ADVERTISEMENT

ಮೇಲ್ಸೇತುವೆ ಬಳಕೆ ಶುಲ್ಕ ವಸೂಲಿಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:37 IST
Last Updated 24 ಅಕ್ಟೋಬರ್ 2016, 19:37 IST
ಶೋಭಾ ಕರಂದ್ಲಾಜೆ ಸಂಸದೆ, ಬಿಜೆಪಿ
ಶೋಭಾ ಕರಂದ್ಲಾಜೆ ಸಂಸದೆ, ಬಿಜೆಪಿ   

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳ ಎಸ್ಟೀಮ್‌ ಮಾಲ್‌ವರೆಗೆ  ಉಕ್ಕಿನ ಸೇತುವೆ ನಿರ್ಮಿಸಿದ ಬಳಿಕ ಅದರಲ್ಲಿ ಸಾಗುವ ವಾಹನಗಳಿಂದ ಶುಲ್ಕ ವಸೂಲಿ ಮಾಡುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ರಸ್ತೆಗೆ ಶುಲ್ಕ ಸಂಗ್ರಹಿಸಲು  ಕರ್ನಾಟಕ ಪೌರಸಂಸ್ಥೆಗಳ (ಕೆಎಂಸಿ) ಕಾಯ್ದೆಯಲ್ಲಿ  ಸದ್ಯಕ್ಕೆ ಅವಕಾಶ ಇಲ್ಲ.

‘ಕೆಎಂಸಿ ಕಾಯ್ದೆಯಲ್ಲಿ ಮೇಲ್ಸೇತುವೆಗೆ  ಅಥವಾ ರಸ್ತೆ ಬಳಕೆಗೆ ಶುಲ್ಕ ವಸೂಲಿ ಮಾಡಲು ಅವಕಾಶ ಇಲ್ಲ.  ಹಾಗಾಗಿ,  ನಗರ ವ್ಯಾಪ್ತಿಯ ಒಳಗೆ ಎಲ್ಲೂ ರಸ್ತೆ ಬಳಕೆಗೆ ಶುಲ್ಕ ವಸೂಲಿ ಮಾಡುತ್ತಿಲ್ಲ’  ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ  ತರುವ ಮೂಲಕ ರಸ್ತೆ ಬಳಕೆಗೂ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಬಹುದು’ ಎಂದು ಅವರು ತಿಳಿಸಿದರು.

ಹೊಸ ನೀತಿ ರೂಪಿಸಬಹುದು: ‘ರಸ್ತೆ ಬಳಕೆಗೆ ಶುಲ್ಕ ವಿಧಿಸಲು ಕೆಎಂಸಿ ಕಾಯ್ದೆಯಲ್ಲಿ ಸದ್ಯಕ್ಕೆ ಅವಕಾಶ ಇಲ್ಲ. ಆದರೆ, ಇದು ಸರ್ಕಾರದ ನೀತಿಗೆ ಬಿಟ್ಟ ವಿಚಾರ. ಅಗತ್ಯ ಬಿದ್ದರೆ ಯಾವುದೇ ಮೂಲಸೌಕರ್ಯಕ್ಕೆ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸುವ ಸಲುವಾಗಿ ಸರ್ಕಾರ ಹೊಸ ನೀತಿ ರೂಪಿಸಬಹುದು.

ನಿರ್ಮಾಣ ನಿರ್ವಹಣೆ ಹಸ್ತಾಂತರ ಸೂತ್ರದ ಅಡಿ ಹೊಸ ಮೂಲಸೌಕರ್ಯ ರೂಪಿಸುವ ಅನೇಕ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನಗರಾಡಳಿತ ಪ್ರದೇಶದ ವ್ಯಾಪ್ತಿಯೊಳಗೆ ಇಂತಹ ಯೋಜನೆ ಜಾರಿಗೊಳಿಸುವಾಗ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಅವಕಾಶ ಇದ್ದೇ ಇದೆ’ ಎಂದು ಬಿಬಿಎಂಪಿ ಕಾನೂನು ಕೋಶದ ಅಧಿಕಾರಿಯೊಬ್ಬರು ತಿಳಿಸಿದರು.

ಸದ್ಯಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ರಸ್ತೆಯಲ್ಲೂ ರಸ್ತೆ ಬಳಕೆ ಶುಲ್ಕ ವಸೂಲಿ ಮಾಡುತ್ತಿಲ್ಲ. ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ನೈಸ್‌) ರಸ್ತೆಯಲ್ಲಿ ಸಾಗುವ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಈ ರಸ್ತೆ  ಬಿಬಿಎಂಪಿ ವ್ಯಾಪ್ತಿಯಿಂದ  ಹೊರಗೆ ಇದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲೂ ಶುಲ್ಕ ವಸೂಲಿ ಕೇಂದ್ರವು ಬಿಬಿಎಂಪಿ ಸರಹದ್ದಿನ ಹೊರಗಡೆಯೇ ಇದೆ. ತುಮಕೂರು ರಸ್ತೆಯಲ್ಲೂ ಶುಲ್ಕ ವಸೂಲಿ ಆರಂಭವಾಗುವುದು ಬಿಬಿಎಂಪಿಯ ವ್ಯಾಪ್ತಿ ಮುಕ್ತಾಯವಾದ ಬಳಿಕವೇ.

‘ಕಾಮಾಕ್ಷಿಪಾಳ್ಯದಿಂದ ಹೊರವರ್ತುಲ ರಸ್ತೆ ಕಡೆಗೆ ಚತುಷ್ಪಥ ರಸ್ತೆ ನಿರ್ಮಿಸಿ,  ಅದನ್ನು ಬಳಸುವವರಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಕೆಲವು ವರ್ಷಗಳ ಹಿಂದೆ ಬಿಬಿಎಂಪಿ ಮುಂದೆ ಇತ್ತು. ನಗರ ವ್ಯಾಪ್ತಿಯಲ್ಲಿ ರಸ್ತೆ ಬಳಕೆಗೆ ಶುಲ್ಕ ವಿಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಈ ಯೋಜನೆಯನ್ನು ಕೈಬಿಡಲಾಯಿತು’ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಶಾಸಕರು, ಸಂಸದರಿಗೆ ಬಹಿರಂಗ ಪತ್ರ: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಉಕ್ಕಿನ ಸೇತುವೆ ಬಗ್ಗೆ ಚರ್ಚಿಸಲು ಮಂಗಳವಾರ ವಿಕಾಸಸೌಧದಲ್ಲಿ ಶಾಸಕರು ಹಾಗೂ ಸಂಸದರ ಸಭೆ ಕರೆದಿದ್ದಾರೆ. ಇದರ ಬೆನ್ನಲ್ಲೇ, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯು ಶಾಸಕರು ಹಾಗೂ ಸಂಸದರಿಗೆ ಬಹಿರಂಗ ಪತ್ರ ಬರೆದಿದೆ.

‘ನಗರದ ಹಿತವನ್ನು ಕಾಯಬೇಕಾದ ನೀವು ಈ ವಿವಾದಾಸ್ಪದ ಯೋಜನೆಯ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕು. ಈ ಯೋಜನೆ ಅನುಷ್ಠಾನಗೊಳಿಸುವುದು ಅಥವಾ ಕೈಬಿಡುವುದು ನಿಮ್ಮ ಕೈಯಲ್ಲೇ ಇದೆ’ ಎಂದು ಸಂಘಟನೆ ಹೇಳಿದೆ.

