ADVERTISEMENT

ಯುಜಿಸಿ ಮಾದರಿ ವೇತನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ‘ವಿಶ್ವವಿದ್ಯಾನಿಲಯಗಳ ಬೋಧಕೇತರ ನೌಕರರಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಥವಾ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ನೀಡಬೇಕು’ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟ ಒತ್ತಾಯಿಸಿದೆ.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಂಕರ್, ‘ವಿ.ವಿ.ಗಳಲ್ಲಿ ಬೋಧಕ ವರ್ಗಕ್ಕೆ ಯುಜಿಸಿ ಮಾದರಿಯಲ್ಲಿ ವೇತನ ನೀಡಲಾಗುತ್ತಿದೆ. ಆದರೆ, ಬೋಧಕೇತರ ವರ್ಗಕ್ಕೆ ಈ ವೇತನ ನೀಡದೆ ತಾರತಮ್ಯ ಮಾಡಲಾಗಿದೆ’ ಎಂದು ದೂರಿದರು.

‘ಕೇಂದ್ರ ಸರ್ಕಾರವು ಯುಜಿಸಿ ವೇತನ ಶ್ರೇಣಿಯನ್ನು ವಿ.ವಿ.ಗಳಿಗೆ ಅಳವಡಿಸಿಕೊಳ್ಳಲು ನಿಯಮಾವಳಿಗಳನ್ನು 2008ರಲ್ಲಿ ರೂಪಿಸಿತ್ತು. ಬೋಧಕೇತರ ನೌಕರರಿಗೂ ಯುಜಿಸಿ ವೇತನ ಶ್ರೇಣಿ ಅಳವಡಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಒಂಬತ್ತು ವರ್ಷಗಳು ಕಳೆದರೂ ವೇತನ ಶ್ರೇಣಿಯನ್ನು ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವಿ.ವಿ.ಗಳ ಬೋಧಕೇತರರನ್ನು ರಾಜ್ಯ ಸರ್ಕಾರದ ನೌಕರರ ವರ್ಗದಲ್ಲಾಗಲಿ ಅಥವಾ ಕೇಂದ್ರ ಸರ್ಕಾರಿ ನೌಕರರ ವರ್ಗದಲ್ಲಾಗಲಿ ಪರಿಗಣಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಲತಾಯಿ ಧೋರಣೆಯಿಂದಾಗಿ ನೌಕರರ ಭದ್ರತೆ, ವೈದ್ಯಕೀಯ ಸೌಲಭ್ಯ, ಮಾತೃತ್ವ ರಜೆ ಸವಲತ್ತುಗಳು ಸಿಗುತ್ತಿಲ್ಲ’ ಎಂದರು.

‘ವಿ.ವಿ.ಗಳಲ್ಲಿ ನಿಯಮ ಮತ್ತು ನಿಬಂಧನೆಗಳು ಬೋಧಕ ಹಾಗೂ ಬೋಧಕೇತರರಿಗೆ ಒಂದೇ ಇವೆ. ಆದರೂ, ಬೋಧಕ ವರ್ಗಕ್ಕೆ 62 ವರ್ಷಕ್ಕೆ ನಿವೃತ್ತಿ ಹಾಗೂ ಬೋಧಕೇತರರಿಗೆ 60 ವರ್ಷಕ್ಕೆ ನಿವೃತ್ತಿಯನ್ನು ನಿಗದಿಪಡಿಸಲಾಗಿದೆ. ಬೋಧಕೇತರರಿಗೂ ನಿವೃತ್ತಿಯನ್ನು 62 ವರ್ಷಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.