ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಹಾಲಿ ಪದ್ಧತಿ ಮುಂದುವರಿಕೆ

ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2016, 19:41 IST
Last Updated 19 ಅಕ್ಟೋಬರ್ 2016, 19:41 IST

ಬೆಂಗಳೂರು: ‘ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಪ್ರಸಕ್ತ ಜಾರಿಯಲ್ಲಿರುವ ಪದ್ಧತಿಯಲ್ಲೇ  ನಡೆಯಲಿದೆ’ ಎಂದು ಸರ್ಕಾರ ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಜಿ.ಶಿವಣ್ಣ ಅವರು, ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಈ ಕುರಿತಂತೆ ಮಾಹಿತಿ ನೀಡಿದರು.

‘ನ್ಯಾಯಮೂರ್ತಿ ಎಚ್‌.ಎಸ್. ನಾಗಮೋಹನ ದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಅನುಸರಿಸಬೇಕಾದ ಮಾನದಂಡಗಳ ಕರಡನ್ನು ಅ.5ರಂದು ಸರ್ಕಾರಕ್ಕೆ ಸಲ್ಲಿಸಿದೆ.  ಅಗತ್ಯವಾದರೆ  ಇದಕ್ಕೆ ತಿದ್ದುಪಡಿ ಮಾಡಲಾಗುವುದು. ಆದರೆ, 2017ನೇ ಸಾಲಿನಿಂದ ಇದನ್ನು ಅನುಸರಿಸಲಾಗುವುದು’ ಎಂದು ಶಿವಣ್ಣ ನ್ಯಾಯಪೀಠಕ್ಕೆ ವಿವರಿಸಿದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಶಂಕರಪ್ಪ ಅವರು, ‘ಪ್ರಸ್ತಕ ಸಾಲಿನಿಂದಲೇ ತಜ್ಞರ ಸಮಿತಿ  ಸೂಚಿಸಿದ ಮಾರ್ಗಸೂಚಿ ಅನ್ವಯ  ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಇಲ್ಲದಿದ್ದರೆ ಅರ್ಹತೆ ಇಲ್ಲದವರಿಗೂ ಪ್ರಶಸ್ತಿ ದೊರೆಯುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ಹಾಲಿ  ಇರುವ ಪದ್ಧತಿಯಂತೆಯೇ ಆಯ್ಕೆ ಪ್ರಕ್ರಿಯೆ ನಡೆಯಲಿ.  ಆದರೆ, ಇದೇ 25ರೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ಮುಚ್ಚಿದ ಲಕೋಟೆಯಲ್ಲಿ ಆಯ್ಕೆ ಪಟ್ಟಿಯನ್ನು ಕೋರ್ಟ್‌ಗೆ ನೀಡಲಿ. ಸರ್ಕಾರ ಯಾವ ರೀತಿ ಹಾಗೂ ಯಾರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂಬುದನ್ನು ಪರಿಶೀಲಿಸೋಣ’ ಎಂದು ಹೇಳಿ ವಿಚಾರಣೆ ಮುಂದೂಡಿದರು.

‘ನನಗೆ ಅರ್ಹತೆ ಇದ್ದರೂ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ’ ಎಂದು ದೂರಿ ಸಾಹಿತಿ ಬಿ.ವಿ.ಸತ್ಯನಾರಾಯಣ ಸಲ್ಲಿಸಿರುವ ಅರ್ಜಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.