ADVERTISEMENT

ಮೆಜೆಸ್ಟಿಕ್‌ನಲ್ಲಿ ಚಾಕು ಖರೀದಿಸಿದ್ದ ಹಂತಕ

ವಕೀಲೆ ಜ್ಯೋತಿ ಕೊಲೆ ಪ್ರಕರಣ * ಗೆಳೆಯನ ಬಂಧನದಿಂದ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2016, 20:05 IST
Last Updated 21 ಡಿಸೆಂಬರ್ 2016, 20:05 IST
ವಕೀಲೆ ಜ್ಯೋತಿ
ವಕೀಲೆ ಜ್ಯೋತಿ   

ಬೆಂಗಳೂರು: ಪ್ರೇಯಸಿಯ ಕೊಲೆಗೈದು ಮಡಿಕೇರಿಯ ಲಾಡ್ಜ್‌ನಲ್ಲಿ ಅಡಗಿದ್ದ ಮಧು, ಕೃತ್ಯಕ್ಕೆ ಸಹಕರಿಸಿದ್ದ ಆತ್ಮೀಯ ಗೆಳೆಯ ಶಿವರಾಮಯ್ಯ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರಿಂದ ಬೇಸರಗೊಂಡು ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ.

ವಕೀಲೆ ಜ್ಯೋತಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಬಿಎಂಟಿಸಿ ಕಂಡೆಕ್ಟರ್‌ ಆದ ಆರೋಪಿ ಮಧು,  ವಿಚಾರಣೆ ವೇಳೆ ಈ ವಿಷಯ ಹೇಳಿದ್ದಾನೆ.

‘ಯಾವುದೇ ತಪ್ಪು ಮಾಡದ ಗೆಳೆಯ, ನನಗೆ ಸಹಾಯ ಮಾಡಲು ಬಂದು ತೊಂದರೆಗೆ ಸಿಲುಕಿದ. ಇದರಿಂದ ನೊಂದು ಆತ್ಮಹತ್ಯೆಗೆ ತೀರ್ಮಾನಿಸಿದ್ದೆ. ಆದರೆ, ಲಾಡ್ಜ್‌ ನೌಕರರು ಅದನ್ನು ತಪ್ಪಿಸಿದರು’ ಎಂದಿದ್ದಾನೆ.

‘ಮದುವೆಗೆ ನಿರಾಕರಿಸಿದ್ದ ಪ್ರೇಯಸಿಯನ್ನು ಅಪಹರಿಸಿ ಮಡಿಕೇರಿಗೆ ಕರೆದೊಯ್ಯಲು ನಿರ್ಧರಿಸಿದ್ದ ಮಧು, ಸ್ನೇಹಿತ ಶಿವರಾಮಯ್ಯನ ನೆರವು ಕೋರಿದ್ದ. ಅದಕ್ಕೆ ಒಪ್ಪಿಕೊಂಡ ಆತ, ನಾಲ್ಕು ತಿಂಗಳ ಹಿಂದಷ್ಟೇ ಖರೀದಿಸಿದ್ದ ತನ್ನ ಕಾರನ್ನು ಕೃತ್ಯಕ್ಕೆ ತಂದಿದ್ದ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಧು ಹೇಳಿಕೆ: ‘ಕನಕಪುರದ ಕಾಲೇಜಿನಲ್ಲಿ ಓದುತ್ತಿದ್ದಾಗ ಜ್ಯೋತಿಯ ಪರಿಚಯವಾಗಿತ್ತು. ನಂತರ ಪ್ರೀತಿ ಬೆಳೆಯಿತು. ಈ ವಿಚಾರ ತಿಳಿದ ಆಕೆಯ ಪೋಷಕರು, ಸೋದರ ಸಂಬಂಧಿ ಬಸವರಾಜು ಎಂಬಾತನ ಜತೆ ಆಕೆಯ ವಿವಾಹ ಮಾಡಿದರು. ಆದರೆ, ಕೆಲವೇ ದಿನಗಳಲ್ಲಿ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಪತಿಗೆ ವಿಚ್ಛೇದನ ನೀಡಿದಳು’ ಎಂದು ಮಧು ವಿಚಾರಣೆ ವೇಳೆ ಹೇಳಿದ್ದಾನೆ.

