ADVERTISEMENT

ರೌಡಿ ಅತೀಕ್‌ ಪಾಷಾ ವಿರುದ್ಧ ಗೂಂಡಾ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2015, 20:25 IST
Last Updated 31 ಮಾರ್ಚ್ 2015, 20:25 IST
ರೌಡಿ ಅತೀಕ್‌ ಪಾಷಾ ವಿರುದ್ಧ ಗೂಂಡಾ ಕಾಯ್ದೆ
ರೌಡಿ ಅತೀಕ್‌ ಪಾಷಾ ವಿರುದ್ಧ ಗೂಂಡಾ ಕಾಯ್ದೆ   

ಬೆಂಗಳೂರು: ಕುಖ್ಯಾತ ರೌಡಿ ಅತೀಕ್‌ ಪಾಷಾ ಅಲಿಯಾಸ್‌ ಅಮ್ಜದ್‌ ಖಾನ್‌ (37) ವಿರುದ್ಧ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕಾಟನ್‌ಪೇಟೆಯ ಅತೀಕ್‌ ವಿರುದ್ಧ ನಗರದಲ್ಲಿ ಹಾಗೂ ಹೊರ ವಲಯದ ಠಾಣೆಗಳಲ್ಲಿ ಕೊಲೆ, ದರೋಡೆ, ಕೊಲೆಯತ್ನ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಕಾಟನ್‌ಪೇಟೆ ಮತ್ತು ಬನಶಂಕರಿ ಠಾಣೆ ರೌಡಿಪಟ್ಟಿಯಲ್ಲಿ ಆತನ ಹೆಸರಿದೆ.

ರೌಡಿ ದಿವಾನ್‌ ಅಲಿಯ (ಮೃತಪಟ್ಟಿದ್ದಾನೆ) ಸಹಚರನಾಗಿದ್ದ ಅತೀಕ್‌, ಕಾಟನ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ  ನಡೆದಿದ್ದ ರೌಡಿ ಸೂರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಆತ ಜೈಲಿನಿಂದಲೇ ಸಹಚರರಿಗೆ ಸೂಚನೆ ಕೊಟ್ಟು 2014ರಲ್ಲಿ ಜೀವಾ ಎಂಬ ರೌಡಿಯನ್ನು ಕೊಲೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆ:  ಜೆ.ಪಿ.ನಗರ ಸಮೀಪದ ಸಾರಕ್ಕಿ ಕೆರೆಯಲ್ಲಿ ಮಂಗಳವಾರ ಸಂಜೆ  ದಯಾಳ್‌ ನಾಯಕಿ (80) ಎಂಬುವರ ಶವ ಕೊಳೆತ ಸ್ಥಿತಿಯಲ್ಲಿ  ಪತ್ತೆಯಾಗಿದೆ. ತಮಿಳುನಾಡು ಮೂಲದ ದಯಾಳ್‌ ನಾಯಕಿ, ಕೆಲವು ವರ್ಷಗಳಿಂದ ಜರಗನಹಳ್ಳಿಯ ಮಗಳ ಮನೆಯಲ್ಲಿ ವಾಸವಾಗಿದ್ದರು. ಮಾ. 20ರ ಬೆಳಗಿನ ಜಾವ ಮೂತ್ರ ವಿಸರ್ಜನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವರು ವಾಪಸ್‌ ಹೋಗಿರಲಿಲ್ಲ. ಹೀಗಾಗಿ ತಾಯಿ ಕಾಣೆಯಾಗಿದ್ದಾರೆ ಎಂದು ಮಗಳು ಜೆ.ಪಿ.ನಗರ ಠಾಣೆಗೆ ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಾಂಶಗಳು

* ಅತೀಕ್‌ ಪಾಷಾ ಮೇಲೆ 15 ಪ್ರಕರಣ ದಾಖಲು
*ರೌಡಿ ಸೂರಿ ಕೊಲೆ ಪ್ರಕರಣದಲ್ಲಿ ಭಾಗಿ
* ಜೀವಾ ಎಂಬ ರೌಡಿ ಕೊಲೆಯಲ್ಲೂ ಕೈವಾಡ

ಮಂಗಳವಾರ ಸಂಜೆ ಕೆರೆಯಲ್ಲಿ ಶವ ತೇಲುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅದು ದಯಾಳ್‌ ನಾಯಕಿ ಅವರ ಶವ ಎಂದು ಗೊತ್ತಾಯಿತು. ಮೂತ್ರ ವಿಸರ್ಜನೆಗೆ ಕೆರೆ ಬಳಿ ಬಂದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವಕನ ಮೇಲೆ ಹಲ್ಲೆ: ಬಂಧನ
ಬೆಂಗಳೂರು:
ದೇವರಜೀವನಹಳ್ಳಿ ಸಮೀಪದ ಶಾಂಪುರದಲ್ಲಿ ಸೈಯದ್‌ ಮೊಹ್ಸಿನ್‌ (26) ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಅಮ್ಜದ್‌ (28) ಮತ್ತು ಆತನ ಸ್ನೇಹಿತ ಮೂಸಾ ಎಂಬುವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ADVERTISEMENT

ಆರೋಪಿಯು ಭಾನುವಾರ (ಮಾರ್ಚ್‌ 29) ಸೈಯದ್ ಮೇಲೆ ಸ್ಟೀಲ್‌ ಪೈಪ್‌ನಿಂದ ಹಲ್ಲೆ ನಡೆಸಿದ್ದ. ಪ್ರಕರಣ ಸಂಬಂಧ ಸೈಯದ್ ಠಾಣೆಗೆ ದೂರು ನೀಡಿದ್ದರು. ಸೈಯದ್, ಅಮ್ಜದ್‌ನ ಪತ್ನಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ಕಾರಣಕ್ಕೆ ಅವರ ನಡುವೆ ಆಗಾಗ್ಗೆ  ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸೈಯದ್‌, ಅಮ್ಜದ್‌ನ ಮನೆಗೆ ಹೋಗುತ್ತಿದ್ದುದ್ದನ್ನು ನೋಡಿರುವ ನೆರೆಹೊರೆಯವರು ಅಮ್ಜದ್‌ಗೆ ತಿಳಿಸಿದ್ದಾರೆ. ಅಮ್ಜದ್, ಸ್ನೇಹಿತನೊಂದಿಗೆ ಅಲ್ಲಿಗೆ ಹೋಗಿ ಸೈಯದ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಸೈಯದ್‌ಗೆ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಾಡುಗೊಂಡನಹಳ್ಳಿ ನಿವಾಸಿಯಾದ ಅವರು ಪಿಯುಸಿಗೆ ಓದು ಬಿಟ್ಟಿದ್ದರು.  ಜಿಮ್‌ವೊಂದರಲ್ಲಿ ತರಬೇತುದಾರನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.