿದ್ದ ಶವವನ್ನು ಹೊರತೆಗೆಯಲಾಗಿತ್ತು.

ಕೆಎಂಎಫ್: ಅಮಾನತು ಆದೇಶ ವಾಪಸು
ಬೆಂಗಳೂರು:
  ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಐ.ಆರ್.ರಾಮಲಿಂಗಾ ರೆಡ್ಡಿ ಅವರ ಅಮಾನತು ಆದೇಶವನ್ನು ಕೆಎಂಎಫ್ ಒಂದು ವಾರದಲ್ಲಿ  ಹಿಂಪಡೆಯಲಿದೆ.

ಈ ಸಂಬಂಧ  ಕೆಎಂಎಫ್ ಪರ ವಕೀಲರು ಮಂಗಳವಾರ ಹೈಕೋರ್ಟಿಗೆ ಲಿಖಿತ ವಿವರ ನೀಡಿದರು.  ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠಕ್ಕೆ ಈ ಕುರಿತ  ವಿವರಣೆಯನ್ನು ಸಲ್ಲಿಸಲಾಯಿತು.

2011ರಲ್ಲಿ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಮಲಿಂಗೇಗೌಡ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಮಲಿಂಗೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT