ADVERTISEMENT

ಯುಜಿಸಿ, ಉನ್ನತ ಶಿಕ್ಷಣ ಪರಿಷತ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:09 IST
Last Updated 25 ನವೆಂಬರ್ 2015, 20:09 IST

ಬೆಂಗಳೂರು: ‘ರಾಜ್ಯದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ 2006ರ ಜ.1 ಕ್ಕಿಂತ ಮೊದಲು ನಿವೃತ್ತಿ ಹೊಂದಿದ ಬೋಧಕ, ಬೋಧಕೇತರ ಸಿಬ್ಬಂದಿಗೆ ಕೇಂದ್ರದ ಆರನೇ ವೇತನ ಆಯೋಗದ ಅನುಸಾರ ನಿವೃತ್ತ ವೇತನ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬ ರಿಟ್‌ ಅರ್ಜಿ ಸಂಬಂಧ ಯುಜಿಸಿ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ, ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಸಂಬಂಧ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿವೃತ್ತ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಸಿದ್ದಗಂಗಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

‘2006ರ ಜನವರಿ 1ಕ್ಕೂ ಮೊದಲು ನಿವೃತ್ತಿ ಹೊಂದಿದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಉಪನ್ಯಾಸಕರು, ರೀಡರ್‌ಗಳು, ಪ್ರೊಫೆಸರ್‌ಗಳು, ದೈಹಿಕ ಶಿಕ್ಷಕರು ಮತ್ತು ಗ್ರಂಥಪಾಲಕರು ಆರನೇ ವೇತನ ಆಯೋಗದಿಂದ ವಂಚಿತರಾಗಿದ್ದಾರೆ. ಇವರೆಲ್ಲಾ ಈಗ ಇಳಿವಯಸ್ಸಿನಲ್ಲಿದ್ದಾರೆ.

ಈಗಾಗಲೇ ದೇಶದ ಬಹುತೇಕ ವಿಶ್ವವಿದ್ಯಾಲಯಗಳ ಸಿಬ್ಬಂದಿ ಈ ವೇತನ ಶ್ರೇಣಿಯ ಲಾಭ ಪಡೆಯುತ್ತಿದ್ದರೂ ರಾಜ್ಯ ಸರ್ಕಾರ  ಮಾತ್ರ ಅನುಷ್ಠಾನಕ್ಕೆ ಮುಂದಾಗಿಲ್ಲ’ ಎಂದು ಅರ್ಜಿಯಲ್ಲಿ ದೂರಲಾಗಿದೆ. ‘ಆರನೇ ವೇತನ ಆಯೋಗದ ವ್ಯಾಪ್ತಿಯಡಿ ನಿವೃತ್ತ ಸಿಬ್ಬಂದಿಯನ್ನೂ ಪರಿಗಣಿಸಬೇಕು ಎಂದು ಉನ್ನತ ಶಿಕ್ಷಣ ಪರಿಷತ್‌ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಅದನ್ನು ತಿರಸ್ಕರಿಸಲಾಗಿದೆ. 

ಇದನ್ನು ಪ್ರಶ್ನಿಸಿ ಈ ಹಿಂದೆ ಸಲ್ಲಿಸಲಾಗಿದ್ದ  ರಿಟ್‌ ಅರ್ಜಿಯಲ್ಲಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಆದೇಶಿಸಲಾಗಿತ್ತು. ಆದರೆ ಸರ್ಕಾರ ಈ ಆದೇಶವನ್ನು ಕಡೆಗಣಿಸಿದೆ. ಆದ್ದರಿಂದ  ಉನ್ನತ ಶಿಕ್ಷಣ ಪರಿಷತ್‌ನ ಶಿಫಾರಸು ಪರಿಗಣಿಸುವಂತೆ  ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಪುನಃ ಸಲ್ಲಿಸಲಾಗಿರುವ ಈ ರಿಟ್‌ ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.