ADVERTISEMENT

ರೋಗನಿರೋಧಕ ನೆಲಗಡಲೆ ತಳಿ ‘ಜಿಕೆವಿಕೆ–5’

ಎನ್.ನವೀನ್ ಕುಮಾರ್
Published 18 ನವೆಂಬರ್ 2017, 20:07 IST
Last Updated 18 ನವೆಂಬರ್ 2017, 20:07 IST
ಜಿಕೆವಿಕೆ–5 ತಳಿ ಕುರಿತು ಸಾವಿತ್ರಮ್ಮ ಅವರು ರೈತರಿಗೆ ಮಾಹಿತಿ ನೀಡಿದರು
ಜಿಕೆವಿಕೆ–5 ತಳಿ ಕುರಿತು ಸಾವಿತ್ರಮ್ಮ ಅವರು ರೈತರಿಗೆ ಮಾಹಿತಿ ನೀಡಿದರು   

ಬೆಂಗಳೂರು: ಬರ ನಿರೋಧಕ, ರೋಗ ನಿರೋಧಕ ಹಾಗೂ ಹೆಚ್ಚು ಇಳುವರಿ ನೀಡುವ ನೆಲಗಡಲೆ ತಳಿ ‘ಜಿಕೆವಿಕೆ–5’ ಅನ್ನು ಕೃಷಿ ವಿಶ್ವವಿದ್ಯಾಲಯದ ಆನುವಂಶೀಯ ಮತ್ತು ಸಸ್ಯ ತಳಿ ವಿಭಾಗದ ಮುಖ್ಯಸ್ಥೆ ಡಾ.ಡಿ.ಎಲ್‌.ಸಾವಿತ್ರಮ್ಮ ಸಂಶೋಧಿಸಿದ್ದಾರೆ.

ನಗರದ ಜಿಕೆವಿಕೆ ಸಂಶೋಧನಾ ಕೇಂದ್ರದಲ್ಲಿ ಬೆಳೆದಿರುವ ಈ ತಳಿಯನ್ನು ರೈತರು ಕುತೂಹಲದಿಂದ ವೀಕ್ಷಿಸಿದರು. ಸಾವಿತ್ರಮ್ಮ ಅವರು ಈ ತಳಿಯನ್ನು 2015ರಲ್ಲಿ ಸಂಶೋಧಿಸಿದ್ದು, ಈಗಾಗಲೇ ಚಿತ್ರದುರ್ಗ, ರಾಮನಗರ, ಕೋಲಾರ, ದಾವಣಗೆರೆ ಜಿಲ್ಲೆಗಳ ರೈತರು ಬೆಳೆದಿದ್ದಾರೆ. ಬರದ ಪರಿಸ್ಥಿತಿಯಲ್ಲೂ ಉತ್ತಮ ಇಳುವರಿ ನೀಡಿರುವುದು ಇದರ ಹೆಗ್ಗಳಿಕೆ.

‘ಬರನಿರೋಧಕ ತಳಿಯನ್ನು ಅಭಿವೃದ್ಧಿ ಪಡಿಸಲು ಈವರೆಗೆ ಆಸಕ್ತಿ ತೋರಿಸಿದ್ದೆ. ಈಗ ರೋಗನಿರೋಧಕ ತಳಿ ಅಭಿವೃದ್ಧಿಯಲ್ಲಿ ತೊಡಗಿದ್ದೇನೆ. ಜಿಕೆವಿಕೆ–5 ನೆಲಗಡಲೆಯ ಗಿಡ 100ರಿಂದ 120 ಕಾಯಿಗಳನ್ನು ಬಿಡುತ್ತದೆ. ಬೀಜಗಳಲ್ಲಿ ಶೇ 50ರಷ್ಟು ಎಣ್ಣೆ ಅಂಶ ಇರುತ್ತದೆ. ಸಾಮಾನ್ಯ ನೆಲಗಡಲೆ ಗಿಡ 50 ಕಾಯಿಗಳನ್ನು ಬಿಡಬಹುದು. ದಕ್ಷಿಣ ಕರ್ನಾಟಕದ ವಲಯದಲ್ಲಿ ಬೇರೆ ತಳಿ ಇಷ್ಟು ಇಳುವರಿ ನೀಡುವುದಿಲ್ಲ’ ಎಂದು ಸಾವಿತ್ರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಒಂದು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲು 60 ಕೆ.ಜಿ. ಕಡಲೆಕಾಯಿ ಬೇಕಾಗುತ್ತದೆ. ಒಂದು ಅಡಿ ಅಂತರದಲ್ಲಿ ಸಾಲುಗಳನ್ನು ಹಾಕಿ, 10 ಸೆಂ.ಮೀ.ಗೆ ಒಂದು ಬೀಜ ಬಿತ್ತಬೇಕು. ಆರಂಭದಲ್ಲಿ ವಾರಕ್ಕೆ ಒಮ್ಮೆ ನೀರುಣಿಸಬೇಕು. ನೀರು ಜಾಸ್ತಿ ಹಾಯಿಸಿದಂತೆ ಗಿಡ ಉದ್ದವಾಗಿ ಬೆಳೆಯುತ್ತದೆ. ಇದರಿಂದ ಗಿಡದ ಕವಲುಗಳು ಭೂಮಿಗೆ ಇಳಿಯುವುದಿಲ್ಲ. ಆಗ ಇಳುವರಿ ಕಡಿಮೆ ಆಗಲಿದೆ. 45ರಿಂದ 50ನೇ ದಿನಕ್ಕೆ ಹೂವು ಬಿಡಲು ಆರಂಭಿಸುತ್ತದೆ. ಆಗ ವಾರಕ್ಕೆ ಎರಡು ಬಾರಿ ನೀರು ಹಾಯಿಸಬೇಕು’ ಎಂದು ಹೇಳಿದರು.