‘ಬೆಂಗಳೂರು ಅಭಿವೃದ್ಧಿ ಸಚಿವರು ಕರೆದಿರುವ ಸಭೆಯಲ್ಲಿ ಈ ವಿವಾದಾಸ್ಪದ ಯೋಜನೆಯ ವಿನ್ಯಾಸ, ಉದ್ದೇಶದ ಬಗ್ಗೆ ಸೂಕ್ತ ವಿವರಣೆ ಪಡೆಯಬೇಕು’ ಎಂದು ಸಂಘಟನೆ ಸದಸ್ಯರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವೃಕ್ಷ ಸಮಿತಿಯಿಂದ ಅನುಮತಿ ಪಡೆಯದ ಬಿಡಿಎ
ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕಾಗಿ ಬಿಬಿಎಂಪಿಯ ವೃಕ್ಷ ಸಮಿತಿಯಿಂದ ಅನುಮತಿಯನ್ನೇ ಪಡೆಯದೆ 756 ಮರಗಳನ್ನು ಕತ್ತರಿಸಲು ಹಾಗೂ 56 ಮರಗಳನ್ನು ಸ್ಥಳಾಂತರ ಮಾಡಲು ಬಿಡಿಎ ತೀರ್ಮಾನಿಸಿದೆ. ಕಾಯ್ದೆ ಪ್ರಕಾರ, ಮರಗಳನ್ನು ಕತ್ತರಿಸಬೇಕಾದರೆ ಕಾಮಗಾರಿ ಆರಂಭಿಸುವ ಮುನ್ನವೇ ವೃಕ್ಷ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ವೃಕ್ಷ ಸಮಿತಿಯ ಮುಖ್ಯಸ್ಥರೂ ಆಗಿರುವ ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಅಪ್ಪು ರಾವ್‌, ‘ಮರಗಳನ್ನು ಕತ್ತರಿಸಲು ಇಲ್ಲವೆ ಸ್ಥಳಾಂತರ ಮಾಡಲು ಇದುವರೆಗೆ ಬಿಡಿಎ ಯಾವುದೇ ಅನುಮತಿ ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಈ ಕುರಿತು ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ ಅವರನ್ನು ಸಂಪರ್ಕಿಸಿದಾಗ ಅವರು ಭಿನ್ನವಾಗಿ ಪ್ರತಿಕ್ರಿಯಿಸಿದರು. ‘ಸ್ಯಾಂಕಿ ರಸ್ತೆಯ ದಟ್ಟಣೆಯನ್ನು ಕಡಿಮೆ ಮಾಡಲು ಆ ರಸ್ತೆಯನ್ನು ವಿಸ್ತರಣೆ ಮಾಡುವುದು ಅಗತ್ಯವಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕಾಗಿ ಮರಗಳನ್ನು ಕತ್ತರಿಸಲು ಅನುಮತಿ ನೀಡಬೇಕೆಂದು ಸ್ವತಃ ಹೈಕೋರ್ಟ್‌, ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಹೀಗಾಗಿ ಪುನಃ ಅನುಮತಿಗಾಗಿ ಅರ್ಜಿ ಹಾಕುವ ಅಗತ್ಯವಿಲ್ಲ’ ಎಂದು ವಿವರಿಸಿದರು.

ಖತ್ರಿ ಅವರ ಈ ವಾದವನ್ನು ಬಿಬಿಎಂಪಿಯ ಡಿಸಿಎಫ್‌ ಅವರು ಒಪ್ಪಲು ಸಿದ್ಧರಿಲ್ಲ. ‘50ಕ್ಕಿಂತ ಅಧಿಕ ಮರಗಳನ್ನು ಕತ್ತರಿಸುವುದಾದರೆ ವೃಕ್ಷ ಸಮಿತಿಯ ಅನುಮತಿ ಕಡ್ಡಾಯವಾಗಿದ್ದು, ಸಾರ್ವಜನಿಕರ ಸಭೆಯನ್ನೂ ನಡೆಸಿ ತೀರ್ಮಾನ ಮಾಡಬೇಕು ಎಂದು ಅದೇ ಹೈಕೋರ್ಟ್‌ ಹೇಳಿದೆ’ ಎಂದು ಹೇಳಿದರು. ‘ಅನುಮತಿ ಪಡೆಯದೇ ಮರ ಕತ್ತರಿಸಲು ಮುಂದಾದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

