ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 20:33 IST
Last Updated 18 ಏಪ್ರಿಲ್ 2015, 20:33 IST

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಶನಿವಾರ ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳಲ್ಲಿ  ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ಗದಗ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಉಡುಪಿಯಲ್ಲಿ ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಕರಾವಳಿಯ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಿತ್ತು. ದೂರದ ಊರುಗಳಿಂದ ಬರಬೇಕಿದ್ದ ಕೆಲವೇ ಕೆಲವು ಬಸ್‌ಗಳು ಮಾತ್ರ ಬರಲಿಲ್ಲ.

ಬಂದ್‌ಗೆ ಹೈದರಾಬಾದ್ ಕರ್ನಾಟಕದ ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೀದರ್‌ನಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆಗಿಳಿದು ಸಂಚಾರಕ್ಕೆ ತಡೆಯೊಡ್ಡಿದ್ದರು. ಆಗ ಪೊಲೀಸರು 35 ಜನರನ್ನು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ಕಲಬುರ್ಗಿಯಲ್ಲಿ ಕನ್ನಡಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ಮಾಡಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದವು.

ಯಾದಗಿರಿಯಲ್ಲಿ ಕೆಲ ಸಂಘಟನೆಗಳು ಮಾತ್ರ ಬೆಂಬಲ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು. ರಾಯಚೂರು ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ದಕ್ಷಿಣ ಕರ್ನಾಟಕದಲ್ಲಿ ಯಶಸ್ವಿ:  ಮೈಸೂರು ವಿಭಾಗದ ಜಿಲ್ಲೆಗಳ ಪೈಕಿ ಕೊಡಗಿನಲ್ಲಿ ಮಾತ್ರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳಿಗ್ಗೆ ಸಾರಿಗೆ, ವ್ಯಾಪಾರ ವಹಿವಾಟು ಬಹುತೇಕ ಸ್ಥಗಿತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಬಂದ್‌ ಬೆಂಬಲಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಬೆಂಬಲಿಗರು ಪ್ರತಿಭಟನೆ, ಮಾನವ ಸರಪಳಿ, ಬೈಕ್‌ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು ಬಂದ್‌  ಯಶಸ್ವಿ: ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಿಕ್ಕಬಳ್ಳಾಪುರದಲ್ಲಿ ಕನ್ನಡಪರ ಮತ್ತು ರೈತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿದರು.

ಕೋಲಾರದಲ್ಲೂ ತಮಿಳುನಾಡು ವಿರುದ್ಧ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಂದ್‌ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗ, ಚಿತ್ರದುರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ದಾವಣಗೆರೆಯಲ್ಲಿ ಬಂದ್‌ ಯಶಸ್ವಿಯಾಗಿದೆ.  ದಾವಣಗೆರೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. 

ಶಿವಮೊಗ್ಗದಲ್ಲಿ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.   ಗಾಂಧಿ ಬಜಾರ್, ಬಿ.ಎಚ್.ರಸ್ತೆ, ನೆಹರು ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳು ಬಾಗಿಲು ತೆರೆದಿರಲಿಲ್ಲ. ಜಿಲ್ಲೆಯ ಇತರೆ ಭಾಗಗಳಲ್ಲೂ ಇದೇ ರೀತಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
(ವಿವಿಧ  ಬ್ಯುರೊಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.