ADVERTISEMENT

ಮೆಟ್ರೊ: ಇಂದಿನಿಂದ ಬೆಳಿಗ್ಗೆ 5ರಿಂದ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:04 IST
Last Updated 30 ನವೆಂಬರ್ 2015, 20:04 IST

ಬೆಂಗಳೂರು: ಸಂಪಿಗೆ ರಸ್ತೆ ಮತ್ತು ನಾಗಸಂದ್ರ (ಹೆಸರಘಟ್ಟ ಕ್ರಾಸ್‌) ನಡುವಣ 13 ಕಿ.ಮೀ ಉದ್ದದ ಮಾರ್ಗದಲ್ಲಿ ಮಂಗಳವಾರದಿಂದ ( ಡಿ. 1) ಬೆಳಿಗ್ಗೆ 5ರಿಂದಲೇ ಸಂಚಾರ ಆರಂಭಿಸುವ ಮೆಟ್ರೊ ರೈಲುಗಳು ರಾತ್ರಿ 11ರವರೆಗೆ ಓಡಾಡಲಿವೆ.

ಸದ್ಯ ಈ ಮಾರ್ಗದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ರೈಲು ಸಂಚಾರ ಇತ್ತು. ಕೈಗಾರಿಕೆಗಳ ಸಂಘ ಮತ್ತು ಪ್ರಯಾಣಿಕರ ಮನವಿ ಮೇರೆಗೆ ರೈಲು ಸಂಚಾರ ಅವಧಿಯನ್ನು ಎರಡು ಗಂಟೆಗಳಷ್ಟು ವಿಸ್ತರಿಸಲಾಗಿದೆ.

ಪೀಣ್ಯದ ಸುತ್ತಮುತ್ತಲ ಬಡಾವಣೆಗಳಿಗೆ ನಿವಾಸಿಗಳಿಗೆ ಅನುಕೂಲವಾಗಲು ಬಿಎಂಟಿಸಿ ಫೀಡರ್‌ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.  ಮಂಗಳವಾರದಿಂದ ಬೆಳಿಗ್ಗೆ 5ರಿಂದ 6ರ ವರೆಗೆ ನಾಲ್ಕು ಬಸ್‌ಗಳು ಹಾಗೂ ರಾತ್ರಿ 10ರಿಂದ 11ರ ವರೆಗೆ ನಾಲ್ಕು ಬಸ್‌ಗಳ ವ್ಯವಸ್ಥೆ ಮಾಡಲಾಗುವುದು. ಪ್ರಯಾಣಿಕರ ದಟ್ಟಣೆ ಹೆಚ್ಚಾದರೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಬಿ.ಸಿ. ರೇಣುಕೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊನೆಯ ಮೈಲಿಯ ಸಂಪರ್ಕಕ್ಕೆ ಸಹಾಯವಾಗಲು ಪೀಣ್ಯ ಇಂಡಸ್ಟ್ರಿ ಮೆಟ್ರೊ ನಿಲ್ದಾಣ, ಜಾಲಹಳ್ಳಿ ಕ್ರಾಸ್‌, ಟಿವಿಎಸ್‌ ಕ್ರಾಸ್‌, ಎನ್‌ಟಿಟಿಎಫ್‌, 14ನೇ ಕ್ರಾಸ್, ಪೀಣ್ಯ 2ನೇ ಹಂತ ಮಾರ್ಗಗಳಲ್ಲಿ ಬಸ್‌ ಓಡಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಾಯೋಗಿಕ ವೇಳಾಪಟ್ಟಿ: ‘ಎರಡು ತಿಂಗಳ ಅವಧಿವರೆಗೆ ಪ್ರಾಯೋಗಿಕವಾಗಿ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ಯಶಸ್ಸು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ.