ಸ್ಯಾಂಕಿ ರಸ್ತೆಯ ವಿಸ್ತರಣೆಗೆ ಮರಗಳ ಹನನ ಮಾಡುವುದನ್ನು ವಿರೋಧಿಸಿ ಮಲ್ಲೇಶ್ವರದ ನಿವಾಸಿಗಳು 2012ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ಎನ್‌.ಕುಮಾರ್‌ ಹಾಗೂ ಎಚ್‌.ಎಸ್‌. ಕೆಂಪಣ್ಣ ಅವರಿದ್ದ ವಿಭಾಗೀಯ ಪೀಠ, ‘ಮರಗಳನ್ನು ಕತ್ತರಿಸದೆ ರಸ್ತೆಯನ್ನು ವಿಸ್ತರಿಸುವುದು ಹೇಗೆ’ ಎಂಬ ಪ್ರಶ್ನೆ ಎತ್ತಿತ್ತು. ಆದರೆ, 2014ರಲ್ಲಿ ಹೈಕೋರ್ಟ್‌, ‘ಯಾವುದೇ ಯೋಜನೆಗೆ 50ಕ್ಕಿಂತ ಮರ ಕಡಿಯಬೇಕಿದ್ದರೆ ವೃಕ್ಷ ಸಮಿತಿಯಿಂದ ಅನುಮತಿ ಪಡೆಯಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಕೋರ್ಟ್‌ ಆದೇಶದಂತೆ 2016ರಲ್ಲಿ ವೃಕ್ಷ ಸಮಿತಿಯ ರಚನೆ ಮಾಡಲಾಗಿದೆ.

ಬಿಡಿಎ ಮರ ಕಡಿಯಬೇಕಾದರೆ ಹೈಕೋರ್ಟ್‌ನ ಇತ್ತೀಚಿನ ಆದೇಶದಂತೆ ಅನುಮತಿಗಾಗಿ ಅರ್ಜಿ ಸಲ್ಲಿಸಲೇಬೇಕು. ಸಾರ್ವಜನಿಕರ ಸಭೆ ಕರೆದು ಅವರ ಅಭಿಪ್ರಾಯ ಪಡೆಯಬೇಕು ಮತ್ತು ಯೋಜನಾ ಸ್ಥಳಕ್ಕೂ ಭೇಟಿ ನೀಡಬೇಕು. ಈ ಎಲ್ಲ ಪ್ರಕ್ರಿಯೆ ನಡೆಸಲು ಕನಿಷ್ಠ 30 ದಿನಗಳು ಬೇಕು’ ಎಂದು ಅಪ್ಪು ರಾವ್‌ ವಿವರಿಸಿದರು.

ರಾಜ್ಯಪಾಲರ ಭೇಟಿಗೆ ನಿರ್ಧಾರ
ಉಕ್ಕಿನ ಸೇತುವೆಗೆ ಜನರಿಂದ ಭಾರಿ ವಿರೋಧ ವ್ಯಕ್ತವಾಗಿರುವುದರಿಂದ ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿ ರಾಜ್ಯಪಾಲರನ್ನು ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಲು ಉಕ್ಕಿನ ಸೇತುವೆ ವಿರೋಧಿ ನಾಗರಿಕರು ಸಂಘಟನೆ ನಿರ್ಧರಿಸಿದೆ. ಉಕ್ಕಿನ ಸೇತುವೆ ಕುರಿತು ಭಾನುವಾರ ನಡೆದ ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯ ಕ್ರೊಡೀಕರಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ನಿರ್ಮಾಣ ಗುತ್ತಿಗೆದಾರರ ಲಾಬಿ: ಬಿಜೆಪಿ ಆರೋಪ
ಬೆಂಗಳೂರು: ಮರಮಟ್ಟು ಮತ್ತು ನಿರ್ಮಾಣ ಗುತ್ತಿಗೆದಾರರ ಲಾಬಿಗೆ ಮಣಿದಿರುವ ರಾಜ್ಯ ಸರ್ಕಾರ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾಗಿದೆ ಎಂದು ಬಿಜೆಪಿ ಬೆಂಗಳೂರು ನಗರ ಕಾರ್ಯಕಾರಿಣಿ ಸಭೆ ಆರೋಪಿಸಿದೆ.

‘ಸುಂದರ ಬೆಂಗಳೂರು, ಉದ್ಯಾನ ನಗರಿಯ ಅಂದ ಹಾಳು ಮಾಡುವ ಉಕ್ಕಿನ ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ’ ಸೋಮವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಿರ್ಣಯದ ಸಾರಾಂಶ: ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಒಳಗಾಗಿರುವ ರೈತರಿಗೆ ಪರಿಹಾರ ನೀಡದ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಮಂಜೂರು ಮಾಡದ ಸರ್ಕಾರ ಜನರ ಭಾವನೆಗೆ ವಿರುದ್ಧವಾಗಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ನಿರ್ಮಾಣವನ್ನು ಕಾರ್ಯಕಾರಿಣಿ ಸಭೆ ವಿರೋಧಿಸುತ್ತದೆ.

ಸಂಚಾರ ಸಮಸ್ಯೆಗೆ ಉಕ್ಕಿನ ಸೇತುವೆ ಕೇವಲ ತಾತ್ಕಾಲಿಕ ಪರಿಹಾರವೇ ಹೊರತು ಶಾಶ್ವತ ಪರಿಹಾರವಲ್ಲ. ಯೋಜನೆಗಾಗಿ 812 ಮರಗಳು ನಾಶವಾಗಲಿದೆ.ಸೇತುವೆಯಿಂದ ಶಬ್ದ ಮಾಲಿನ್ಯ ಮತ್ತು ತಾಪಮಾನ ಏರಿಕೆಯಾಗಲಿದ್ದು, ಇದರ ನೇರ ಪರಿಣಾಮ ಸಾವಿರಾರು ಪ್ರಾಣಿ, ಪಕ್ಷಿಗಳ ನಾಶಕ್ಕೆ ನಾಂದಿಯಾಗಲಿದೆ.

₹1,350 ಕೋಟಿ ಇದ್ದ ಯೋಜನೆ ವೆಚ್ಚ ಈಗ ₹1,791 ಕೋಟಿಗೆ ಏರಿಕೆಯಾಗಿರುವುದು ಹೇಗೆ ಎನ್ನುವುದಕ್ಕೆ ಉತ್ತರ ನೀಡದ ಸರ್ಕಾರ, ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸಾವಿರಾರು ಕೋಟಿ ವಿನಾಕಾರಣ ಸುರಿಯುತ್ತಿದೆ.

***
ಉತ್ತರ ಪ್ರದೇಶ ಚುನಾವಣೆ ಖರ್ಚಿಗೆ ಹಣ ಹೊಂದಿಸಲು  ಉಕ್ಕಿನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.  ಕಾಂಗ್ರೆಸ್‌ ಪಾಲಿಗೆ ಎಟಿಎಂ ಆಗಿರುವ ಜಾರ್ಜ್‌ ಅವರು ₹ 500 ಕೋಟಿ  ಕಮೀಷನ್ ಆಸೆಗೆ ಬಿದ್ದಿದ್ದಾರೆ
-ಶೋಭಾ ಕರಂದ್ಲಾಜೆ,ಸಂಸದೆ, ಬಿಜೆಪಿ

***
ಕಂಠೀರವ ಸ್ಟುಡಿಯೊ ಬಳಿ ಗ್ರೇಡ್‌ ಸೆಪರೇಟರ್‌ ಕಾಮಗಾರಿಗೆ ಜಾಗ ಬಿಟ್ಟುಕೊಟ್ಟ ಕುಟುಂಬ ಗಳಿಗೆ ಪಾವತಿಸಲು ಬಿಡಿಎ ಬಳಿ ಹಣವೇ ಇಲ್ಲ. ಪರಿಸ್ಥಿತಿ ಹಾಗಿರುವ ಬಿಡಿಎಗೆ ₹ 1,971 ಕೋಟಿ ವೆಚ್ಚದ ಉಕ್ಕಿನ ಸೇತುವೆ ಉಸಾಬರಿ ಏಕೆ
-ಕೆ.ಗೋಪಾಲಯ್ಯ, ಶಾಸಕ

***
ಜನ ಏನನ್ನುತ್ತಾರೆ

ಮೊಂಡುತನ ಬೇಡ

ಉಕ್ಕಿನ ಸೇತುವೆ ನಿರ್ಮಾಣ ಸಂಬಂಧ ಜನರ ವಿರೋಧವನ್ನು ಲೆಕ್ಕಿಸದೆ ಮೊಂಡುತನ ತೋರುತ್ತಿರುವ ಸರ್ಕಾರದ ನಿಲುವು ಆಶ್ಚರ್ಯವೇ ಸರಿ. ಹಸಿರು ಉಳಿಸುವ ನಿಟ್ಟಿನಲ್ಲಿ ‘ಮನೆಗೊಂದು ಮರ’ ಯೋಜನೆ ತಂದ ಸರ್ಕಾರವೇ ಆದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ. ಸಮಸ್ಯೆಗಳ ಸರಮಾಲೆಯಲ್ಲಿ ಸುರಳಿ ಸುತ್ತಿಕೊಂಡಿರುವ ನಗರವನ್ನು ಅದರಿಂದ ಬಿಡಿಸಲು ಪ್ರಾಮಾಣಿಕ ಪ್ರಯತ್ನ ಮಾಡದೆ, ಬೇಡದ ಕೆಲಸಕ್ಕೆ ಕೈ ಹಾಕಿರುವುದು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ
–ಎಸ್. ಪ್ರಭಾಕರ್

***
ಸೇನಾ ಸರ್ಕಾರವೇ?

ನಮ್ಮ ರಾಜ್ಯದಲ್ಲಿರುವುದು ಜನರಿಂದ, ಜನರಿಗಾಗಿ, ಜನರಿಗೋಸ್ಕರ ರಚನೆಗೊಂಡ ಪ್ರಜಾಪ್ರಭುತ್ವ ಸರ್ಕಾರವೇ ಅಥವಾ ಸೇನಾ ಸರ್ಕಾರವೇ ಎಂಬ ಅನುಮಾನ ಮೂಡುತ್ತಿದೆ. ಒಂದು ಯೋಜನೆಗೆ ಜನರಿಂದ ಭಾರಿ ವಿರೋಧ ವ್ಯಕ್ತವಾದಾಗಲೂ ಅದನ್ನೇ ಜಾರಿ ಮಾಡಲು ಹೊರಟಿರುವುದು ಯಾರ ಲಾಭಕ್ಕಾಗಿ ಸ್ವಾಮಿ? ದಯವಿಟ್ಟು ಯೋಚಿಸಿ  ತೀರ್ಮಾನ  ಕೈಗೊಳ್ಳಿ. ಮೂರ್ಖರಂತೆ ವರ್ತಿಸಬೇಡಿ                         
–ನಾಗಾರ್ಜುನ ಕೆ.ವಿ.

***
ಎಲ್ಲಾ ಅಭಿವೃದ್ಧಿಯೂ ಬೇಕು

ಯಾವುದೇ  ಒಳ್ಳೆ ಕೆಲಸ ಮಾಡುವಾಗ ಪರ ವಿರೋಧಗಳು ಇದ್ದೇ ಇರುತ್ತೆವೆ. ಕೆ.ಆರ್.ಎಸ್ ಅಣೆಕಟ್ಟು ಕಟ್ಟುವಾಗಲೂ ವಿಶ್ವೇಶ್ವರಯ್ಯ ಅವರ ವಿರುದ್ಧ ಜನ ಪ್ರತಿಭಟನೆ ಮಾಡಿದ್ದರಂತೆ. ಆದರೆ ಅಣೆಕಟ್ಟು ಕಟ್ಟಿದ್ದರಿಂದ ಈಗ ಬೆಂಗಳೂರು, ಮಂಡ್ಯ, ಮೈಸೂರು ಸಮೃದ್ಢಿಯಾಗಿದೆ. ಉಕ್ಕಿನ ಸೇತುವೆನೂ ಬೇಕು,  ಮೆಟ್ರೊ ರೈಲೂ ಬೇಕು. ದಟ್ಟಣೆ  ಜಾಸ್ತಿ ಇದೆ ಅನುಕೂಲ ಬೇಕೆಂದರೆ ಅಭಿವೃದ್ಧಿ ಆಗಲೇಬೇಕು
–ಪ್ರೇಮಾದೇವಿ, ಸಂಜಯನಗರ

***
ಅಭಿವೃದ್ಧಿ ನಗರ ಕೇಂದ್ರಿತ ಆಗಬಾರದು

ಬೆಂಗಳೂರನ್ನೇ ಗುರಿಯಾಗಿಸಿಕೊಂಡು  ಅಭಿವೃದ್ಧಿಪಡಿಸುವ ಬದಲು ಇತರೆ ನಗರಗಳ ಅಭಿವೃದ್ಧಿ ಕಡೆಗೆ ಗಮನ ಹರಿಸಿದರೆ ನಗರಕ್ಕೆ ಬರುವ ವಲಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಈಗಾಗಲೇ ನೆಲೆಸಿರುವ ನಾಗರಿಕರು ಸಹ ತಮ್ಮ ಮೂಲ ಊರುಗಳಿಗೆ  ಮರಳುತ್ತಾರೆ. ಆಗ ತಾನಾಗಿಯೇ ನಗರದ ಒತ್ತಡ ಕಡಿಮೆ ಆಗಾಗುತ್ತದೆ. ಜನರಿಗೆ ಹೊರೆಯಾಗುವ ಅರ್ಥವಿಲ್ಲದ ಯೋಜನೆಗಳಿಗೆ ವ್ಯರ್ಥವಾಗುವ ಸಾಲದ ಹಣವು ಉಳಿಯುತ್ತದೆ
–ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

***

ಉಕ್ಕಿನ ಸೇತುವೆ ಕವನ

ADVERTISEMENT

ಕಾಲಾಂತರದಲ್ಲಿ ಸವೆಯುವೆ
ಆದರೂ ಸರ್ಕಾರಕ್ಕೇಕೆ ನಿನ್ನ ಮೇಲೆ ಮೋಹ
ಜನ ನೀರು ನೆರಳಿಲ್ಲದೆ ಒಣಗುತಿಹರು
ಬಿಡಿಎ ಕೇಳುತ್ತಿದೆ ತುರುಬಿಗೆ ಮಲ್ಲಿಗೆ
ಸಾಕು ನಿಲ್ಲಿಸಿ ನಿಮ್ಮ ಒಣ ಜಂಬ
ನೀಡಿ ಜನತೆಯ ಮಾತಿಗೆ ಮಾನ್ಯತೆ
1791 ಕೋಟಿ  ವೆಚ್ಚ ಏತಕ್ಕಾಗಿ
ಆದ್ಯತೆ ನೀಡಿ ಬೆಂಗಳೂರನ್ನು ಹಸಿರಾಗಿಸಲು,ಉಸಿರಾಡಲು. ನಡೆದಾಡಲು
–ಉಮಾ ಶಂಕರ, ಲಕ್ಷ್ಮೀಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.