ADVERTISEMENT

ವರ್ಷಧಾರೆಯಿಂದ ಸಂಚಾರಕ್ಕೆ ತೊಂದರೆ

ಎರಡು ಮರಗಳು ಧರೆಗೆ; ಮೆಜೆಸ್ಟಿಕ್‌, ಶಾಂತಿನಗರದಲ್ಲಿ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ವರ್ಷಧಾರೆಯಿಂದ ಸಂಚಾರಕ್ಕೆ ತೊಂದರೆ
ವರ್ಷಧಾರೆಯಿಂದ ಸಂಚಾರಕ್ಕೆ ತೊಂದರೆ   

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸಂಜೆ ಮಳೆ ಸುರಿಯಿತು. ಇದರಿಂದ ಜನರ ಜೀವನಕ್ಕೆ ತೊಂದರೆ ಆಯಿತು. ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದವರು ಸಂಚಾರ ದಟ್ಟಣೆಯಿಂದ ತತ್ತರಿಸಿದರು. ಮಳೆಯಿಂದಾಗಿ ಪ್ಯಾಲೇಸ್‌ ರಸ್ತೆಯ ಮಹಾರಾಣಿ ವಿಜ್ಞಾನ ಕಾಲೇಜು ಬಳಿ ಹಾಗೂ ಬಸವೇಶ್ವರ ನಗರದ ಶಾರದಾ ಕಾಲೊನಿಯಲ್ಲಿ ತಲಾ ಒಂದೊಂದು ಮರಗಳು  ಉರುಳಿದೆ.

ಮೆಜೆಸ್ಟಿಕ್‌ ಸಮೀಪದ ರೈಲ್ವೆ ಕೆಳ ಸೇತುವೆ, ಕೆ.ಆರ್‌. ಮಾರುಕಟ್ಟೆ ಬಳಿಯ ಮೇಲ್ಸೇತುವೆ ಹಾಗೂ ಮಾಗಡಿ ಮೆಟ್ರೊ ನಿಲ್ದಾಣದ ಬಳಿ ಮಳೆ ನೀರು ನಿಂತು ಜನರು ತೊಂದರೆ ಅನುಭವಿಸಿದರು.

‘ನಗರದಲ್ಲಿ ಬುಧವಾರ ಒಟ್ಟು 19.8 ಮಿ.ಮೀ ಹಾಗೂ ಎಚ್‌ಎಎಲ್‌ ವಿಮಾನ ನಿಲ್ದಾಣ ಭಾಗದಲ್ಲಿ 5.6 ಮಿ.ಮೀ ಮಳೆ ದಾಖಲಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು  ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಂಧ್ರ ಪ್ರದೇಶದ ರಾಯಲಸೀಮಾ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣಗೊಂಡಿದೆ. ಇದರಿಂದ ನಗರದಲ್ಲಿ ಇನ್ನೂ ಐದು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಮಳೆ ಸುರಿಯುವ ಸಾಧ್ಯತೆಗಳಿವೆ ’ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ದಟ್ಟಣೆ: ಮೆಜೆಸ್ಟಿಕ್‌, ಕೆ.ಜಿ. ರಸ್ತೆ, ಶಾಂತಿನಗರ, ಕಾರ್ಪೋರೇಷನ್‌ ವೃತ್ತ, ಬಳ್ಳಾರಿ ರಸ್ತೆ, ಕೆ.ಆರ್‌.ಪುರ, ಮಾರತ್‌ ಹಳ್ಳಿ , ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸೇರಿದಂತೆ ನಗರದ ಹಲವೆಡೆ ವ್ಯಾಪಕ  ಸಂಚಾರ ದಟ್ಟಣೆ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.