ADVERTISEMENT

ರೈತರ ಆತ್ಮಹತ್ಯೆ: ದೇವೇಗೌಡರಿಂದ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 25 ಜುಲೈ 2015, 20:31 IST
Last Updated 25 ಜುಲೈ 2015, 20:31 IST

ಬೆಂಗಳೂರು: ರೈತರ ಆತ್ಮಹತ್ಯೆ ವಿಷಯದ ಬಗ್ಗೆ ಚರ್ಚಿಸಲು ಸಂಸತ್ತಿನಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ನವದೆಹಲಿಯ ಜಂತರ್–ಮಂತರ್‌ನಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪ್ರಕಟಿಸಿದರು.

ಚರ್ಚೆಗೆ ಅವಕಾಶ ಸಿಗುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ. ಈ ಸತ್ಯಾಗ್ರಹಕ್ಕೆ ಜನತಾ ಪರಿವಾರ ಸೇರಿದಂತೆ ಯಾರಿಂದಲೂ ಬೆಂಬಲ ಕೋರಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಒಂದೇ ದಿನ 13 ಜನ ರೈತರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದ ನಂತರವೂ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಡಿಜಿಟಲ್‌ ಇಂಡಿಯಾದಂಥ ಕಾರ್ಯಕ್ರಮಗಳನ್ನು ಘೋಷಿಸಿರುವ ಪ್ರಧಾನಿ ಮೋದಿ, ರೈತರ ಹಿತಾಸಕ್ತಿ ಕಾಯಲು ಯಾವುದೇ ಕಾರ್ಯಕ್ರಮ ಪ್ರಕಟಿಸಿಲ್ಲ ಎಂದು ಆರೋಪಿಸಿದರು.

ಗುಜರಾತ್‌ನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಮೋದಿ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಮೋದಿ ಅವರನ್ನು ಭೇಟಿಯಾಗಿದ್ದಾಗ, ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ ಅವರು ಪ್ರತಿಕ್ರಿಯಿಸಲಿಲ್ಲ ಎಂದರು.

ದೇವೇಗೌಡರ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಜೆಡಿಎಸ್‌ನ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ನವದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.