ADVERTISEMENT

ಯಶಸ್ಸಿನ ಗುಟ್ಟು ಬಿಟ್ಟುಕೊಟ್ಟ ಚೇತನ್‌ ಭಗತ್‌

ಕೆ2 ಲರ್ನಿಂಗ್‌ ಸಂಸ್ಥೆ ವತಿಯಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ‘ಕೆರಿಯರ್‌ ಉತ್ಸವ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:44 IST
Last Updated 3 ಡಿಸೆಂಬರ್ 2016, 19:44 IST
ಲೇಖಕ ಚೇತನ್‌ ಭಗತ್‌ ಗುರಿ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಲೇಖಕ ಚೇತನ್‌ ಭಗತ್‌ ಗುರಿ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.   

ಬೆಂಗಳೂರು: ಇಂಗ್ಲಿಷ್‌ ಹಾಗೂ ಹಿಂದಿ ಮಿಶ್ರಿತ ಭಾಷೆಯಲ್ಲಿ ಲೇಖಕ ಚೇತನ್‌ ಭಗತ್‌ ಅವರು ವ್ಯಕ್ತಿತ್ವ ವಿಕಸನದ ಕುರಿತ ಪಾಠ ಮಾಡುತ್ತಿದ್ದ ರೀತಿ ವಿದ್ಯಾರ್ಥಿಗಳ ಆಸಕ್ತಿಯನ್ನು ಇಮ್ಮಡಿಗೊಳಿಸಿತ್ತು. ಯಶಸ್ಸು, ಗುರಿ ಸಾಧನೆ ಬಗ್ಗೆ  ಸನಿಮಾ ಸಂಭಾಷಣೆ ಶೈಲಿಯಲ್ಲಿ ಅವರು ವಿವರಿಸುವ ರೀತಿ ಯುವಜನತೆಯನ್ನು ಮಂತ್ರಮುಗ್ಧರನ್ನಾಗಿಸಿತ್ತು.

ನೆಚ್ಚಿನ ಲೇಖಕರನ್ನು ನೋಡಿದ ಖುಷಿ ಕೆಲವು ವಿದ್ಯಾರ್ಥಿಗಳಿಗಾದರೆ, ಚೇತನ್‌ ಭಗತ್‌ ಅವರ ಯಶಸ್ಸಿನ ಗುಟ್ಟು ತಿಳಿದ ಸಂತಸ ಇನ್ನೂ ಕೆಲವರಲ್ಲಿ ಕಾಣುತ್ತಿತ್ತು. ಅಣಕು ಪರೀಕ್ಷೆಗಳ ಭಾಗವಹಿಸುವ ತವಕ, ಭವಿಷ್ಯದ ಕುರಿತು ಹೊಸ ಆಲೋಚನೆಗಳನ್ನು ತುಂಬಿಕೊಳ್ಳುವ ಉತ್ಸಾಹ ವಿದ್ಯಾರ್ಥಿಗಳಲ್ಲಿ ಮನೆ ಮಾಡಿತ್ತು.

–ಇವು, ಕೆ2 ಲರ್ನಿಂಗ್‌ ಸಂಸ್ಥೆ ಶನಿವಾರ ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ‘ಕೆರಿಯರ್‌ ಉತ್ಸವ’ದಲ್ಲಿ ಕಂಡುಬಂದ ದೃಶ್ಯಗಳು.

‘ದೀರ್ಘಾವಧಿ ಗುರಿಗಳನ್ನು ಹೊಂದುವ ವಿದ್ಯಾರ್ಥಿಗಳು  ಅದನ್ನು ಕಾರ್ಯಗತಗೊಳಿಸುವಲ್ಲಿ ಎಡವುತ್ತಾರೆ.   ಗುರಿಯನ್ನು ವಿಭಾಗಿಸಿ, ಹಂತ ಹಂತವಾಗಿ ಅವನ್ನು ಈಡೇರಿಸಬೇಕು. ಇಲ್ಲದಿದ್ದರೆ ಒಂದು ವಾರದಲ್ಲೇ ನಿಮ್ಮ ಮನಸ್ಸು ಗುರಿ ಬದಲಾವಣೆ ಬಗ್ಗೆ ಯೋಚಿಸುತ್ತದೆ’ ಎಂದು ಚೇತನ್‌ ಭಗತ್‌ ಸಲಹೆ ನೀಡಿದರು.

‘ಯಶಸ್ಸಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹೆಚ್ಚು ಹಣ ಸಂಪಾದಿಸುವುದನ್ನು ಕೆಲವರು ಯಶಸ್ಸು ಎನ್ನುತ್ತಾರೆ. ಖ್ಯಾತಿಗಳಿಸುವುದು ಮತ್ತೊಬ್ಬರ ಯಶಸ್ಸಾಗಿರುತ್ತದೆ. ನಮ್ಮ ಮಿತಿಯಿಂದ ಹೊರಬಂದು ವಿಭಿನ್ನವಾಗಿ ಚಿಂತಿಸಿದಾಗ ಹೊಸ ಆಲೋಚನೆ ದೊರೆಯುತ್ತದೆ. ಅದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ’ ಎಂದು ತಿಳಿಸಿದರು.

