ADVERTISEMENT

ರಿಯಾಜ್‌ ವಿರುದ್ಧ ಕ್ರಮಕ್ಕೆ ಪತ್ರ

ಅಶ್ವಿನ್‌, ಅಶೋಕ್‌ ಕುಮಾರ್‌ ಕರೆದೊಯ್ದು ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 20:19 IST
Last Updated 29 ಜುಲೈ 2015, 20:19 IST

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಜಂಟಿ ಆಯುಕ್ತ (ಸಾರ್ವಜನಿಕ ಸಂಪರ್ಕಾಧಿಕಾರಿ) ಸೈಯದ್‌ ರಿಯಾಜ್‌ ವಿರುದ್ಧ  ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ  ಸುಧಾರಣಾ  ಇಲಾಖೆಗೆ ಪತ್ರ ಬರೆದಿದ್ದಾರೆ.

ರಿಯಾಜ್‌ ಬಂಧನದ ಬಗ್ಗೆ ವಿಶೇಷ ತನಿಖಾ ತಂಡವು ಬುಧವಾರ ರಿಜಿಸ್ಟ್ರಾರ್‌   ಕಚೇರಿಗೆ ಮಾಹಿತಿ ನೀಡಿತು.  ರಿಯಾಜ್‌ ಅವರನ್ನು ಎಸ್‌ಐಟಿ ಜುಲೈ 26ರಂದು ಕೋರಮಂಗಲದ ಕ್ಲಿನಿಕ್‌ ಒಂದರಲ್ಲಿ ಬಂಧಿಸಿತ್ತು.

‘ನಿಯಮಗಳ ಪ್ರಕಾರ, ಸರ್ಕಾರಿ ಅಧಿಕಾರಿಯನ್ನು ಪೊಲೀಸ್‌ ಅಥವಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ 48 ಗಂಟೆಗಳ ಬಳಿಕ ಅವರು ಅಮಾನತುಗೊಂಡಂತೆಯೇ. ಲೋಕಾಯುಕ್ತ ಸಂಸ್ಥೆಯ ಜಂಟಿ ಆಯುಕ್ತರ (‍ಪಿಆರ್‌ಒ) ಹುದ್ದೆಯು  ವೃಂದ ಮತ್ತು ನೇಮಕಾತಿ ಅಡಿಯಲ್ಲಿ ಭರ್ತಿಯಾಗುವ ಹುದ್ದೆಯಲ್ಲ. ಈ ಹುದ್ದೆಯನ್ನು ಸೃಷ್ಟಿಸಿದ್ದು ರಾಜ್ಯ ಸರ್ಕಾರ. ಹಾಗಾಗಿ ಈ ಅಧಿಕಾರಿಯ ಅಮಾನತಿನ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಪೊಲೀಸ್‌ ಸಿಬ್ಬಂದಿಯಾಗಿದ್ದ ರಿಯಾಜ್‌ ಅವರನ್ನು ಸರ್ಕಾರವೇ ಲೋಕಾಯುಕ್ತ ಸಂಸ್ಥೆಗೆ ಶಾಶ್ವತ ನೆಲೆಯಲ್ಲಿ ವರ್ಗಾವಣೆ ಮಾಡಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್‌ ಅವರ ಪುತ್ರ ಅಶ್ವಿನ್‌ ಅವರನ್ನು ಬುಧವಾರ ಎಸ್‌ಐಟಿ ಅಧಿಕಾರಿಗಳು ತನಿಖೆ ಸಲುವಾಗಿ ಲೋಕಾಯುಕ್ತ ಕಚೇರಿಯ ಎರಡನೇ ಮಹಡಿಗೆ ಕರೆದೊಯ್ದರು. 

‘ಮಧ್ಯಾಹ್ನ 2.30ರ ಸುಮಾರಿಗೆ ಅಶ್ವಿನ್‌ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ದು ಅಧಿಕಾರಿಗಳು, ಸುಲಿಗೆಗೆ ಸಿಮ್‌ ಕಾರ್ಡ್‌ ಬಳಸಿದ  ಮೊಬೈಲ್‌ ಟವರ್‌ಗಳ ಮಹಜರು ನಡೆಸಿದರು’ ಎಂದು ಮೂಲಗಳು ತಿಳಿಸಿವೆ.

ಮೊದಲ ಎಫ್‌ಐಆರ್‌ ಪ್ರಕಾರ, ಆರೋಪಿಗಳು ದೂರು ನೀಡಿದ ಅಧಿಕಾರಿಯನ್ನು ಪಿಆರ್‌ಒ ಅವರ ಕೊಠಡಿ ಮತ್ತು ಅದರ ‍ಪಕ್ಕದ ಕಾನ್ಫರೆನ್ಸ್‌ ಸಭಾಂಗಣಕ್ಕೆ ಕರೆಸಿ ಮಾತುಕತೆ ನಡೆಸಿದ್ದರು. ಈ ಎರಡು ಕೊಠಡಿಗಳಿಗೆ ಜುಲೈ 25ರಂದು ಎಸ್‌ಐಟಿ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದರು. 

‘ಕಾನ್ಫರೆನ್ಸ್‌ ಸಭಾಂಗಣದ ಬೀಗದ ಕೀಲಿ ಅನೇಕ ವರ್ಷಗಳಿಂದ ರಿಯಾಜ್‌ ಕೈಯಲ್ಲೇ ಇತ್ತು ಎಂಬ ಅಂಶ ಎಸ್‌ಐಟಿ ಗಮನಕ್ಕೆ ಬಂದಿದೆ. ರಿಯಾಜ್ ಉಮ್ರಾ ಯಾತ್ರೆಗೆ ತೆರಳುವುದಕ್ಕೆ ಮುನ್ನ ಈ ಕೀಲಿಯನ್ನು ನ್ಯಾ.ರಾವ್‌ ಅವರಿಗೆ ಹಸ್ತಾಂತರಿಸಿದ್ದರು. ಜೂನ್‌ 10ರಂದು ನ್ಯಾ.ರಾವ್‌ ಅವರು ಲೋಕಾಯುಕ್ತ ಸಂಸ್ಥೆಯ ಆಡಳಿತ ಶಾಖೆಗೆ ಕೀಲಿಯನ್ನು ಹಿಂತಿರುಗಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿ ಅಧಿಕಾರಿಗಳು ಅಶ್ವಿನ್ ಹಾಗೂ ಅಶೋಕ್‌ ಕುಮಾರ್‌ ಅವರನ್ನು    ಕೆಲವು ತಾರಾ ಹೋಟೆಲ್‌ಗಳಿಗೆ ಕರೆದೊಯ್ದು ಸ್ಥಳ ತನಿಖೆ ನಡೆಸಿದರು.  ಅಶೋಕ್‌ ಕುಮಾರ್‌ ಹೇಳಿಕೆಯ ಆಧಾರದಲ್ಲಿ ಅಧಿಕಾರಿಗಳು ಅಶ್ವಿನ್‌ ಅವರನ್ನು ಈ ಹೋಟೆಲ್‌ಗಳಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.  ಆರೋಪಿಗಳ ಮೊಬೈಲ್‌ ಪೋನ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ. ಆರೋಪಿಗಳು, ಸರ್ಕಾರಿ ಅಧಿಕಾರಿಗಳನ್ನು ವಿವಿಧ ತಾರಾ ಹೋಟೆಲ್‌ಗಳಿಗೆ ಕರೆಸಿ  ಲಂಚಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.