ADVERTISEMENT

ಮೂತ್ರಪಿಂಡದ ಕಸಿಗೆ ಕೋರಿ ಹೈಕೋರ್ಟ್ ಮೊರೆ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:04 IST
Last Updated 12 ಏಪ್ರಿಲ್ 2018, 19:04 IST
ಮೂತ್ರಪಿಂಡದ ಕಸಿಗೆ ಕೋರಿ ಹೈಕೋರ್ಟ್ ಮೊರೆ!
ಮೂತ್ರಪಿಂಡದ ಕಸಿಗೆ ಕೋರಿ ಹೈಕೋರ್ಟ್ ಮೊರೆ!   

ಬೆಂಗಳೂರು: ‘ರಾಜಕಾರಣಿಗಳು, ಪ್ರತಿಷ್ಠಿತರು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು 24 ಗಂಟೆ ಸಾಕು. ಆದರೆ, ಬಡ ರೈತನೊಬ್ಬ ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ಅನುಮತಿಗೆ ನಿರ್ದೇಶಿಸಿ ಎಂದು ಕೋರ್ಟ್‌ ಕಚೇರಿ ಅಲೆಯಬೇಕಲ್ಲಾ’ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

‘ಮೂತ್ರಪಿಂಡ ಕಸಿ ಮಾಡಿಸಿಕೊಳ್ಳಲು ನನಗೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರ
ರೊಬ್ಬರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಚೌಹಾಣ್‌, ‘ಸರ್ಕಾರ ಮನುಷ್ಯರ ಜೀವನವನ್ನು ಈ ರೀತಿ ತೂಗುಯ್ಯಾಲೆಯಲ್ಲಿ ಇಡುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ತಾಂತ್ರಿಕ ಅಂಶಗಳನ್ನೇ ಹಿಡಿದು ವರ್ತಿಸುವುದು ಸಲ್ಲದು. ಇವುಗಳನ್ನೆಲ್ಲಾ ತುಂಬಾ ಸೂಕ್ಷ್ಮವಾಗಿ ಪರಿಗಣಿಸ
ಬೇಕಾಗುತ್ತದೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರಿ ವಕೀಲ ಶ್ರೀನಿಧಿ, ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿದೆ.

ಪ್ರಕರಣವೇನು: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆ ಗ್ರಾಮದ 46 ವರ್ಷದ ಡಿ.ಕೆ.ರವಿಕುಮಾರ್‌ ಕಬ್ಬು ಬೆಳೆಗಾರ. ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿರುವ ಇವರಿಗೆ ಅದನ್ನು ನೀಡಲು ಸಂಬಂಧಿಯಾದ ಮೈಸೂರಿನ ಟಿ.ನರಸೀಪುರ ತಾಲ್ಲೂಕಿನ ತುರುಗನೂರು ಗ್ರಾಮದ 55 ವರ್ಷದ ಎಸ್.ಸಿ.ಗಿರಿಜಾ ಒಪ್ಪಿದ್ದರು. ಮೂತ್ರಪಿಂಡ ಕಸಿಗೆ ಅನುಮತಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು. ಆದರೆ ಅದನ್ನು ಇಲಾಖೆ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.