‘ಪತಿಯಿಂದ ಪ್ರತ್ಯೇಕವಾದ ಬಳಿಕ ಪುನಃ ನನ್ನ ಬಳಿ ಬಂದ ಜ್ಯೋತಿ, ಕಾನೂನು ಪದವಿ ಮಾಡುವ ಇಚ್ಛೆ ವ್ಯಕ್ತಪಡಿಸಿದಳು. ನಾನೇ ಬೆಂಗಳೂರಿಗೆ ಕರೆದುಕೊಂಡು ಬಂದು ಕಾಲೇಜಿಗೆ ಸೇರಿಸಿದ್ದೆ. ವಸತಿ ವ್ಯವಸ್ಥೆಯನ್ನು ಮಾಡಿಕೊಟ್ಟೆ. ಆಕೆಗೆ ಈವರೆಗೆ ಸುಮಾರು ₹ 7 ಲಕ್ಷ ಖರ್ಚು ಮಾಡಿದ್ದೇನೆ. ಆದರೆ, ಪದವಿ ಮುಗಿದ ಬಳಿಕ ಜ್ಯೋತಿ ನನಗೆ ಮೋಸ ಮಾಡಿದಳು.’

‘ಇತ್ತೀಚೆಗೆ ಬೇರೊಬ್ಬ ಯುವಕನ ಜತೆ ಸುತ್ತಾಡಲು ಆರಂಭಿಸಿದ್ದಳು. ಆತನ ಜತೆ ಮಾತನಾಡುವುದಕ್ಕಾಗಿಯೇ ಪ್ರತ್ಯೇಕ ಸಿಮ್‌ ಕಾರ್ಡ್‌ ಇಟ್ಟುಕೊಂಡಿದ್ದಳು. ಆ ಸಂಖ್ಯೆಯನ್ನು ನನಗೆ ಕೊಟ್ಟಿರಲಿಲ್ಲ. ಎರಡು ತಿಂಗಳ ಹಿಂದೆ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದಾಗ ಆತನ ಜತೆ ತೆಗೆಸಿಕೊಂಡಿದ್ದ ಫೋಟೊಗಳಿದ್ದವು. ಆ ಹುಡಗನಿಗೆ ಹಲವಾರು ಸಂದೇಶಗಳನ್ನೂ ಕಳುಹಿಸಿದ್ದಳು. ಅದನ್ನು ಸಹಿಸಿಕೊಳ್ಳಲು ಆಗದೆ ಗಲಾಟೆ ಮಾಡಿದ್ದೆ.

‘ಹೇಗಿದ್ದರೂ ವ್ಯಾಸಂಗ ಮುಗಿದಿದೆ. ಮದುವೆ ಆಗೋಣವೆಂದಾಗ ತಾನು ಯಾವುದೇ ಕಾರಣಕ್ಕೂ ಇನ್ನೊಂದು ವಿವಾಹ ಆಗುವುದಿಲ್ಲ ಎಂದಳು. ಇದರಿಂದ ಕೋಪಗೊಂಡು ಅಪಹರಣ ಮಾಡಲು ನಿರ್ಧರಿಸಿದ್ದೆ. ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದು, ಮಾತುಕತೆ ಮೂಲಕ ಮದುವೆಗೆ ಒಪ್ಪಿಸಬೇಕೆಂದು ತೀರ್ಮಾನಿಸಿದ್ದೆ’  ಎಂದು ಮಧು ಹೇಳಿದ್ದಾನೆ. 

‘ಮೆಜೆಸ್ಟಿಕ್‌ನಲ್ಲಿ ಚಾಕು ಖರೀದಿಸಿದ್ದೆ’: ‘ಜ್ಯೋತಿಯನ್ನು ಪುಸಲಾಯಿಸಿ ಕಾರು ಹತ್ತಿಸಿಕೊಳ್ಳಲು ನಿರ್ಧರಿಸಿದ್ದೆ. ಕಾರಿನಲ್ಲಿ ಕೂರಲು ಒಪ್ಪದಿದ್ದರೆ ಕತ್ತು ಕೊಯ್ದುಕೊಳ್ಳುವುದಾಗಿ ಬೆದರಿಸಬೇಕೆಂದು ಮೆಜೆಸ್ಟಿಕ್‌ ಸಮೀಪದ ಅಂಗಡಿಯೊಂದರಲ್ಲಿ ₹ 20 ಕೊಟ್ಟು ಚಾಕು ಖರೀದಿಸಿದ್ದೆ.’ ‘ಡಿ.17ರ ಸಂಜೆ 6 ಗಂಟೆಗೆ ಸ್ನೇಹಿತನ ಜತೆ ಕಾರಿನಲ್ಲಿ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ತೆರಳಿದ ನಾನು, ಕೆಲಸ ಮುಗಿಸಿಕೊಂಡು ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ತೆರಳುತ್ತಿದ್ದ ಜ್ಯೋತಿಯನ್ನು ಅಡ್ಡಗಟ್ಟಿದೆ. ಆಕೆ ಕಾರು ಹತ್ತಲು ನಿರಾಕರಿಸಿದಳು. ಕೈ ಹಿಡಿದು ಒಳಗೆ ಎಳೆದುಕೊಳ್ಳಲು ಮುಂದಾದಾಗ ಚೀರಿಕೊಂಡಳು.

‘ಜನ ಆಕೆಯ ನೆರವಿಗೆ ಬರುತ್ತಿದ್ದಂತೆಯೇ ಪರಾರಿಯಾಗಲು ಯತ್ನಿಸಿದೆವು. ಆದರೆ, ಆಕೆ ನನ್ನನ್ನು ಜನರ ವಶಕ್ಕೆ ಒಪ್ಪಿಸುವ ಸಲುವಾಗಿ ಬಿಗಿಯಾಗಿ ಕೈ ಹಿಡಿದುಕೊಂಡಳು. ತಪ್ಪಿಸಿಕೊಳ್ಳುವ ಆತುರದಲ್ಲಿ ಚಾಕುವಿನಿಂದ ಕುತ್ತಿಗೆಗೆ ಹೊಡೆದು ಓಡಿ ಹೋದೆ. ಈ ಹಂತದಲ್ಲಿ ಸ್ನೇಹಿತ ಅಲ್ಲೇ ಕಾರು ಬಿಟ್ಟು ಮತ್ತೊಂದು ರಸ್ತೆಯಲ್ಲಿ ಓಡಿದ.’

‘ಮರುದಿನ ಬೆಳಗಿನ ಜಾವವೇ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಮಡಿಕೇರಿಗೆ ತೆರಳಿದೆ. ಅಲ್ಲಿ, ಹಿಂದೆಲ್ಲ ಜ್ಯೋತಿ ಜತೆ ಉಳಿದುಕೊಂಡಿದ್ದ ಲಾಡ್ಜ್‌ನಲ್ಲೇ ಕೊಠಡಿ ಬಾಡಿಗೆ ಪಡೆದೆ. ಆಕೆ ಸಾವನ್ನಪ್ಪಿರುವ ಹಾಗೂ ಗೆಳೆಯ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ವಿಷಯಗಳು ಅಲ್ಲಿಯವರೆಗೂ ನನಗೆ ಗೊತ್ತಿರಲಿಲ್ಲ. ಲಾಡ್ಜ್‌ನಲ್ಲಿ ಟಿ.ವಿ ಚಾಲೂ ಮಾಡಿದಾಗ ಆ ಸುದ್ದಿ ನೋಡಿ ಆಘಾತವಾಯಿತು’ ಎಂದು ಮಧು ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಎಚ್ಚೆತ್ತ ಲಾಡ್ಜ್‌ ನೌಕರ
ಮಧು ಕೊಠಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರಿಂದ ಅನುಮಾನಗೊಂಡ ಲಾಡ್ಜ್‌ ನೌಕರ, ಆ ವಿಷಯವನ್ನು ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾನೆ. ಕೂಡಲೇ ಅವರು ಕೊಠಡಿಗೆ ತೆರಳಿ ಮಧುನನ್ನು ವಿಚಾರಿಸಿದ್ದಾರೆ. ಆಗ ಆತ, ‘ಜೀವನ ಬೇಸರವಾಗಿದೆ. ಬದುಕಲು ಇಷ್ಟವಿಲ್ಲ’ ಎಂದಿದ್ದಾನೆ.

ಇದರಿಂದ ಹೆದರಿದ ಲಾಡ್ಜ್‌ ವ್ಯವಸ್ಥಾಪಕ, ಸ್ಥಳೀಯ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಮಧುನನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಪ್ರೇಯಸಿಯನ್ನು ಕೊಲೆ ಮಾಡಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೆ ಅವರು ಆರೋಪಿಯನ್ನು ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ADVERTISEMENT

ವಕೀಲೆ ಜ್ಯೋತಿ ಕೊಲೆ ಪ್ರಕರಣ ವಕಾಲತ್ತು ವಹಿಸದಂತೆ ಮನವಿ
ವಕೀಲೆ ಜ್ಯೋತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ  ಪರವಾಗಿ ವಕೀಲರು ವಕಾಲತ್ತು ವಹಿಸಬಾರದು ಎಂದು ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ ಕೋರಿದ್ದಾರೆ.                        

‘ವಕೀಲರಿಗೇ ಈ ಗತಿ ಬಂದೊದಗಿದರೆ ಸಾಮಾನ್ಯರ ಪಾಡೇನು’ ಎಂದು ಪ್ರಶ್ನಿಸಿರುವ ಅವರು, ಅಪರಾಧಿಗಳಲ್ಲಿ ಕಾನೂನಿನ ಭಯ ಇಲ್ಲದಂತಾಗಿದೆ. ಆದ್ದರಿಂದ ವಕೀಲರು ಈ ಪ್ರಕರಣದಲ್ಲಿ ಆರೋಪಿಗಳ ಪರ ಕೋರ್ಟ್‌ಗೆ ಹಾಜರಾಗಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.