‘ಎಸ್ಸೆಸ್ಸೆಲ್ಸಿಯಲ್ಲಿ ಶೇ 76ರಷ್ಟು ಅಂಕ ಪಡೆದು ಸಾಮಾನ್ಯ ವಿದ್ಯಾರ್ಥಿ ಎನಿಸಿಕೊಂಡಿದ್ದೆ. ಆಗ ಎಸ್‌.ಟಿ.ಡಿ. ಬೂತ್‌ ಇಡಬೇಕೆಂಬುದು ನನ್ನ ಕನಸಾಗಿತ್ತು. ನಿಧಾನಕ್ಕೆ ಅದು ಬದಲಾಗಿ, ಮನೆಯವರು ನನ್ನ ಬಗ್ಗೆ ಆಶ್ಚರ್ಯ ಪಡುವಂತಹ ಏನನ್ನಾದರೂ ಮಾಡಬೇಕೆಂದು ಐಐಟಿಗೆ ಓದಿದೆ. ಒಳ್ಳೆಯ ಕೆಲಸವನ್ನು ಪಡೆದೆ. ಆ ನಂತರ ಪುಸ್ತಕ ಬರೆಯುವ ಹಂಬಲ ಶುರುವಾಯಿತು’ ಎಂದು ತಮ್ಮ ಜೀವನದ ಹಾದಿ ಬಗ್ಗೆ ಮೆಲುಕು ಹಾಕಿದರು.

ಎಸ್‌ಆರ್‌ಎಂ ವಿಶ್ವವಿದ್ಯಾಲಯ, ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್, ಪಿಇಎಸ್‌ ವಿಶ್ವವಿದ್ಯಾಲಯ, ಜೈನ್‌ ವಿಶ್ವವಿದ್ಯಾಲಯ ಸೇರಿದಂತೆ 80ಕ್ಕೂ ಹೆಚ್ಚು  ಶೈಕ್ಷಣಿಕ ಸಂಸ್ಥೆಗಳು ಉತ್ಸವದಲ್ಲಿ ಶೈಕ್ಷಣಿಕ ಅವಕಾಶಗಳ ಬಗ್ಗೆ ಮಾಹಿತಿ ಒದಗಿಸಿದವು.  

ಕಾನೂನು ಕ್ಷೇತ್ರ, ಮಾಧ್ಯಮ ಮತ್ತು ಸಂವಹನಾ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರ, ತಾಂತ್ರಿಕ ವಿನ್ಯಾಸ, ವಾಣಿಜ್ಯ ಮತ್ತು ಕಲೆ, ಔಷಧ ವಿಜ್ಞಾನ ಸೇರಿ ನಾನಾ ಕ್ಷೇತ್ರಗಳ ಉದ್ಯೋಗಾವಕಾಶಗಳ  ಬಗ್ಗೆಯೂ ಮಾಹಿತಿ ನೀಡಲಾಯಿತು.

ಪರ್ಯಾಯ ಕೆರಿಯರ್, ವಿದೇಶದಲ್ಲಿ ಅಧ್ಯಯನ, ಸರ್ಕಾರಿ ವಲಯ ಉದ್ಯೋಗಾವಕಾಶ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಅವಕಾಶಗಳು, ವಾಸ್ತುಶಿಲ್ಪ, ವೈದ್ಯಕೀಯ ಕ್ಷೇತ್ರಗಳ ರಚನಾತ್ಮಕ ಅವಕಾಶಗಳ ಬಗ್ಗೆ ವಿಚಾರಸಂಕಿರಣಗಳು ನಡೆಯಲಿವೆ.  ಶಿಕ್ಷಣ ಸಾಲದ ಬಗ್ಗೆ  ಮಾಹಿತಿಯೂ  ಇಲ್ಲಿ ಲಭ್ಯ.

ಕೆರಿಯರ್‌ ಉತ್ಸವದ ಕುರಿತು
* ಸಿಇಟಿ, ನೀಟ್, ಸಿಎ-ಸಿಪಿಟಿ ಅಣಕು ಪರೀಕ್ಷೆ
* ನಾನಾ ಶೈಕ್ಷಣಿಕ ಸಂಸ್ಥೆಗಳಿಂದ ಕೋರ್ಸ್‌ಗಳ ಕುರಿತು ಮಾಹಿತಿ
* ಡಿ. 3, 4 ಎರಡು ದಿನಗಳ ಉತ್ಸವ
* ನಗರದ ನಿಮ್ಹಾನ್ಸ್‌ ಕನ್ವೆಷನ್‌ ಸೆಂಟರ್‌ನಲ್ಲಿ ಆಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT