ADVERTISEMENT

ಲೈಂಗಿಕ ಹಿಂಸೆ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST
ಲೈಂಗಿಕ ಹಿಂಸೆಯನ್ನು ವಿರೋಧಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶವನ್ನು ನ್ಯಾಯವಾದಿ ಮತ್ತು ಮಹಿಳಾವಾದಿ ಫ್ಲೇವಿಯಾ ಆಗ್ನೆಸ್ ಅವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಲೇಖಕಿ ಡಾ.ವಿಜಯಾ, ರೈತ ಹೋರಾಟಗಾರ್ತಿ ಅನಸೂಯಮ್ಮ ಮೊದಲಾದವರು ಇದ್ದಾರೆ	–ಪ್ರಜಾವಾಣಿ ಚಿತ್ರ
ಲೈಂಗಿಕ ಹಿಂಸೆಯನ್ನು ವಿರೋಧಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶವನ್ನು ನ್ಯಾಯವಾದಿ ಮತ್ತು ಮಹಿಳಾವಾದಿ ಫ್ಲೇವಿಯಾ ಆಗ್ನೆಸ್ ಅವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಲೇಖಕಿ ಡಾ.ವಿಜಯಾ, ರೈತ ಹೋರಾಟಗಾರ್ತಿ ಅನಸೂಯಮ್ಮ ಮೊದಲಾದವರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಾರಾಷ್ಟ್ರದಲ್ಲಿ ಅತ್ಯಾ­ಚಾರಕ್ಕೊಳಗಾದ ಯುವತಿಗೆ ನೈತಿಕ ಬೆಂಬಲ ನೀಡುವುದರ  ಜೊತೆಗೆ ₨2 ಲಕ್ಷ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಜ್ಯ­ದಲ್ಲಿಯೂ ಇದು ಜಾರಿಗೆ ಬರ­ಬೇಕು’ ಎಂದು ನ್ಯಾಯವಾದಿ ಮತ್ತು ಮಹಿಳಾ­ವಾದಿ ಫ್ಲೇವಿಯಾ ಆಗ್ನೆಸ್ ಹೇಳಿದರು.

ಲೈಂಗಿಕ ಹಿಂಸೆಯನ್ನು ವಿರೋಧಿಸಿ ಮಹಿಳಾ ಮುನ್ನಡೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶ­ದಲ್ಲಿ ಅವರು ಮಾತನಾಡಿದರು. ದೆಹಲಿ ಅತ್ಯಾಚಾರ ಪ್ರಕರಣದ ನಂತರ ದೇಶದಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಆದರೂ ಅತ್ಯಾ­ಚಾರ ಎಸಗಿರುವವರಿಗೆ ಶಿಕ್ಷೆ ಆಗಿರುವ ಪ್ರಮಾಣ ಕಡಿಮೆ. 16 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದೆ ಎಂದರು.

ಅತ್ಯಾಚಾರಗಳನ್ನು ನಿಯಂತ್ರಿಸಲು ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮನಸ್ಥಿತಿ ಬದಲಾಗಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿ­ಸಲು ಇಂತಹ ಸಮಾವೇಶ ಹಮ್ಮಿ­ಕೊಂಡಿ­ರುವುದು ಶ್ಲಾಘನೀಯ ಎಂದರು. ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಮಾತ­ನಾಡಿ, ‘ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾ­ಚಾರಗಳಿಗೆ ಬೇರೆಲ್ಲೊ ಕಾರಣ ಹುಡು­ಕುವ ಅಗತ್ಯ ಇಲ್ಲ. ಅದಕ್ಕೆ ಸಮಾಜ, ಸರ್ಕಾ­ರವೇ ಕಾರಣ. ಅತ್ಯಾಚಾರ­ದಂ­ತಹ ಸೂಕ್ಷ್ಮ ಸಮಸ್ಯೆಯನ್ನು ಕಾನೂ­ನಿನ ಮೂಲಕ ಮಾತ್ರ ಪರಿಹರಿಸಲು ಸಾಧ್ಯ’ ಎಂದು ಹೇಳಿದರು.

ಅಸಮಾನತೆ ಮತ್ತು ಲಿಂಗ ತಾರ­ತಮ್ಯದ ನಡುವೆ ನೇರ ಸಂಬಂಧ ಇದೆ. ಅತ್ಯಾಚಾರಕ್ಕೊಳಗಾದವರಲ್ಲಿ ಬಹು­ತೇಕರು ಕೆಳಜಾತಿಯವರಾಗಿದ್ದಾರೆ. ಈ ಸಾಮಾಜಿಕ ತಾರತಮ್ಯ, ದೌರ್ಜನ್ಯದ ವಿರುದ್ಧ ಹೋರಾಟ ನಡೆಯಬೇಕಾದ ಅಗತ್ಯ ಇದೆ ಎಂದು ಹೇಳಿದರು. ಲೇಖಕಿ ದು.ಸರಸ್ವತಿ ಅವರು ಮಾತ­ನಾಡಿ, ‘ಅತ್ಯಾಚಾರ ನಮ್ಮ ಸಮಾಜಕ್ಕೆ ಅಂಟಿರುವ ಕಾಯಿಲೆ. ಮಕ್ಕಳ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗು­ವವರಿಗೆ ಏನು ಪ್ರೇರಣೆ ಎಂದು ತಿಳಿಯು­ತ್ತಿಲ್ಲ.  ಕೊಳಕು ಮನಸ್ಸುಗಳು ಮಾತ್ರ ಇಂತಹ ಕೃತ್ಯ ಎಸಗಲು ಸಾಧ್ಯ’ಎಂದರು. ಸಂಘಟನೆಯ ಸದಸ್ಯರು ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನ­ದವ­ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವಿಚಾರಣೆ ನಡೆಸಿ ಅನ್ಯಾಯಕ್ಕೊಳಗಾಗದವರಿಗೆ ನ್ಯಾಯ ಒದಗಿಸುವುದು ನ್ಯಾಯಾಲಯದ ಜವಾಬ್ದಾರಿ. ವಿಪರ್ಯಾಸವೆಂದರ ಐವರು ನ್ಯಾಯಮೂರ್ತಿಗಳು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದು ಸಮಾಜಕ್ಕೆ ಯಾವ ಸಂದೇಶ ಕೊಡುತ್ತದೆ
–ಡಾ.ಕೆ. ಮರುಳಸಿದ್ದಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT