ADVERTISEMENT

ರಾಜೀವ್‌ಗಾಂಧಿ ವಿವಿಯಲ್ಲಿ ಕಳವು

ಗಾಂಧೀಜಿ ಭಾವಚಿತ್ರ ದೋಚಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 6 ಮೇ 2015, 20:31 IST
Last Updated 6 ಮೇ 2015, 20:31 IST

ಬೆಂಗಳೂರು: ಜಯನಗರದ  ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು, ಕುಲಸಚಿವರ ಕಾರ್ಯಾಲಯದ ಬೀಗ ಮುರಿದು  ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ, ಮೊಬೈಲ್ ಹಾಗೂ ಧ್ವನಿಮುದ್ರಣ ಉಪಕರಣವನ್ನು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ರಾತ್ರಿ 2 ಗಂಟೆ ಸುಮಾರಿಗೆ ಆವರಣಕ್ಕೆ ನುಗ್ಗಿದ ಇಬ್ಬರು ಕಳ್ಳರು, ವಿವಿ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರ ಕಚೇರಿ ಬೀಗ ಮುರಿದು ಕೃತ್ಯ ಎಸಗಿದ್ದಾರೆ. ಮಂಗಳವಾರ ಬೆಳಿಗ್ಗೆ ಭದ್ರತಾ ಸಿಬ್ಬಂದಿ ಕಚೇರಿ ಬಳಿ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿವಿಯ ಭದ್ರತೆಗೆ 10 ಮಂದಿ ಕಾವಲುಗಾರರನ್ನು ನಿಯೋಜಿಸಲಾಗಿದೆ. ಸೋಮವಾರ ರಾತ್ರಿ ಪಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ಕಣ್ತಪ್ಪಿಸಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಸಿ.ಸಿ ಕ್ಯಾಮೆರಾಗಳಲ್ಲಿ ಕಳ್ಳರ ಚಲನವಲನಗಳು ದಾಖಲಾಗಿವೆ.

ವಿವಿ ಸಿಬ್ಬಂದಿ ಹಾಗೂ ಕಾವಲುಗಾರರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಆಸ್ಪತ್ರೆ ಕಡೆ ಇರುವ ಮರವನ್ನು ಹತ್ತಿ ಕಳ್ಳರು ಆವರಣ ಪ್ರವೇಶಿಸಿರುವ ಸಾಧ್ಯತೆ ಇದೆ. ಹೀಗಾಗಿ ಆ ಮರವನ್ನು ಕಡಿಯಲು ನಿರ್ಧರಿಸಲಾಗಿದೆ.

ಜತೆಗೆ ಪ್ರತಿ ಮಹಡಿಗೂ  ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ವಿವಿ ಮೂಲಗಳು ತಿಳಿಸಿವೆ.
‘ವಿವಿಯ ಸಿಂಡಿಕೇಟ್ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಹೀಗಾಗಿ ಸಭೆಯ ಚರ್ಚೆಗಳ ಬಗ್ಗೆ ತಿಳಿದುಕೊಳ್ಳಲು ಒಳಗಿನವರೇ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ’ ಎಂದು ಮೂಲಗಳು ಹೇಳಿವೆ. ತಿಲಕ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ವಿವಿಯ ಸ್ನಾತಕೋತ್ತರ ಪರೀಕ್ಷೆ ಉತ್ತರ ಪತ್ರಿಕೆಗಳು ಅದಲು ಬದಲಾಗಿದ್ದ ಸಂಗತಿ ಆಂತರಿಕ ತನಿಖೆಯಿಂದ ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.