ADVERTISEMENT

ರೆಸಾರ್ಟ್‌ ಪ್ರವಾಸ ತಪ್ಪಲ್ಲ: ದೇವೇಗೌಡ

ಸುರಕ್ಷಿತವಾದ ಸ್ಥಳದಲ್ಲಿರಲು ಪಕ್ಷದ ನೂತನ ಸದಸ್ಯರಿಗೆ ನಾನೇ ಸಲಹೆ ನೀಡಿದ್ದೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 19:25 IST
Last Updated 31 ಆಗಸ್ಟ್ 2015, 19:25 IST

ಹಾಸನ: ‘ಬಿಬಿಎಂಪಿಗೆ ಜೆಡಿಎಸ್‌ನಿಂದ ಆಯ್ಕೆಯಾಗಿರುವ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ದಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕೆಲವು ದಿನಗಳ ಕಾಲ ಮನೆಯಿಂದ ದೂರ, ಸುರಕ್ಷಿತವಾದ ಜಾಗದಲ್ಲಿ ಇರಿ ಎಂದು ನಾನೇ ಸದಸ್ಯರಿಗೆ ಸಲಹೆ ಕೊಟ್ಟಿದ್ದೆ’ ಎಂದು ಜೆಡಿಎಸ್‌ ಮುಖಂಡ, ಸಂಸದ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ಸೋಮವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ‘ಹಿಂದೆ ಆಪರೇಷನ್‌ ಕಮಲ ನಡೆದಾಗ ನಮ್ಮ ಪಕ್ಷಕ್ಕೆ ದೊಡ್ಡ ಹಾನಿಯಾಗಿತ್ತು. ಬಿಬಿಎಂಪಿ ಫಲಿತಾಂಶ ಬಂದು ಕೆಲವೇ ದಿನಗಳಲ್ಲಿ ಬಿಜೆಪಿ ಮುಖಂಡರೊಬ್ಬರು ‘ಜೆಡಿಎಸ್‌ನ ಐವರು ಸದಸ್ಯರನ್ನು ನಮ್ಮತ್ತ ಸೆಳೆಯುತ್ತೇವೆ’ ಎಂಬ ಹೇಳಿಕೆ ನೀಡಿದ್ದರು’ ಎಂಬುದನ್ನು ಉಲ್ಲೇಖಿಸಿದರು.

‘ಇದರ ಜತೆಗೆ ರಾಷ್ಟ್ರೀಯ ಪಕ್ಷಗಳ ಮುಖಂಡರು ನಮ್ಮ ಮನೆಬಾಗಿಲಿಗೆ ಬಂದು ತುಂಬ ಒತ್ತಡ ಹೇರುತ್ತಿದ್ದಾರೆ ಎಂದು ಕೆಲವು ಸದಸ್ಯರು ದೂರಿದ್ದರು. ಈ ಕಾರಣಕ್ಕೆ ಪಕ್ಷ ಒಡೆಯಬಾರದು ಎಂಬ ಉದ್ದೇಶದಿಂದ ಕೆಲವು ದಿನ ಮನೆಯಿಂದ ದೂರ ಇದ್ದುಬಿಡಿ, ಪೊಲೀಸರ ರಕ್ಷಣೆಯನ್ನೂ ಪಡೆಯಿರಿ ಎಂದು ನಾನೇ ಸದಸ್ಯರಿಗೆ ಸೂಚಿಸಿದ್ದೆ.

ನಮ್ಮ ಮುಖಂಡರು ಮತ್ತು ಶಾಸಕರು ಎಲ್ಲ ಸದಸ್ಯರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ. ಇದರಲ್ಲಿ ತಪ್ಪಿಲ್ಲ. ಮೇಯರ್‌ ಆಯ್ಕೆಗೆ ಚುನಾವಣೆ ಘೋಷಣೆಯಾದ ಬಳಿಕ ಪಕ್ಷದ ಮುಖಂಡರ ಸಭೆ ಕರೆದು ಮುಂದಿನ ನಡೆಯ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.

ಯಾರೂ ಬಂದಿಲ್ಲ: ‘ಎಚ್‌.ಡಿ. ಕುಮಾರಸ್ವಾಮಿ ಅವರ ಜೊತೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾತನಾಡಿದ್ದಾರೆ, ರಾಜನಾಥ ಸಿಂಗ್‌ ಮಾತನಾಡಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್‌ ಬೆಂಬಲ ಕೇಳಿದ್ದಾರೆ ಎಂಬ ಸುದ್ದಿಗಳೆಲ್ಲವೂ ಸತ್ಯಕ್ಕೆ ದೂರವಾದವು. ಸದಾನಂದಗೌಡ ಅವರು ನನ್ನ ಮನೆಗೆ ಬಂದಿರುವುದನ್ನು ಬಿಟ್ಟರೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕಳಸಾ ಬಂಡೂರಿ ಹೋರಾಟ ವಿಚಾರದಲ್ಲಿ ನಿಮ್ಮ ಪಕ್ಷದ ಅಧ್ಯಕ್ಷ ಪ್ರಹ್ಲಾದ ಜೋಷಿ ಹಾಗೂ ಜಗದೀಶ ಶೆಟ್ಟರ್‌ ಅವರು ನಮ್ಮ ಪಕ್ಷವನ್ನು ಹೀನಾಯವಾಗಿ ನಿಂದಿಸಿದ್ದಾರೆ. ನಿಮಗೆ ಹೇಗೆ ಬೆಂಬಲ ಕೊಡಲಿ?’ ಎಂದು ಮನೆಗೆ ಬಂದಿದ್ದ ಸದಾನಂದಗೌಡ ಅವರಿಗೆ ಹೇಳಿ ಕಳುಹಿಸಿದ್ದೇನೆ. ಬಿಬಿಎಂಪಿಯಲ್ಲಿ ನಾವು ಯಾವುದಾದರೂ ಒಂದು ಪಕ್ಷ ಬೆಂಬಲಿಸಲೇಬೇಕು ಎಂಬ ನಿಯಮ ಇಲ್ಲ. ವಿರೋಧ ಪಕ್ಷದಲ್ಲಿ ಕೂರಲೂ ಸಿದ್ಧ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ಅನ್ನು ಉಳಿಸಬೇಕು ಎಂಬುದೇ ನಮ್ಮ ಹೋರಾಟ’ ಎಂದು ದೇವೇಗೌಡ ಹೇಳಿದರು.

*
ಟಿ.ವಿ.ಯಲ್ಲಿ ಹೆಣ್ಣುಮಗಳೊಬ್ಬಳು ರಾಜಕೀಯ ನೈತಿಕತೆ ಬಗ್ಗೆ ಮಾತನಾಡಿರುವುದದಕ್ಕೆ ಉತ್ತರ ಕೊಡಬಲ್ಲೆ. ನೈತಿಕತೆಯ ಬಗ್ಗೆ ಮಾತನಾಡುವ ಅರ್ಹತೆ ಇಂದು ಯಾವ ಪಕ್ಷಕ್ಕೂ ಇಲ್ಲ’
-ಎಚ್‌.ಡಿ. ದೇವೇಗೌಡ

*
ಮುಖ್ಯಾಂಶಗಳು
* ಮೇಯರ್‌ ಚುನಾವಣೆ ಘೋಷಣೆ ನಂತರ ಮುಖಂಡರ ಸಭೆ
* ಸದಾನಂದಗೌಡರನ್ನು ಬಿಟ್ಟರೆ ಯಾರೂ ಸಂಪರ್ಕಿಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.