ADVERTISEMENT

ಮೇ 1ಕ್ಕೆ ಮೆಟ್ರೊ ರೈಲು ಸಂಚಾರ

ಪೀಣ್ಯ ಇಂಡಸ್ಟ್ರಿ– ನಾಗಸಂದ್ರ ಮಾರ್ಗ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2015, 19:39 IST
Last Updated 24 ಏಪ್ರಿಲ್ 2015, 19:39 IST

ಬೆಂಗಳೂರು:  ಪೀಣ್ಯ ಇಂಡಸ್ಟ್ರಿ ನಿಲ್ದಾಣದಿಂದ ನಾಗಸಂದ್ರ (ಹೆಸರಘಟ್ಟ ಕ್ರಾಸ್‌) ನಿಲ್ದಾಣದವರೆಗಿನ 2.5 ಕಿ.ಮೀ ಉದ್ದದ ‘ನಮ್ಮ ಮೆಟ್ರೊ’ ಮಾರ್ಗದಲ್ಲಿ ರೈಲಿನ ವಾಣಿಜ್ಯ ಸಂಚಾರಕ್ಕೆ ಮೇ 1ರಂದು ಚಾಲನೆ ಸಿಗಲಿದೆ.

ಅಂದು ಬೆಳಿಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅದೇ ದಿನ ಸಂಜೆಯಿಂದ ರೈಲಿನ ಸಾರ್ವಜನಿಕ ಸಂಚಾರ ಪ್ರಾರಂಭವಾಗಲಿದೆ.

‘ಬೆಳಿಗ್ಗೆ 6ರಿಂದ ರಾತ್ರಿ 10ರವರೆಗಿನ ಅವಧಿಯಲ್ಲಿ   ಪ್ರತಿ ಹತ್ತು ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚರಿಸಲಿವೆ. ಭಾನುವಾರದ ಒಳಗೆ ಪ್ರಯಾಣದ ದರದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದರು.

ಮಲ್ಲೇಶ್ವರದ ಸಂಪಿಗೆ ರಸ್ತೆಯಿಂದ ಪೀಣ್ಯ ಇಂಡಸ್ಟ್ರಿವರೆಗಿನ 10 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗಾಗಲೇ ರೈಲು ಸಂಚಾರ ಯಶಸ್ವಿಯಾಗಿ ನಡೆದಿದೆ. ಈ ಎರಡೂ ಮಾರ್ಗಗಳು ಉತ್ತರ ಕಾರಿಡಾರ್‌ನ ಭಾಗವಾಗಿವೆ.

ಮೆಟ್ರೊ ಮೊದಲ ಹಂತದ ಒಟ್ಟು ಉದ್ದ 42.3 ಕಿ.ಮೀ.ಗಳು.  ಪೂರ್ವ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗಿನ 6.7 ಕಿ.ಮೀ. ಉದ್ದದ ಮಾರ್ಗದಲ್ಲಿ 3 ವರ್ಷಗಳಿಂದ ರೈಲು ಸಂಚಾರ ನಡೆದಿದೆ.

ಪಶ್ಚಿಮ ಕಾರಿಡಾರ್‌ನಲ್ಲಿ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ವರೆಗಿನ 6.5 ಕಿ.ಮೀ ಉದ್ದದ ಮಾರ್ಗದಲ್ಲಿ ರೈಲಿನ  ಪರೀಕ್ಷಾರ್ಥ ಸಂಚಾರ ಆರಂಭವಾಗಿದೆ.

ಇನ್ನು ದಕ್ಷಿಣ ಕಾರಿಡಾರ್‌ನಲ್ಲಿ ನ್ಯಾಷನಲ್‌ ಕಾಲೇಜಿನಿಂದ ಕನಕಪುರ ರಸ್ತೆಯ ಪುಟ್ಟೇನಹಳ್ಳಿ ಕ್ರಾಸ್‌ವರೆಗಿನ 8 ಕಿ.ಮೀ ಉದ್ದದ ಮಾರ್ಗದಲ್ಲಿ ನಾಲ್ಕೈದು ತಿಂಗಳ ಬಳಿಕ ರೈಲಿನ ಪರೀಕ್ಷಾರ್ಥ ಸಂಚಾರ ಪ್ರಾರಂಭವಾಗುವ ಸಾಧ್ಯತೆ ಇದೆ.

ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ಗಳನ್ನು ಕೂಡಿಸುವ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆವರೆಗಿನ 4.4 ಕಿ.ಮೀ. ಉದ್ದದ ಸುರಂಗ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರಕ್ಕಾಗಿ ಸಿದ್ಧತೆ ನಡೆದಿದೆ.

ಉತ್ತರ ಮತ್ತು ದಕ್ಷಿಣ ಕಾರಿಡಾರ್‌ಗಳ ನಡುವೆ ಸಂಪಿಗೆ ರಸ್ತೆಯಿಂದ ಕೆ.ಆರ್‌.ರಸ್ತೆವರೆಗಿನ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಎರಡೂ ಕಾರಿಡಾರ್‌ಗಳು ಸಂಧಿಸುವ ಮೆಜೆಸ್ಟಿಕ್‌ನಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ಕಾರ್ಯ ಭರದಿಂದ ಸಾಗಿದೆ.

ಮುಖ್ಯಾಂಶಗಳು
* 2.5 ಕಿ.ಮೀ ಉದ್ದದ ಮಾರ್ಗ
* ಬೆಳಿಗ್ಗೆ 6ರಿಂದ ರಾತ್ರಿ 10ರ ವರೆಗೆ ಪ್ರತಿ ಹತ್ತು ನಿಮಿಷಕ್ಕೆ ಒಂದು ರೈಲು
* ಭಾನುವಾರದೊಳಗೆ ಪ್ರಯಾಣ ದರ ಪ್ರಕಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.