ADVERTISEMENT

ಮೋಟಮ್ಮಗೆ ವಾರಂಟ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 20:36 IST
Last Updated 24 ಏಪ್ರಿಲ್ 2017, 20:36 IST

ಬೆಂಗಳೂರು:  ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾದ ಕಾರಣಕ್ಕೆ ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಹಾಗೂ ಇಬ್ಬರು ಪುತ್ರರಿಗೆ  ‘ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ಸೋಮವಾರ ವಾರಂಟ್‌ ಹೊರಡಿಸಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರಿನ ಸರ್ವೆ ನಂಬರ್‌ 156ರಲ್ಲಿ 15 ಎಕರೆ ಸರ್ಕಾರಿ ಭೂಮಿಯನ್ನು ಮೋಟಮ್ಮ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್‌.ಹಿರೇಮಠ ಮಾರ್ಚ್‌ ತಿಂಗಳಿನಲ್ಲಿ ಆರೋಪಿಸಿದ್ದರು. ‘1980–81ರಲ್ಲಿ ಕಾನೂನು ಪ್ರಕಾರವೇ ಈ ಜಾಗ ಮಂಜೂರು ಆಗಿತ್ತು’ ಎಂದು ಮೋಟಮ್ಮ ತಿಳಿಸಿದ್ದರು.

ಪತ್ರಿಕೆಗಳಲ್ಲಿ  ಪ್ರಕಟವಾದ ವರದಿಯ ಆಧಾರದಲ್ಲಿ ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ನೀಡಿತ್ತು. ಸೋಮವಾರ ಅದರ ವಿಚಾರಣೆ ನಡೆಯಿತು. ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆಯೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚಿಸಿದೆ.

ADVERTISEMENT

ಓಲಾ ಕಂಪೆನಿಗೆ ನೋಟಿಸ್‌
ಬೆಂಗಳೂರು:
ನಗರದಲ್ಲಿ ಮ್ಯಾಕ್ಸಿ ಕ್ಯಾಬ್‌ ಸೇವೆ (10+2 ಸೀಟು)  ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಓಲಾ ಕಂಪೆನಿಗೆ ಸೋಮವಾರ ನೋಟಿಸ್ ನೀಡಿದ್ದಾರೆ.

‘ಮ್ಯಾಕ್ಸಿ ಕ್ಯಾಬ್, ಟೆಂಪೊ ಟ್ರಾವೆಲರ್‌ ಬಳಸಿ ಶಟಲ್ ಸೇವೆ ನೀಡುವ ಮೂಲಕ ಓಲಾ ಕಂಪೆನಿಯು ನಿಯಮ ಉಲ್ಲಂಘಿಸಿದೆ. ಈ ಸಂಬಂಧ ನೋಟಿಸ್ ನೀಡಲಾಗಿದೆ’ ಎಂದು ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರಕುಮಾರ್ ಹೇಳಿದರು.

ಕಳೆದ ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿದ್ದ ಆರ್‌ ಟಿಒ, ನಿಯಮ ಉಲ್ಲಂಘಿಸಿದ್ದ 10ಕ್ಕೂ ಹೆಚ್ಚು ಮ್ಯಾಕ್ಸಿಕ್ಯಾಬ್  ಜಪ್ತಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.