ADVERTISEMENT

ಮೆಟ್ರೊ: ಮೊದಲ ದಿನ ಲಕ್ಷ ಜನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 19:46 IST
Last Updated 30 ಏಪ್ರಿಲ್ 2016, 19:46 IST
ಸರದಿಯಲ್ಲಿ ಮೆಟ್ರೊ ರೈಲು ಹತ್ತುತ್ತಿರುವ ಪ್ರಯಾಣಿಕರು.
ಸರದಿಯಲ್ಲಿ ಮೆಟ್ರೊ ರೈಲು ಹತ್ತುತ್ತಿರುವ ಪ್ರಯಾಣಿಕರು.   

ಬೆಂಗಳೂರು: ನಗರದ ಮಾಗಡಿ ರಸ್ತೆ ಪ್ರವೇಶ ದ್ವಾರ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ನಡುವಿನ ‘ನಮ್ಮ ಮೆಟ್ರೊ’ದ ಸುರಂಗ ಮಾರ್ಗದಲ್ಲಿ ಮೊದಲ ದಿನ ರೈಲು ಸಂಚಾರದ ಪುಳಕವನ್ನು ಅನುಭವಿಸಿದವರು ಲಕ್ಷ ಜನ.

ಶಿಳ್ಳೆಯಂತಹ ಸದ್ದು ಮೊಳಗಿಸುತ್ತಾ 60 ಅಡಿ ಆಳದ ಸುರಂಗದೊಳಗೆ ಪ್ರವೇಶಿಸಿದ ರೈಲು ಪೊಟರೆಯನ್ನು ಹೊಕ್ಕ ಹಾವಿನಂತೆ  ಸರಸರನೇ ಸಾಗಿತು. ಇಡೀ ಸುರಂಗ ಸಂಚಾರಕ್ಕೆ ತೆಗೆದುಕೊಂಡಿದ್ದು 8 ರಿಂದ 9 ನಿಮಿಷ ಮಾತ್ರ. ರೈಲು ಸಾಗುತ್ತಿದ್ದ ವೇಗಕ್ಕೆ 6.5 ಮೀಟರ್‌ ವ್ಯಾಸದ ಗುಹೆಯಂತಿರುವ ಸುರಂಗದಲ್ಲಿ ವಿದ್ಯುತ್‌ ದೀಪಗಳು ಮಿಂಚುಹುಳದಂತೆ ಮಿಂಚಿ ಮಾಯವಾಗುತ್ತಿದ್ದವು.

ಸುರಂಗದೊಳಗೆ  ಮೆಟ್ರೊ ಸಾಗಿಬಂದ ಪರಿಯೂ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿತು. ರೈಲು ಹತ್ತಿ ಕಣ್ತೆರೆಯುವಷ್ಟರಲ್ಲಿ ರೈಲ್ವೆ ನಿಲ್ದಾಣ, ಕೆಂಪೇಗೌಡ ನಿಲ್ದಾಣ, ವಿಶ್ವೇಶ್ವರಯ್ಯ ನಿಲ್ದಾಣ, ಅಂಬೇಡ್ಕರ್‌ ವಿಧಾನಸೌಧ ನಿಲ್ದಾಣ, ಕಬ್ಬನ್‌ ಪಾರ್ಕ್‌  ಹೀಗೆ ಒಂದರ ಬಳಿಕ ಒಂದು ನಿಲ್ದಾಣಗಳು ಸಾಗಿ ಹೋಗಿದ್ದೇ ಪ್ರಯಾಣಿಕರಿಗೆ ತಿಳಿಯಲಿಲ್ಲ. ರೈಲು ಸುರಂಗದೊಳಗೆ ಸಾಗುವಾಗ ಬಹುತೇಕ ಪ್ರಯಾಣಿಕರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಉತ್ಸಾಹ ಎದ್ದು ಕಾಣುತ್ತಿತ್ತು.

4.8 ಕಿ.ಮೀ. ಉದ್ದದ ಸುರಂಗ ಮಾರ್ಗ ಶುಕ್ರವಾರವಷ್ಟೇ ಉದ್ಘಾಟನೆ ಆಗಿತ್ತು. ನಾಯಂಡಹಳ್ಳಿ ಜಂಕ್ಷನ್‌– ಎಂ.ಜಿ. ರಸ್ತೆ ಮಧ್ಯೆ ಪಯಣಿಸಿದವರ ಸಂಖ್ಯೆ ಕೂಡ ಹೆಚ್ಚಿತ್ತು. ಆದರೆ, ಸುರಂಗ ಪಯಣದ ಮೋಜು ಅನುಭವಿಸುವ ಹಂಬಲವೇ ಹೆಚ್ಚಾಗಿತ್ತು. ಉತ್ತರ–ಪಶ್ಚಿಮ ಕಾರಿಡಾರ್‌ನ ಎಂ.ಜಿ. ರಸ್ತೆ–ಬೈಯಪ್ಪನಹಳ್ಳಿ ಮತ್ತು ಮಾಗಡಿ ರಸ್ತೆ– ಮೈಸೂರು ರಸ್ತೆ ನಡುವಿನ ಎತ್ತರಿಸಿದ ಮಾರ್ಗದಲ್ಲಿ ಈ ಹಿಂದೆಯೇ ಸಂಚಾರ ಆರಂಭವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.