ADVERTISEMENT

ರಾಜ್ಯ ಸರ್ಕಾರಕ್ಕೆ ನೋಟಿಸ್‌

ದಂತ ವೈದ್ಯಕೀಯ ಸ್ನಾತಕೋತ್ತರ ಸೀಟು ಹಂಚಿಕೆ ಪ್ರಶ್ನಿಸಿ ರಿಟ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:11 IST
Last Updated 31 ಮಾರ್ಚ್ 2015, 20:11 IST
ರಾಜ್ಯ ಸರ್ಕಾರಕ್ಕೆ ನೋಟಿಸ್‌
ರಾಜ್ಯ ಸರ್ಕಾರಕ್ಕೆ ನೋಟಿಸ್‌   

ಬೆಂಗಳೂರು: ದಂತ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯ ಅಂಕ ನೀಡಿಕೆಯ ಮಾನದಂಡ ಪ್ರಶ್ನಿಸಲಾಗಿರುವ ರಿಟ್‌ ಅರ್ಜಿಯನ್ನು  ಹೈಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದೆ.

ಈ ಸಂಬಂಧ ಹಿರಿಯ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಹಾಗೂ ರಾಘವೇಂದ್ರ ಎಸ್. ಚೌಹಾಣ್‌ ಅವರಿದ್ದ ವಿಭಾಗೀಯ ಪೀಠವು, ಕರ್ನಾಟಕ ಪರೀಕ್ಷಾ ಮಂಡಳಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ದಂತ ವೈದ್ಯಕೀಯ ಮಂಡಳಿ ಹಾಗೂ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಲು ಆದೇಶಿಸಿದೆ.

‘ರಾಜ್ಯದ ದಂತ ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ  ಶೇಕಡ 50ರಷ್ಟು ಮೀಸಲು ಇರುತ್ತದೆ. ಈ ಬಾರಿ ರಾಜ್ಯವು ಪ್ರವೇಶ ಪರೀಕ್ಷೆ ನಡೆಸಿಲ್ಲ. ಎಲ್ಲರೂ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಅಖಿಲ ಭಾರತ ದಂತ ವೈದ್ಯಕೀಯ ಸ್ನಾತಕೋತ್ತರ ಪ್ರವೇಶ ಪರೀಕ್ಷೆಯನ್ನೇ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ನಕಾರಾತ್ಮಕ ಅಂಕಗಳ ಮಾನದಂಡ ಅನುಸರಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಈ ವ್ಯವಸ್ಥೆಯಿಲ್ಲ. ಇದರಿಂದ ಪ್ರವೇಶ ಪಡೆಯುವಲ್ಲಿ ನಮಗೆ ಅನ್ಯಾಯವಾಗಿದೆ’ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ವಜಾ ಮಾಡುವ ಎಚ್ಚರಿಕೆ

ಬೆಂಗಳೂರು: ‘ಹೈಕೋರ್ಟ್‌ ಆದೇಶವನ್ನು ಸರಿಯಾಗಿ  ಪಾಲಿಸದ ಅಧಿಕಾರಿಗಳ ಸಂಬಳವನ್ನು ತಡೆಹಿಡಿಯಬೇಕಾದೀತು ಅಥವಾ ಸಂಬಂಧಿಸಿದ ಅಧಿಕಾರಿಗಳನ್ನು ಸೇವೆಯಿಂದಲೇ ವಜಾ ಮಾಡಬೇಕಾದೀತು’ ಎಂದು ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠವು ಮಂಗಳವಾರ ಎಚ್ಚರಿಸಿದೆ.

ದೇವರಜೀವನಹಳ್ಳಿಯ ರಾಜಕಾಲುವೆ ಸ್ವಚ್ಛಗೊಳಿಸುವುದು ಹಾಗೂ ಅತಿಕ್ರಮಣ ತೆರವುಗೊಳಿಸುವ ಕುರಿತಾದ ಸಾರ್ವಜನಿಕ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಹಾಗೂ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ವಿಭಾಗೀಯ ಪೀಠವು ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಕಾಲುವೆ ಸ್ವಚ್ಛಗೊಳಿಸಲು ಹಾಗೂ ಒತ್ತುವರಿ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಒಂದು ತಿಂಗಳ ಹಿಂದೆಯೇ ಕೋರ್ಟ್‌ ಸೂಚನೆ ನೀಡಿದೆ. ಆದರೆ ಅಧಿಕಾರಿಗಳು ಆಗ ನೀಡಿದ್ದ  ಉತ್ತರವನ್ನೇ ಈಗಲೂ ನೀಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಪೀಠವು, ಯಾವ ಅಧಿಕಾರಿಗಳು ಕೋರ್ಟ್‌ ಆದೇಶವನ್ನು ಪಾಲಿಸುವುದಿಲ್ಲವೊ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ದೇಶಿಸಬೇಕಾದೀತು ಎಂದಿದೆ. ಆರ್‌ಟಿಐ ಕಾರ್ಯಕರ್ತ ಪಿ.ಉದಯಶಂಕರ್‌ ಹಾಗೂ ಇತರ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದು. ಬೆಂಜಮಿನ್‌ ವಿ.ಎ.ಜೋಸೆಫ್‌ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.

