ADVERTISEMENT

ಲಾಲ್‌ಬಾಗ್‌: ಜೇನುಹುಳು ದಾಳಿ ತಡೆಗೆ ಕ್ರಮ

ಬಾಲಕಿ ಬಲಿಯಾದ ನಂತರ ಎಚ್ಚೆತ್ತುಕೊಂಡ ತೋಟಗಾರಿಕೆ ಇಲಾಖೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:09 IST
Last Updated 5 ಅಕ್ಟೋಬರ್ 2015, 20:09 IST

ಬೆಂಗಳೂರು: ಲಾಲ್‌ಬಾಗ್‌ ಜೈವಿಕ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನದ ವೇಳೆ ಜೇನು ಹುಳುಗಳು ಏಳು ವರ್ಷದ ಬಾಲಕಿಯನ್ನು ಬಲಿ ಪಡೆದ ನಂತರ ಎಚ್ಚೆತ್ತುಕೊಂಡಿರುವ ತೋಟಗಾರಿಕಾ ಇಲಾಖೆ, ಜೇನು ಗೂಡುಗಳ ಸ್ಥಳಾಂತರ ಸೇರಿದಂತೆ ಉದ್ಯಾನದಲ್ಲಿ ಕೆಲ ಮುನ್ನೆಚ್ಚರಿಕಾ ಕ್ರಮಗಳು ಕೈಗೊಂಡಿದೆ.

ಆಗಸ್ಟ್‌ 15ರಂದು ಜೇನು ದಾಳಿಗೆ ಬಾಲಕಿ ವೈಷ್ಣವಿ ಮೃತಪಟ್ಟಿದ್ದಳು. ಆ  ನಂತರ ಆಗಸ್ಟ್ 20ರಂದು ಹಿರಿಯ ಅಧಿಕಾರಿಗಳು, ಜೇನು ಕೃಷಿ ತಜ್ಞರು ಹಾಗೂ ಮೃತ ಬಾಲಕಿಯ ಪೋಷಕರ ಜತೆ ಸಭೆ ನಡೆಸಿದ್ದ ತೋಟಗಾರಿಕೆ ಇಲಾಖೆ, ಉದ್ಯಾನದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿತ್ತು. ಅದರಂತೆ ಸಭೆಯಲ್ಲಿ ಹಾಜರಿದ್ದವರು ನೀಡಿದ್ದ ಕೆಲ ಸಲಹೆಗಳನ್ನು ಜಾರಿಗೆತರಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಇಲಾಖೆಯ ಉಪ ನಿರ್ದೇಶಕ ಜೆ. ಗುಣವಂತ, ‘240 ಎಕರೆ ವಿಸ್ತಾರವಿರುವ ಲಾಲ್‌ಬಾಗ್‌ನಲ್ಲಿ ನಾಲ್ಕೈದು ಕಡೆ ಜೇನುಗೂಡುಗಳು ಕಟ್ಟಿವೆ. ಈ ಪೈಕಿ ಒಂದೆಡೆ ಮಾತ್ರ 100 ಅಡಿಗಿಂತ ಕೆಳಮಟ್ಟದಲ್ಲಿ ಗೂಡು ಕಟ್ಟಿದೆ. ಉಳಿದವು 200 ಅಡಿಗಿಂತಲೂ ಎತ್ತರದಲ್ಲಿವೆ.  ಬಾಲಕಿ ಸಾವಿಗೆ ಕಾರಣವಾದ ಗೂಡನ್ನು ತೆರವು ಮಾಡಲಾಗಿದೆ.  ಆದರೆ. ಎತ್ತರದಲ್ಲಿರುವ ಗೂಡುಗಳ ಸ್ಥಳಾಂತರ ಸಾಧ್ಯವಾಗಿಲ್ಲ’ ಎಂದು ಹೇಳಿದರು.

‘ಫಲಪುಷ್ಪ ಪ್ರದರ್ಶನದ ದಿನಗಳಂದು ಲಾಲ್‌ಬಾಗ್‌ಗೆ ಪ್ರತ್ಯೇಕ ಆಂಬುಲೆನ್ಸ್‌ ಸೇವೆ ಒದಗಿಸುವ ಕುರಿತು, ಆರೋಗ್ಯ ಇಲಾಖೆಗೆ ಈಗಾಗಲೇ ಪತ್ರ ಬರೆಯಲಾಗಿದೆ. ಈ ಕುರಿತು ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದರು. ‘ಜೇನುಹುಳುಗಳು ಮಳೆಯಲ್ಲಿ ಸಾಮಾನ್ಯವಾಗಿ ಹಾರಾಡುವುದಿಲ್ಲ.

ಹಾಗಾಗಿ ಉದ್ಯಾನದ ಅಲ್ಲಲ್ಲಿ ನೀರಿನ ಟ್ಯಾಂಕರ್‌ಗಳ ಮೂಲಕ ವಾಟರ್‌ ಜೆಟ್‌ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಹುಳುಗಳು ಎದ್ದಾಗ, ಈ ಜೆಟ್‌ಗಳ ಮೂಲಕ ಮಳೆಯಂತೆ ನೀರು ಚಿಮ್ಮಿಸಿದಾಗ, ಹುಳುಗಳ ರೆಕ್ಕೆ ತೇವಗೊಳ್ಳುತ್ತದೆ. ಆಗ ಅವುಗಳಿಗೆ ಹಾರಲಾಗುವುದಿಲ್ಲ. ಈ ವೇಳೆ ಜನರು ಸುಲಭವಾಗಿ ದಾಳಿಯಿಂದ ತಪ್ಪಿಸಿಕೊಳ್ಳಬಹುದು’ ಎಂದರು.

ಎಚ್ಚರಿಕೆ ಫಲಕ:  ಲಾಲ್‌ಬಾಗ್‌ನ ನಾಲ್ಕು ದಿಕ್ಕಿನಲ್ಲಿರುವ ದ್ವಾರಗಳ ಬಳಿ ಜೇನುಗೂಡುಗಳಿರುವ ಕುರಿತು ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಜೇನುಹುಳುಗಳಿಗೆ ತೊಂದರೆ ಮಾಡದಂತೆ ಪ್ರವಾಸಿಗರು ವಹಿಸಬೇಕಾದ ಎಚ್ಚರಿಕೆ ಹಾಗೂ  ಜೇನುಹುಳುಗಳು ಗೂಡಿನಿಂದ ಎದ್ದಾಗ ಹೇಗೆ ರಕ್ಷಣೆ ಪಡೆಯಬೇಕು ಎಂಬುದನ್ನು ಈ ಫಲಕಗಳು ಒಳಗೊಂಡಿವೆ.

ನೆಟ್‌ ಹೌಸ್‌: ಗಾಜಿನಮನೆ ಮತ್ತು ಬೀಜ ಪರೀಕ್ಷೆ ಪ್ರಯೋಗಾಲಯಕ್ಕೆ ಕೂಗಳತೆ ದೂರದಲ್ಲಿರುವ ಸ್ಥಳದ ಸುತ್ತಮುತ್ತ ಎರಡರಿಂದ –ಮೂರು ಜೇನುಗೂಡುಗಳು ಕಟ್ಟಿದ್ದು, ಈ ಸ್ಥಳದಲ್ಲಿ ರಕ್ಷಣೆಗಾಗಿ ಒಂದು ನೆಟ್‌ ಹೌಸ್‌ (ಪರದೆ ಮನೆ) ನಿರ್ಮಿಸಲಾಗಿದೆ. ಜೇನುಹುಳುಗಳು ಎದ್ದಾಗ, ಈ ಮನೆಯೊಳಗೆ ಬಂದು ರಕ್ಷಣೆ ಪಡೆಯಬಹುದಾಗಿದೆ.

ಪ್ರಥಮ ಚಿಕಿತ್ಸೆ ಪೆಟ್ಟಿಗೆ: ಜೇನುಹುಳು, ಹಾವು, ಚೇಳು ಕಡಿತ ಸೇರಿದಂತೆ, ಇತರ ಯಾವುದೇ ಅನಾಹುತಗಳು ಸಂಭವಿಸಿದಾಗ ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನದ 15 ಕಡೆ ಪ್ರಥಮ  ಚಿಕಿತ್ಸೆ ಪೆಟ್ಟಿಗೆಗಳನ್ನು ಅಳವಡಿಸಲಾಗಿದೆ.

*
ತೊಂದರೆ ಮಾಡಿದರೆ ದಾಳಿ
‘ಜೇನುಹುಳುಗಳು ಈ ಪ್ರಕೃತಿಯ ಒಂದು ಭಾಗ. ಪ್ರಕೃತಿಯ ಪರಾಗಸ್ಪರ್ಶ ಕ್ರಿಯೆಗೆ ಇವು ಬೇಕೇ ಬೇಕು. ಅವುಗಳ ಮೇಲೆ ಯಾವುದೇ ರೀತಿಯ ದಾಳಿಯಾದಾಗ ಮಾತ್ರ, ಪ್ರತಿದಾಳಿ ನಡೆಸುತ್ತವೆ’ ಎಂದು ನಿವೃತ್ತ ಜೇನು ಕೃಷಿ ಸಂಘಟಕ ಎಸ್. ಇಂದೂಶೇಖರ್ ಹೇಳಿದರು.

