ADVERTISEMENT

ರೂ 384 ಕೋಟಿ ಸಾಲದಲ್ಲಿ ಬಸ್‌ ಖರೀದಿಸಿದ ಬಿಎಂಟಿಸಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 20:27 IST
Last Updated 18 ಡಿಸೆಂಬರ್ 2014, 20:27 IST

ಸುವರ್ಣಸೌಧ (ಬೆಳಗಾವಿ): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಳೆದ ಒಂದೂವರೆ ವರ್ಷದಲ್ಲಿ ಬಸ್ ಖರೀದಿಗಾಗಿ ವಾಣಿಜ್ಯ ಬ್ಯಾಂಕ್‌ಗಳಿಂದ  ರೂ 384.50 ಕೋಟಿ ಸಾಲ ತೆಗೆದುಕೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಸ್. ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಿಚ್ಮಂಡ್ ರಸ್ತೆ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ₨ 84.50 ಕೋಟಿ, ಶಾಂತಿನಗರ ಕೆನರಾ ಬ್ಯಾಂಕ್‌ನಿಂದ ₨ 250 ಕೋಟಿ, ಸಿಂಡಿಕೇಟ್ ಬ್ಯಾಂಕ್‌ನಿಂದ ₨ 50 ಕೋಟಿ ಸಾಲ ಪಡೆಯಲಾಗಿದೆ ಎಂದರು.

2013-14ರಲ್ಲಿ ಟಾಟಾ ಬಿಎಸ್-4 ಮಾದರಿಯ 75, ಅಶೋಕ್ ಲೇಲ್ಯಾಂಡ್ ಬಿಎಸ್3 ಮಾದರಿಯ 225, ಅಶೋಕ್ ಲೇಲ್ಯಾಂಡ್ ಬಿಎಸ್-4 ಮಾದರಿಯ (ಮಿಡಿ ಬಸ್) 74, ಅಶೋಕ್ ಲೇಲ್ಯಾಂಡ್ ಬಿಎಸ್-4 ಮಾದರಿಯ 355, ವೋಲ್ವೊ 110 ಸೇರಿದಂತೆ ಒಟ್ಟು 841 ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 187 ಬಸ್‌ಗಳನ್ನು ಖರೀದಿ ಮಾಡಲಾಗಿದೆ. 1028 ಬಸ್‌ಗಳ ಖರೀದಿಗಾಗಿ ₨ 319 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

2009ನೇ ಸಾಲಿನಲ್ಲಿ 98 ಮಾರ್ಕೊಪೋಲೋ ಬಸ್‌ಗಳನ್ನು ಖರೀದಿ ಮಾಡಲಾಗಿತ್ತು. ಈ ಬಸ್‌ಗಳಿಂದ ಭಾರಿ ನಷ್ಟ ಉಂಟಾಗುತ್ತಿದೆ. ಈ ಬಸ್‌ಗಳ ಸೇವೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಡೀಸೆಲ್ ಬೆಲೆಯಲ್ಲಿನ ಹೆಚ್ಚಳದಿಂದ ವೋಲ್ವೊ ಬಸ್ 2013–14ನೇ ಸಾಲಿನಿಂದ ನಷ್ಟ ಅನುಭವಿಸುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.