ADVERTISEMENT

ರೈತರ ಆತ್ಮಹತ್ಯೆ ತಡೆಗೆ ಕಾರ್ಯಪಡೆ ರಚನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 19:30 IST
Last Updated 28 ಜುಲೈ 2015, 19:30 IST

ಬೆಂಗಳೂರು: ನಗರ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟಲು ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಿದೆ.
ಜಿಲ್ಲಾಮಟ್ಟಕ್ಕೆ ಸಹಕಾರ ಸಂಘಗಳ ರಿಜಿಸ್ಟ್ರಾರ್  ಮತ್ತು ಉಪವಿಭಾಗ ಮಟ್ಟಕ್ಕೆ ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌ ಅವರನ್ನು ಸದಸ್ಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ  ಎಂದು ಲೇವಾದೇವಿಗಾರರ ರಿಜಿಸ್ಟ್ರಾರ್‌ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಕಾರ್ಯಪಡೆಯಲ್ಲಿ ಜಿಲ್ಲಾ ಎಸ್‌ಪಿ, ಜಿಲ್ಲೆಯ ಉಪವಿಭಾಗಾಧಿಕಾರಿಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಮತ್ತು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಇರುವರು.

ಕರ್ನಾಟಕ ಲೇವಾದೇವಿಗಾರರ ಭದ್ರತಾ ಸಾಲಗಳಿಗೆ ಶೇ 14 ಮತ್ತು ಭದ್ರತೆ ಇಲ್ಲದ ಸಾಲಗಳಿಗೆ ಶೇ 16 ರಷ್ಟು ಬಡ್ಡಿದರವನ್ನು ವಿಧಿಸಲು ಅವಕಾಶವಿದ್ದು, ಹೆಚ್ಚಿಗೆ ಬಡ್ಡಿದರವನ್ನು ವಿಧಿಸಿದಲ್ಲಿ ಕಾಯ್ದೆಯನುಸಾರ ಶಿಕ್ಷಾರ್ಹ ಅಪರಾಧ. ಅನಧಿಕೃತವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಲೇವಾದೇವಿ ಸಂಸ್ಥೆಯವರು ಪಡೆದ ಪರವಾನಗಿ, ಬಡ್ಡಿದರ ಇನ್ನಿತರ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಒತ್ತಾಯಪೂರ್ವಕವಾಗಿ ರೈತರಿಂದ ಸಾಲ ವಸೂಲಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ನೀಡಬಹುದು. ದೂರವಾಣಿ ಸಂಖ್ಯೆಗಳು: 080-22268024,  080-26616776.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.