‘90 ದಿನಗಳೊಳಗೆ ಬೀಜ ಬಿಟ್ಟಿರುತ್ತದೆ. ಬಳಿಕ 15 ದಿನಗಳಿಗೊಮ್ಮೆ ನೀರು ಹಾಯಿಸಿದರೆ ಸಾಕು. ಹೂವು ಬಿಡುವ ಸಂದರ್ಭದಲ್ಲಿ ಎಲೆಚುಕ್ಕೆ ಹಾಗೂ ಎಲೆತುಕ್ಕು ರೋಗ ಬಂದರೆ ಬೀಜಗಳಿಗೆ ಆಹಾರ ಪೂರೈಕೆ ಕಡಿಮೆ ಆಗಲಿದೆ. ಇದರಿಂದ ಇಳುವರಿ ಕುಂಠಿತಗೊಳ್ಳಲಿದೆ. ಬೀಜ ಬಂದ ಬಳಿಕ ರೋಗ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ವಿವರಿಸಿದರು.

ಚಿಂತಾಮಣಿಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಪಿ.ವೆಂಕಟರಮಣ ಅಭಿವೃದ್ಧಿಪಡಿಸಿರುವ ‘ಕೆಸಿಜಿ–6 ತಳಿಯನ್ನು ಜಿಕೆವಿಕೆ–5 ತಳಿಯ ಪಕ್ಕದಲ್ಲೇ ಬೆಳೆಯಲಾಗಿದೆ. ಆದರೆ, ಕೆಸಿಜಿ–6 ಗಿಡಗಳಿಗೆ ಎಲೆಚುಕ್ಕೆ ರೋಗ ಬಂದಿದೆ. ಇಳುವರಿಯೂ ಕಡಿಮೆ ಆಗಿದೆ.

‘ರೈತರಿಗೆ ತಳಿಗಳ ಕುರಿತು ಮಾಹಿತಿ ನೀಡುವ ಉದ್ದೇಶದಿಂದ ಎರಡೂ ತಳಿಯ ನೆಲಗಡಲೆಗಳನ್ನು ಬೆಳೆದಿದ್ದೇವೆ. ಜಿಕೆವಿಕೆ–5 ತಳಿಯು ಹೆಚ್ಚು ರೋಗನಿರೋಧಕ ಗುಣ ಹೊಂದಿದೆ. ಇತ್ತೀಚೆಗೆ ನಿರಂತರವಾಗಿ ಮಳೆ ಸುರಿದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಎಲೆಚುಕ್ಕೆ ರೋಗ ಬಂದಿದೆ. ಆದರೆ, 90 ದಿನಗಳು ಆಗಿರುವುದರಿಂದ ಕಾಯಿಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ಸಾವಿತ್ರಮ್ಮ ಸ್ಪಷ್ಟಪಡಿಸಿದರು.

ಜಿಕೆವಿಕೆ–5 ವಿಶೇಷತೆಗಳು

ಅವಧಿ: 110ರಿಂದ 115 ದಿನಗಳು

ಇಳುವರಿ: ಎಕರೆಗೆ 10ರಿಂದ 12 ಕ್ವಿಂಟಲ್‌

ಬಿತ್ತನೆ ಕಾಲ: ಜೂನ್‌–ಜುಲೈ, ಡಿಸೆಂಬರ್‌–ಜನವರಿ

ಬಿತ್ತನೆ ಬೀಜದ ಬೆಲೆ: 1 ಕೆ.ಜಿ. ಕಡಲೆಕಾಯಿಗೆ ₹90

ಸಂಪರ್ಕಕ್ಕೆ: 080–23628043

ಹೆಚ್ಚು ಇಳುವರಿ ನೀಡುವ ಅಲಸಂದೆ ಕೆಬಿಸಿ–9

ಸಾವಿತ್ರಮ್ಮ ಸಂಶೋಧಿಸಿರುವ ‘ಕೆಬಿಸಿ–9’ ಎಂಬ ಅಲಸಂದೆ ತಳಿಯು ಈ ವರ್ಷ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಇಳುವರಿ ನೀಡಿದ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್‌ ಈ ಮಾನ್ಯತೆ ನೀಡಿದೆ.

‘ಈ ತಳಿಯನ್ನು ಬೀಜದ ಉದ್ದೇಶಕ್ಕಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಎಕರೆಗೆ 4ರಿಂದ 5 ಕ್ವಿಂಟಲ್‌ ಇಳುವರಿ ಸಿಗಲಿದೆ. ಕೋಲಾರ, ರಾಮನಗರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಈ ತಳಿಯನ್ನು ಬೆಳೆದಿದ್ದಾರೆ’ ಎಂದು ಹಿರಿಯ ಸಂಶೋಧಕ ಡಾ.ಮಧು ತಿಳಿಸಿದರು.

‘ಪಿಕೆಬಿ–4 ಮತ್ತು 6 (ತರಕಾರಿ ಅಲಸಂದೆ), ಎ.ವಿ–5 (ಹಸಿಬೀಜ ಅಲಸಂದೆ) ಎಂಬ ತಳಿಗಳನ್ನು ಮೂರು ವರ್ಷಗಳ ಹಿಂದೆಯೇ ಸಂಶೋಧಿಸಲಾಗಿದೆ. ಕೆಬಿಸಿ–9 ಸೇರಿ ಎಲ್ಲ ಅಲಸಂದೆ ತಳಿಗಳು ಎಲೆಚುಕ್ಕೆ, ಎಲೆತುಕ್ಕು ಹಾಗೂ ಕಾಯಿಕೊರೆಯುವ ಹುಳಬಾಧೆ ನಿರೋಧಕ ಗುಣ ಹೊಂದಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.