ADVERTISEMENT

ರೈಲ್ವೆ ಸೇತುವೆಗಳ ತ್ವರಿತ ನಿರ್ಮಾಣಕ್ಕೆ ಸೂಚನೆ

ಬಿಬಿಎಂಪಿ: ಏಳು ಗಂಟೆಗಳ ಸುದೀರ್ಘ ಪ್ರಗತಿ ಪರಿಶೀಲನೆ ನಡೆಸಿದ ರಾಮಲಿಂಗಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ಬೆಂಗಳೂರು: ‘ನಗರದ ವಿವಿಧ ಕಡೆ­ಗಳಲ್ಲಿ ನಡೆದಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣ ಕಾರ್ಯ ಚುರುಕುಗೊಳಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೈಲ್ವೆ ಇಲಾಖೆಗೆ ನೀಡಬೇ­ಕಿ­ರುವ ರೂ15 ಕೋಟಿ ಮೊತ್ತವನ್ನು ತಕ್ಷಣ ಪಾವತಿಸಬೇಕು’ ಎಂದು ಜಿಲ್ಲಾ ಉಸ್ತು­ವಾರಿ ಸಚಿವ ರಾಮಲಿಂಗಾರೆಡ್ಡಿ ಬಿಬಿ­ಎಂಪಿ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದರು.

ವಿಕಾಸ ಸೌಧದಲ್ಲಿ ಗುರುವಾರ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಏಳು ಗಂಟೆ ಸುದೀರ್ಘವಾಗಿ ಬಿಬಿಎಂಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ಈ ನಿರ್ದೇಶನವನ್ನು ನೀಡಿದರು.

‘ನಗರದ 13 ಕಡೆಗಳಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣ ಕಾರ್ಯ ನಡೆದಿದೆ. ಆದರೆ, ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆ­ಯು­ತ್ತಿಲ್ಲ. ಬಿಬಿಎಂಪಿ ತನ್ನ ಪಾಲಿನ ಮೊತ್ತ­ವನ್ನು ಪಾವತಿಸಲು ವಿಳಂಬ ಮಾಡಿರುವುದೇ ಕೆಲಸ ನಿಧಾನಗತಿ­ಯಲ್ಲಿ ಸಾಗಲು ಕಾರಣ ಎಂಬ ಮಾಹಿತಿ ಇದೆ. ಹಣ ಪಾವತಿ ಮಾಡುವ ಮೂಲಕ ಸೇತುವೆಗಳು ಬೇಗ ಪೂರ್ಣಗೊಳ್ಳುವಂತೆ ನೋಡಿಕೊಳ್ಳ­ಬೇಕು’ ಎಂದು ಹೇಳಿದರು.

‘ನಗರದ 230 ರಸ್ತೆಗಳ ಗುಂಡಿ ಮುಚ್ಚಲು ಅಗತ್ಯ ಅನುದಾನ ಒದಗಿಸ­ಲಾಗಿದೆ. ಈಗಾಗಲೇ 92 ರಸ್ತೆಗಳ ಗುಂಡಿ­ಗಳನ್ನು ಮುಚ್ಚಲಾಗಿದ್ದು, ಉಳಿದಿ­ರುವ 138 ರಸ್ತೆಗಳ ಕಾಮಗಾರಿಯನ್ನು ಇನ್ನು 15 ದಿನಗಳಲ್ಲಿ ಪೂರೈಸಬೇಕು. ಬಸವೇಶ್ವರನಗರದ ಕೆಳಸೇತುವೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು’ ಎಂದು ತಾಕೀತು ಮಾಡಿದರು.

‘ಹಳೆ ವಿಮಾನ ನಿಲ್ದಾಣ ರಸ್ತೆ ಸಂಪೂ­ರ್ಣ­ವಾಗಿ ಹಾಳಾಗಿದ್ದು, ತಕ್ಷಣ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು’ ಎಂದ ಸಚಿವರು, ‘ರಸ್ತೆಗಳ ವಿಸ್ತರಣೆಗೆ ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಮೂಲಕ ಭೂಸ್ವಾಧೀನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ, ‘ಟ್ಯಾನರಿ ಹಾಗೂ ದಿನ್ನೂರು ರಸ್ತೆಗಳ ವಿಸ್ತರಣೆ ಮಾಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು. ‘ಎರಡೂ ರಸ್ತೆಗಳಲ್ಲಿ ಟಿಡಿಆರ್‌ ನೀಡುವ ಮೂಲಕ ಭೂಸ್ವಾಧೀನ ಮಾಡಿ­ಕೊಳ್ಳುವ ಕೆಲಸ ಪ್ರಾರಂಭಿಸ­ಬೇಕು’ ಎಂದು ರಾಮಲಿಂಗಾರೆಡ್ಡಿ ಅಧಿ­ಕಾರಿಗಳಿಗೆ ತಿಳಿಸಿದರು. ‘ಬನ್ನೇರುಘಟ್ಟ, ಉತ್ತರಹಳ್ಳಿ, ಸುಬ್ರಹ್ಮಣ್ಯಪುರ ರಸ್ತೆಗಳ ವಿಸ್ತರಣೆಗೂ ಕ್ರಮ ಕೈಗೊಳ್ಳಬೇಕು’ ಎಂದೂ ಆದೇಶಿಸಿದರು.

