ADVERTISEMENT

‘ಯಾವ ಪುರುಷಾರ್ಥಕ್ಕೆ ಶಾಸಕನಾಗಿರಲಿ’

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಸಮಾವೇಶದಲ್ಲಿ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು
ಸಮಾವೇಶದಲ್ಲಿ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು   

ಬೆಂಗಳೂರು: ‘ರಾಜೀವ್‌ಗಾಂಧಿ ವಸತಿ ನಿಗಮದ ಅಧಿಕಾರಿಗಳು ಬಡವರಿಗೆ ಹಕ್ಕುಪತ್ರ ವಿತರಿಸಲು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅದನ್ನು ಸರಿಪಡಿ ಸಲು ಆಗದಿದ್ದ ಮೇಲೆ ನಾನು ಯಾವ ಪುರುಷಾರ್ಥಕ್ಕೆ ಶಾಸಕನಾಗಿರಬೇಕು’ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ಬೇಸರ ವ್ಯಕ್ತಪಡಿಸಿದರು.

‘ವಸತಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಉಲ್ಲಾಳ ವಾರ್ಡ್‌ನಲ್ಲಿ ಕಾಂಗ್ರೆಸ್‌ ವತಿಯಿಂದ ಭಾನುವಾರ ಆಯೋಜಿಸಿದ್ದ ಸಮಾವೇಶದಲ್ಲಿ ‘ಮನೆ ಮನೆಗೆ ಕಾಂಗ್ರೆಸ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಕ್ಷೇತ್ರ ವ್ಯಾಪ್ತಿಯಲ್ಲಿ ಭೂಮಿ ವಿಷಯಕ್ಕೆ ಕಾರ್ಯಕರ್ತರೊಬ್ಬರು ನಡೆಸಿದ ಪುಂಡಾಟಿಕೆಯನ್ನು ನೆಪವಾಗಿಟ್ಟುಕೊಂಡು ಶಾಸಕ ಆರ್‌. ಅಶೋಕ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಸಾಮರ್ಥ್ಯವಿದ್ದರೆ, ನನ್ನ ಎದುರು ಸ್ಪರ್ಧಿಸಿ ಚುನಾವಣೆ ಗೆಲ್ಲಲಿ’ ಎಂದು ಸವಾಲು ಹಾಕಿದರು.

ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಕ್ಕೆ ಜೈಕಾ ಸಾಲ ನೀಡಲು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಯಾವುದೇ ಸಹಕಾರ ನೀಡಲಿಲ್ಲ. ಅದರ ಬದಲು ಯೋಜನೆಗೆ ಅಡ್ಡಿಪಡಿಸುವ ಕೆಲಸ ಮಾಡಿದರು ಎಂದು ಆರೋಪಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.