ADVERTISEMENT

ಮುಷ್ಕರ: ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ಶೇ. 25ರಷ್ಟು ಹೆಚ್ಚುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 19:44 IST
Last Updated 1 ಸೆಪ್ಟೆಂಬರ್ 2015, 19:44 IST

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಬುಧವಾರ ಮುಷ್ಕರಕ್ಕೆ ಕರೆ ನೀಡಿದ್ದರೂ ರಾಜಧಾನಿಯಲ್ಲಿ ಮೆಟ್ರೊ ಸಂಚಾರ ಇರಲಿದೆ. ಪ್ರತಿದಿನ ಸುಮಾರು 70 ಸಾವಿರ ಮಂದಿ ಮೆಟ್ರೊದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಬುಧವಾರ ಪ್ರಯಾಣಿಕರ ಸಂಖ್ಯೆ ಶೇ 25ರಷ್ಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ವ್ಯವಸ್ಥಾಪಕ ವಸಂತ ರಾವ್‌ ತಿಳಿಸಿದರು. ಎಸ್‌ಎಫ್‌ಐ, ಎಐಡಿಎಸ್‌ಒ ಸೇರಿದಂತೆ ಕೆಲವು ವಿದ್ಯಾರ್ಥಿ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದು, ಕಾಲೇಜುಗಳಿಗೆ ರಜೆ ಘೋಷಿಸಬೇಕು ಎಂದು ಆಗ್ರಹಿಸಿ  ಸಂಘಗಳ ಕಾರ್ಯಕರ್ತರು ನಗರದ ಕೆಲವು ಕಾಲೇಜುಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದರು.

ಅಂಗಡಿ ಮುಚ್ಚಿಸಿದರೆ ಕ್ರಮ: ‘ಬಂದ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ.  ನಗರದ ಅಷ್ಟೂ ಪೊಲೀಸರ ಜತೆಗೆ 15 ಕೆಎಸ್‌ಆರ್‌ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗುವುದು.

ಬಲವಂತವಾಗಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್  ತಿಳಿಸಿದರು. ‘ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಬಸ್‌ ಹಾಗೂ ಆಟೊಗಳು ಮುಷ್ಕರಕ್ಕೆ ಬೆಂಬಲ ಘೋಷಿಸಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರಲಿದ್ದು, ಅಘೋಷಿತ ರಜೆಯ ವಾತಾವರಣ ಇರಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಂಜೆ ಬಳಿಕ ಸಹಜ ಸ್ಥಿತಿ ಸಾಧ್ಯತೆ: ಸಾಮಾನ್ಯವಾಗಿ ಬಂದ್‌ ದಿನ ಸಂಜೆ ಬಳಿಕ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತದೆ. ಬುಧವಾರ ಸಹ ಸಂಜೆ ನಂತರ ವೇಳಾಪಟ್ಟಿ ಪರಿಷ್ಕರಿಸಿ ಬಸ್‌ ಸೇವೆ ಆರಂಭಿಸಲು ಯೋಜಿಸಲಾಗಿದೆ. ಆದರೆ, ಉಳಿದ ದಿನಕ್ಕಿಂತ ಇವುಗಳ ಸಂಖ್ಯೆ ಕಡಿಮೆ ಇರಲಿದೆ ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ತಿಳಿಸಿದರು.

ಟಿಕೆಟ್‌ ಹಣ ಮರುಪಾವತಿ: ಒಂದು ವೇಳೆ ಮುಷ್ಕರದಿಂದ ಬಸ್‌ ಗಳ ಸೇವೆ ಸ್ಥಗಿತಗೊಂಡರೆ ಪ್ರಯಾಣಿಕರಿಗೆ ಟಿಕೆಟ್‌ ಮೊತ್ತವನ್ನು ಮರುಪಾವತಿ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

*
ಸ್ವಯಂ ಪ್ರೇರಿತರಾಗಿ ಬಂದ್‌ ನಡೆಸಿದರೆ ಯಾವುದೇ ತೊಂದರೆ ಇಲ್ಲ. ಆದರೆ, ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ
-ಕೆ.ಜೆ. ಜಾರ್ಜ್‌,
ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.