‘ಈ ಮಾರ್ಗದಲ್ಲಿ ಬೆಳಿಗ್ಗೆ 5ರಿಂದ 8ರವರೆಗೆ ಮತ್ತು ರಾತ್ರಿ 8ರಿಂದ 11ರವರೆಗೆ ಪ್ರತಿ 15 ನಿಮಿಷಗಳಿಗೆ ಒಂದರಂತೆ ಹಾಗೂ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಪ್ರತಿ 10 ನಿಮಿಷಗಳಿಗೆ ಒಂದರಂತೆ ರೈಲು ಸಂಚಾರ ಇರಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಸಂಚಾರದ ಅಂತರವನ್ನು ಕಡಿಮೆ ಮಾಡಲಾಗುವುದು’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ರೀಚ್‌1, 2ರಲ್ಲಿ ಯಥಾಸ್ಥಿತಿ
ಬೈಯಪ್ಪನಹಳ್ಳಿ– ಎಂ.ಜಿ.ರಸ್ತೆ (ರೀಚ್‌– 1) ಹಾಗೂ ಮಾಗಡಿ ರಸ್ತೆ– ಮೈಸೂರು ರಸ್ತೆ (ರೀಚ್‌– 2) ಮಾರ್ಗಗಳಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ರೈಲು ಸಂಚಾರ ಇರಲಿದೆ. ಸುರಂಗ ಮಾರ್ಗದಲ್ಲಿ ರೈಲಿನ ಪರೀಕ್ಷಾರ್ಥ ಸಂಚಾರ ನಡೆಸುವ ಸಲುವಾಗಿ ಈ ಮಾರ್ಗಗಳಲ್ಲಿ ಬೆಳಿಗ್ಗೆ ಮತ್ತು ರಾತ್ರಿ– ಒಟ್ಟು ನಾಲ್ಕು ಗಂಟೆಗಳ ಕಾಲ ಸಂಚಾರವನ್ನು ಬಂದ್‌ ಮಾಡಲಾಗಿತ್ತು.

ಮಿನಿ ಬಸ್‌ ಆರಂಭಕ್ಕೆ ಆಗ್ರಹ
ಮೆಟ್ರೊ ಪ್ರಯಾಣಿಕರ ಅನುಕೂಲಕ್ಕಾಗಿ ಎಂ.ಜಿ. ರಸ್ತೆ ನಿಲ್ದಾಣ ಹಾಗೂ ಸಂಪಿಗೆ ರಸ್ತೆ ನಡುವೆ ಮಿನಿ ಬಸ್‌ಗಳ ಸೇವೆ ಆರಂಭಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಪ್ರಯಾಣಿಕರು ಈಗ ಶಿವಾಜಿನಗರ ಬಸ್‌ ನಿಲ್ದಾಣದ ಮೂಲಕ ಸಂಚಾರ ಮಾಡುತ್ತಿದ್ದಾರೆ. ಕೆಲವರು ಆಟೊ ಮೊರೆ  ಹೋಗಿದ್ದಾರೆ. ಇದು ತ್ರಾಸದಾಯಕ. ಎಂ.ಜಿ. ರಸ್ತೆ ಹಾಗೂ ಸಂಪಿಗೆ ರಸ್ತೆ ನಡುವೆ ಮಿನಿ ಬಸ್‌ ಓಡಿಸಿದರೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಾಕ್ಷ್ಯ ಒದಗಿಸಿದರೆ ವಾಚ್‌ ವಾಪಸ್‌
‘ಮಾಗಡಿ ರಸ್ತೆಯಲ್ಲಿ ಮೆಟ್ರೊ ಸಂಚಾರದ ಉದ್ಘಾಟನಾ ಸಮಾರಂಭದಲ್ಲಿ ನಾಪತ್ತೆಯಾಗಿದ್ದ ಕೈಗಡಿಯಾರವೊಂದು ನಿಗಮದ ಭದ್ರತಾ ಸಿಬ್ಬಂದಿಗೆ ಸಿಕ್ಕಿದೆ. ಅದನ್ನು ಕಳೆದುಕೊಂಡ ವ್ಯಕ್ತಿ ಸಾಕ್ಷ್ಯ ಒದಗಿಸಿದರೆ ವಾಚ್‌ ಮರಳಿಸಲಾಗುವುದು’ ಎಂದು ನಿಗಮದ ವಕ್ತಾರ ಯು.ಎ.ವಸಂತರಾವ್‌  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.