ಆಸ್ತಿ ತೆರಿಗೆ ದರ ಹೆಚ್ಚಳ?

ಆಸ್ತಿ ತೆರಿಗೆ ದರವನ್ನು ಹೆಚ್ಚಳ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದ್ದು, ಅನುಮತಿ ಸಿಗುವ ನಿರೀಕ್ಷೆ ಇದೆ. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಮುಂದಿನ ಆರ್ಥಿಕ ವರ್ಷದಿಂದ ಆಸ್ತಿ ತೆರಿಗೆ ದರ ಹೆಚ್ಚಳವಾಗಲಿದೆ ಎಂದು ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ ತಿಳಿಸಿದರು.

‘ವಸತಿ ಕಟ್ಟಡಗಳಿಗೆ ಶೇ 20 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ 25ರಷ್ಟು ತೆರಿಗೆ ಹೆಚ್ಚಳ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಸಭೆ ಬಳಿಕ ಮಾಹಿತಿ ನೀಡಿದರು.

ADVERTISEMENT

‘ಕಂದಾಯ ಇಲಾಖೆಯಿಂದ ನಿರೀ­ಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ಆಗು­ತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿ­ವರು, ‘ಪ್ರಸಕ್ತ ಸಾಲಿನಲ್ಲಿ ರೂ 2,500 ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದ­ಲಾಗಿದ್ದು, ಪ್ರತಿ ವಾರಕ್ಕೆ ಗುರಿ ನಿಗದಿ ಮಾಡಿಕೊಂಡು ಕೆಲಸ ಮಾಡ­ಬೇಕು’ ಎಂದು ತಿಳಿಸಿದರು.

‘ಸ್ವಯಂಘೋಷಿತ ಆಸ್ತಿ ತೆರಿಗೆ ಮೂಲಕ ಸಾರ್ವಜನಿಕರು ಸಲ್ಲಿಸಿರುವ ಆಸ್ತಿ ವಿವರಗಳನ್ನು ಪರಿಶೀಲನೆ ಮಾಡ­ಬೇಕು. ತಪ್ಪು ಮಾಹಿತಿ ನೀಡಿದವರಿಂದ ದಂಡ ವಸೂಲಿ ಮಾಡ­ಬೇಕು. ಸರಿ­ಯಾಗಿ ಪರಿಶೀಲನೆ ಮಾಡದೆ ವರದಿ ಸಲ್ಲಿಸಿದರೆ ಕಂದಾಯ ಅಧಿಕಾ­ರಿಗಳ ವಿರುದ್ಧವೇ ಕ್ರಮ ಕೈಗೊಳ್ಳಲಾ­ಗುವುದು’ ಎಂದು ಎಚ್ಚರಿಕೆ ನೀಡಿದರು. ‘ಹೊಸ ಆಸ್ತಿಗಳ ಸಮೀಕ್ಷೆ ನಡೆಸಿ, ತೆರಿಗೆ ಜಾಲಕ್ಕೆ ತರಬೇಕು’ ಎಂದು ಸೂಚನೆ ನೀಡಿದರು.

ಮೇಯರ್‌ ಎನ್‌.ಶಾಂತಕುಮಾರಿ, ಉಪಮೇಯರ್‌ ಕೆ.ರಂಗಣ್ಣ, ಬಿಬಿ­ಎಂಪಿ ಆಡಳಿತ ಪಕ್ಷದ ನಾಯಕ ಅಶ್ವತ್ಥ­ನಾರಾಯಣ ಗೌಡ, ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜುನಾಥ್‌ ರೆಡ್ಡಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಇ. ಪಿಳ್ಳಪ್ಪ, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.