ADVERTISEMENT

ರಾಜ್ಯ ಸರ್ಕಾರದ ಸಾಧನೆ ತೃಪ್ತಿ ಇದೆ: ಹರ್ದೀಪ್‌ ಸಿಂಗ್‌ ಪುರಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:48 IST
Last Updated 14 ಡಿಸೆಂಬರ್ 2017, 19:48 IST
ಹರ್ದೀಪ್‌ ಸಿಂಗ್‌ ಪುರಿ
ಹರ್ದೀಪ್‌ ಸಿಂಗ್‌ ಪುರಿ   

ಬೆಂಗಳೂರು: ಸ್ವಚ್ಛ ಭಾರತ, ಪ್ರಧಾನ ಮಂತ್ರಿ ಅವಾಸ್‌ ಯೋಜನೆ (ಪಿಎಂಎವೈ), ಅಮೃತ್ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಸಾಧನೆ ತೃಪ್ತಿಕರವಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂಎವೈ ಯೋಜನೆಯಡಿ ಬಡವರಿಗೆ 30 ತಿಂಗಳಲ್ಲಿ 1.95 ಲಕ್ಷ ಮನೆ ಕಟ್ಟಲು ₹ 8,797 ಕೋಟಿಗೆ ಮಂಜುರಾತಿ ನೀಡಲಾಗಿದೆ. ಈ ಪೈಕಿ 17,664 ಮನೆಗಳು ನಿರ್ಮಾಣವಾಗಿವೆ ಎಂದು ಹೇಳಿದರು.

ದಾವಣಗೆರೆ, ಮಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ–ಧಾರವಾಡ ಮತ್ತು ಬೆಂಗಳೂರು ನಗರಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ₹ 4,745 ಕೋಟಿ ಮೊತ್ತದ 108 ಯೋಜನೆಗಳು ವಿವಿಧ ಹಂತದಲ್ಲಿ ಅನುಷ್ಠಾನಗೊಳ್ಳಲಿವೆ. ಕೇಂದ್ರ ಸರ್ಕಾರ ಮೊದಲ ಕಂತಿನಲ್ಲಿ ₹ 836 ಕೋಟಿ ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ADVERTISEMENT

‘ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವಿನ ಬಹು ನೀರಿಕ್ಷೆಯ ತ್ವರಿತ ಸಾರಿಗೆ ಸೇವೆ(ಬಿಆರ್‌ಟಿಎಸ್) ಯೋಜನೆ ಕಾಮಗಾರಿ 2018ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ತಪ್ಪು ಮಾಹಿತಿ ನೀಡಿದ್ದರೆ ಪರಿಶೀಲಿಸುತ್ತೇನೆ’ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ವಿಶ್ವ ಬ್ಯಾಂಕ್‌ನಿಂದ ₹ 1014 ಕೋಟಿ ನೆರವು ಪಡೆದು ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸಕಾಲಕ್ಕೆ ಹಣ ಬಳಕೆ ಮಾಡಿಕೊಳ್ಳುವುದು ಅನಿವಾರ್ಯ ಎಂದರು.

‘ಬದಾಮಿಯನ್ನು ಪಾರಂಪರಿಕ ಪಟ್ಟಣವಾಗಿ ಅಭಿವೃದ್ಧಿಪಡಿಸಿವ ಯೋಜನೆ ಆರಂಭವಾಗಿದೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಸತ್ಯಾಂಶ ಇಲ್ಲದಿದ್ದರೆ ಪರಿಶೀಲಿಸುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.