ADVERTISEMENT

‘ರಾಜ್ಯದಲ್ಲಿ 250 ದಂತ ವೈದ್ಯಕೀಯ ಸ್ನಾತಕೋತ್ತರ ಸೀಟುಗಳಿದ್ದು  ಪ್ರಸಕ್ತ ವರ್ಷ ಪರೀಕ್ಷೆ ಎದುರಿಸಿದ ಒಂದು ಸಾವಿರ ವಿದ್ಯಾರ್ಥಿಗಳಲ್ಲಿ 142 ವಿದ್ಯಾರ್ಥಿಗಳು ಮಾತ್ರವೇ  ಆಯ್ಕೆಯಾಗಿದ್ದಾರೆ.  ನಕಾರಾತ್ಮಕ ಅಂಕದ ಮಾನದಂಡದಿಂದ 108 ಸೀಟುಗಳು ಖಾಲಿ ಉಳಿದಿವೆ. ಉಳಿದ ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗೆ ನೀಡಲಾಗುತ್ತಿದೆ. ಇದು ಅನ್ಯಾಯ ಎಂದು ಅರ್ಜಿದಾರರು’ ಹೇಳಿದ್ದಾರೆ.

ಮಂಗಳವಾರ ಅರ್ಜಿ ವಿಚಾರಣೆ ವೇಳೆ ಹಿರಿಯ ವಕೀಲ ಬಿ.ಎಂ.ಶ್ಯಾಮಪ್ರಸಾದ್ ಈ ಕುರಿತಾದ ಹಲವು ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು.  ಡಾ. ಎನ್‌.ಅಮೊಲ್‌ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳೂ ಸೇರಿದಂತೆ 91 ಜನರು ಈ ಅರ್ಜಿ ಸಲ್ಲಿಸಿದ್ದು, ಪಿ.ಬಿ.ಅಜಿತ್‌ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.

ಚರ್ಚ್‌ಗೆ ಬೀಗ ಹಾಕಲು ಸೂಚನೆ: ಕಮ್ಮನಹಳ್ಳಿ ಪ್ರದೇಶದಲ್ಲಿ ಉಪನಿಯಮ (ಬೈಲಾ) ಉಲ್ಲಂಘಿಸಿ  ನಿರ್ಮಾಣ ಕಾರ್ಯ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ಚರ್ಚ್‌ ಕಟ್ಟಡಕ್ಕೆ ಬೀಗ ಹಾಕಲು ಹೈಕೋರ್ಟ್‌ ಸೂಚಿಸಿದೆ.

ಈ ಕುರಿತಾದ ಯಾವುದೇ ನಿರ್ಧಾರವನ್ನು  ಬಿಬಿಎಂಪಿ ಕೈಗೊಳ್ಳಬೇಕು.  ಅಲ್ಲಿಯವರೆಗೂ ಬೀಗದ ಕೀ ಬಿಬಿಎಂಪಿ ವಶದಲ್ಲಿ ಇರಬೇಕು ಎಂದು ಆದೇಶಿಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣವನ್ನು ವಿಲೇವಾರಿ ಮಾಡಿದೆ.

‘ಇಲ್ಲಿನ ಸೇಂಟ್‌ ಫ್ಲ್ಯೂಸ್‌ ಚರ್ಚ್‌ನ ಆಡಳಿತ ಮಂಡಳಿಯವರು ಕಟ್ಟಡ ರಚನೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಿಲ್ಲ ಮತ್ತು ಅನಧಿಕೃತ ಕಟ್ಟಡದ ಭಾಗವನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಗಮನ ಹರಿಸಿಲ್ಲ’ ಎಂದು ಆರೋಪಿಸಿ ಬಿಬಿಎಂಪಿ ಕೋರ್ಟ್‌ ಮೆಟ್ಟಿಲೇರಿದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.