‘ಸಾಮಾನ್ಯವಾಗಿ ಅತಿ ಎತ್ತರದಲ್ಲೇ ಜೇನುಹುಳುಗಳು ಗೂಡು ಕಟ್ಟುತ್ತವೆ. ಕಟ್ಟಡಗಳಲ್ಲಿ ಕಟ್ಟಿದ್ದರೆ ಸ್ಥಳಾಂತರ ಮಾಡಬಹುದು. ಮರಗಳಲ್ಲಿ ಕಟ್ಟಿರುವ ಗೂಡುಗಳ ಸ್ಥಳಾಂತರ ಅಷ್ಟು ಸುಲಭವಲ್ಲ. ಯಾಕೆಂದರೆ, ಮತ್ತೆ ಅದೇ ಸ್ಥಳದಲ್ಲಿ ಬಂದು ಕಟ್ಟಿಕೊಳ್ಳುತ್ತವೆ. ಹಾಗಾಗಿ ಅವುಗಳನ್ನು ಕೆಣಕದೆ ಕೆಲ ಮುಂಜಾಗ್ರತೆ ಕ್ರಮಗಳನ್ನು ವಹಿಸುವುದೇ, ದಾಳಿಯಿಂದ ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗ’ ಎಂದು ಅಭಿಪ್ರಾಯಪಟ್ಟರು.

ಏಕೆ ಏಳುತ್ತವೆ?: ಅತಿಯಾದ ಹೊಗೆ–ಧೂಳು ಏಳುವುದು, ದುರ್ಗಂಧ ಬೀರಿದಾಗ, ಕ್ಯಾಮೆರಾ ಫ್ಲ್ಯಾಶ್‌ನ ಬೆಳಕು ಗೂಡಿನ ಮೇಲೆ ಬಿದ್ದಾಗ, ಹದ್ದುಗಳ ದಾಳಿ, ಮರಿಗಳಿಗೆ ಹಾರುವುದನ್ನು ಕಲಿಸುವಾಗ, ಸ್ಥಳ ಬದಲಾವಣೆ ಹಾಗೂ ಕಿಡಿಗೇಡಿಗಳು ಗೂಡಿಗೆ ಕಲ್ಲು ಹೊಡೆದ ಸಂದರ್ಭದಲ್ಲಿ ಜೇನುಹುಳುಗಳು ಗೂಡಿನಿಂದ ಏಳುತ್ತವೆ.

ಏನು  ಮಾಡಬೇಕು: ಜೇನುಹುಳುಗಳು ಎದ್ದಾಗ ದುಪ್ಪಟ ಅಥವಾ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು, ಕೆಳಕ್ಕೆ ಮುಖ ಮಾಡಿ ಅಲುಗಾಡದಂತೆ ಮಲಗಬೇಕು. ಆಗ ಹುಳುಗಳು ಕೆಲ ಹೊತ್ತು ಮನುಷ್ಯನ ಸುತ್ತ ಹಾರಾಡಿ ಹೋಗುತ್ತವೆ. ಯಾಕೆಂದರೆ, ಜೇನುಹುಳುಗಳು ನೀರು ಕುಡಿಯುವ ಅಥವಾ ಮಕರಂದ ಹೀರುವ ಸಂದರ್ಭದಲ್ಲಿ ಮಾತ್ರ ಒಂದೂವರೆ ಅಡಿಗಿಂತ ಕೆಳಗಡೆ ಹಾರಾಡುತ್ತವೆ.

ಏನು ಮಾಡಬಾರದು: ಹುಳುಗಳು ಮುಖ ಅಥವಾ ಮೈಗೆ ಕಚ್ಚಿದಾಗ, ತಕ್ಷಣ ಉಜ್ಜಿಕೊಂಡು ಹುಳುವನ್ನು ಸಾಯಿಸಬಾರದು. ಹಾಗೆ ಮಾಡುವುದರಿಂದ ಒಮ್ಮೆಲೆ ನೂರಾರು ಹುಳುಗಳು ಮೈತುಂಬಾ ಮುತ್ತಿಕೊಳ್ಳುತ್ತವೆ. ಆಗ  ದಾಳಿಗೊಳಗಾದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡದಿದ್ದರೆ, ಹುಳುಗಳ ವಿಷ ದೇಹಪೂರ್ತಿ ಪ್ರಸರಿಸಿ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವೆಂದರೆ, ಮನುಷ್ಯನಿಗೆ ಕಚ್ಚಿದ ತಕ್ಷಣ ಹುಳುಗಳು ಕೂಡ ಸಾಯುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT