ADVERTISEMENT

ವಾಸ್ತವಿಕ ಲೆಕ್ಕಾಚಾರ; ಹೊಸಮೂಲ ಆವಿಷ್ಕಾರ!

ಬಿಬಿಎಂಪಿ ಬಜೆಟ್‌ಗೆ ಸಿದ್ಧತೆ ಆರಂಭ – ಇಲಾಖೆಗಳಿಂದ ಆನ್‌ಲೈನ್‌ನಲ್ಲೇ ಮಾಹಿತಿ ಸಂಗ್ರಹ

ಪ್ರವೀಣ ಕುಲಕರ್ಣಿ
Published 29 ನವೆಂಬರ್ 2015, 19:38 IST
Last Updated 29 ನವೆಂಬರ್ 2015, 19:38 IST

ಬೆಂಗಳೂರು: ಸತತವಾಗಿ ಮಂಡಿಸಲಾದ ಗುರಿ ತಪ್ಪಿದ ಬಜೆಟ್‌ಗಳ ಪರಿಣಾಮ ಕಳೆದ ಐದು ವರ್ಷಗಳಿಂದ ಆರ್ಥಿಕವಾಗಿ ಕಂಗೆಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ವೈಜ್ಞಾನಿಕ ಲೆಕ್ಕಾಚಾರದ ಮೂಲಕ ಹೊಸ ಬಜೆಟ್‌ ಸಿದ್ಧಪಡಿಸಲು ನಿರ್ಧರಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಕುಮಾರ್‌ ಪುಷ್ಕರ್‌ ಅವರ ತಂಡ 2016–17ನೇ ಸಾಲಿನ ಬಜೆಟ್‌ ತಯಾರಿ ಪ್ರಕ್ರಿಯೆಯನ್ನು ಆರಂಭಿಸಿದೆ. ಎಲ್ಲ ವಿಭಾಗಗಳ ಮುಖ್ಯಸ್ಥರು, ವಲಯಗಳ ಜಂಟಿ ಆಯುಕ್ತರು ಹಾಗೂ ಎಂಜಿನಿಯರ್‌ಗಳಿಗೆ ಆನ್‌ಲೈನ್‌ನಲ್ಲೇ ‘ಬಜೆಟ್‌ ಮಾಡ್ಯೂಲ್‌ (ಗಾತ್ರ)’ ಭರ್ತಿ ಮಾಡಿ ಕಳುಹಿಸಲು ಸೂಚಿಸಲಾಗಿದೆ.

ಪ್ರತಿಯೊಂದು ಇಲಾಖೆ ಹಾಗೂ ವಲಯದ ವ್ಯಾಪ್ತಿಯಲ್ಲಿ ಎಷ್ಟು ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ, ಕಾರ್ಯದ ಆದೇಶ ನೀಡಿದ ಕಾಮಗಾರಿಗಳ ಸಂಖ್ಯೆ ಎಷ್ಟು, ಬಾಕಿ ಉಳಿದಿರುವ ಬಿಲ್‌ ಎಷ್ಟು, ನಿಯಮಾವಳಿ ಪ್ರಕಾರ ಕಾರ್ಯ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ಮುಟ್ಟುಗೋಲು ಹಾಕಿಕೊಂಡ ಠೇವಣಿ ಎಷ್ಟು ಇವೇ ಮೊದಲಾದ ವಿವರಗಳನ್ನು ಕೇಳಲಾಗಿದೆ.

ಮುಖ್ಯ ಲೆಕ್ಕಾಧಿಕಾರಿ ಅವರು ಈ ಸಂಬಂಧ ಎಲ್ಲ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದ್ದು, ಡಿ. 5ರೊಳಗೆ ಮಾಹಿತಿ ಒದಗಿಸಬೇಕು ಎಂದು ಆ ಪತ್ರದಲ್ಲಿ ಕೋರಲಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬಜೆಟ್‌ ಒಮ್ಮೆಯೂ ಲೆಕ್ಕಾಚಾರದ ಶೇ 50ರಷ್ಟು ಗುರಿಯನ್ನೂ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ನಗರದ ಬಹುತೇಕ ಪ್ರಮುಖ ಯೋಜನೆಗಳು ನನೆಗುದಿಗೆ ಬಿದ್ದಿವೆ.

2008–09ರಲ್ಲಿ ₹ 1,314.12 ಕೋಟಿಯಷ್ಟಿದ್ದ ಸಾಲದ ಹೊರೆ 2015–16ರ ವೇಳೆಗೆ ದ್ವಿಗುಣಗೊಂಡಿದೆ. ಆ ಸಾಲಕ್ಕೆ ಖಾತ್ರಿಯಾಗಿ ಹಲವು ಪ್ರಮುಖ ಕಟ್ಟಡಗಳನ್ನು ಹಣಕಾಸು ಸಂಸ್ಥೆಗಳಿಗೆ ಅಡಮಾನ ಇಡಲಾಗಿದೆ. ಗುತ್ತಿಗೆದಾರರ ಬಿಲ್‌ ಬಾಕಿಯೂ ₹ 2,500 ಕೋಟಿಗೆ ಏರಿದೆ.

‘ಬಿಬಿಎಂಪಿ ತನ್ನ ಸ್ವಂತ ಬಲದ ಮೇಲೆ ₹ 4 ಸಾವಿರ ಕೋಟಿ ವರಮಾನ ಸಂಗ್ರಹ ಮಾಡಲು ಸಾಧ್ಯವಿದೆ. ಆದರೆ, ಹಾಕಿಕೊಂಡ ಬಜೆಟ್‌ ಗಾತ್ರ ₹ 8 ಸಾವಿರ ಕೋಟಿಗೂ ಹೆಚ್ಚು. ಬಜೆಟ್‌ ಲೆಕ್ಕಾಚಾರ ಸರಿದೂಗಿಸುವಲ್ಲಿ ಸಾಧ್ಯವಾಗದ ಕಾರಣ ಆರ್ಥಿಕ ಹೊರೆ ಬಿದ್ದಿದೆ. ಬರಿ ಸಾಲ ಹಾಗೂ ಬಾಕಿ ತೀರಿಸಲೇ ಎರಡು ವರ್ಷಗಳ ಕಾಲಾವಕಾಶ ಬೇಕಾಗಿದೆ’ ಎಂದು ಆಡಳಿತಾಧಿಕಾರಿ ಆಗಿದ್ದ ಟಿ.ಎಂ. ವಿಜಯಭಾಸ್ಕರ್‌ ಹೇಳಿದ್ದರು.

2002–03ರಲ್ಲಿ ಆಗಿನ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಬಜೆಟ್‌ ಗಾತ್ರ ಕೇವಲ ₹ 935 ಕೋಟಿ ಇತ್ತು. ಹೆಸರಿನ ಮುಂದೆ ‘ಬೃಹತ್‌’ ಎಂಬ ಪದ ಸೇರಿಕೊಂಡ ತಕ್ಷಣ ಬಜೆಟ್‌ ಗಾತ್ರವನ್ನು ಸಾವಿರಾರು ಕೋಟಿಗಳಿಗೆ ಹಿಗ್ಗಿಸಿ, ಕೊನೆಗೆ ₹ 9,500 ಕೋಟಿವರೆಗೆ ಏರಿಕೆ ಮಾಡಲಾಯಿತು.

‘ಬಜೆಟ್‌ ಗಾತ್ರ ಹಿಗ್ಗಿಸಿದ ಪ್ರಮಾಣಕ್ಕೆ ತಕ್ಕಂತೆ ಸಂಪನ್ಮೂಲ ಕ್ರೋಡೀಕರಣ ಆಗದ್ದರಿಂದ ಯೋಜನೆಗಳೆಲ್ಲ ನನೆಗುದಿಗೆ ಬಿದ್ದವು. ನಿಗದಿತ ಸಮಯದಲ್ಲಿ ಸಾಲ ಮತ್ತು ಬಡ್ಡಿ ಕಂತು ತುಂಬದಿದ್ದರೆ ಬಿಬಿಎಂಪಿ ಆರ್ಥಿಕವಾಗಿ ದಿವಾಳಿ ಆಗಿದೆ ಎಂಬ ಘೋಷಣೆ ಹೊರಬೀಳುತ್ತದೆ. ಹಾಗೊಂದು ವೇಳೆ ಘೋಷಣೆ ಹೊರಬಿದ್ದರೆ ಎಲ್ಲಿಯೂ ಸಾಲ ಸಿಕ್ಕುವುದಿಲ್ಲ. ಜನಪ್ರತಿನಿಧಿಗಳಿಗೆ ಈ ಕುರಿತು ಎಚ್ಚರಿಸಿದ್ದೆ’ ಎಂದು ಹಿಂದಿನ ಆಯುಕ್ತರೊಬ್ಬರು ವಿವರಿಸುತ್ತಾರೆ.

ನಗರದಲ್ಲಿ ಮೇಲ್ಸೇತುವೆಗಳ ನಿರ್ಮಾಣ ಮತ್ತು ರಸ್ತೆಗಳ ವಿಸ್ತರಣೆಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳ­ಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಬಿಬಿಎಂಪಿ ತನ್ನ ಪಾಲನ್ನು ಸಲ್ಲಿಸ­ಬೇಕಿದೆ. ಬಜೆಟ್‌ನಲ್ಲಿ ಆಗಿರುವ ಏರು–ಪೇರಿನಿಂದ ಇದಕ್ಕೆಲ್ಲ ಹಣ ಹೊಂದಿ­ಸಲು ಆಗಿಲ್ಲ.

ಸುಧಾರಣೆ ಕ್ರಮಗಳು: ಆಡಳಿತಾಧಿಕಾರಿಯಾಗಿ ವಿಜಯಭಾಸ್ಕರ್‌ ಅವರು ಅಧಿಕಾರ ವಹಿಸಿಕೊಂಡ ನಂತರದ ಅವಧಿಯಲ್ಲಿ ಆರ್ಥಿಕ ಶಿಸ್ತು ಮೂಡಿಸಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಬಿಎಂಪಿ ಹಣಕಾಸು ವ್ಯವಹಾರ ಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ತೆರೆಯಲಾ ಗಿದ್ದ 900ಕ್ಕೂ ಅಧಿಕ ಖಾತೆಗಳ ಮೂಲಕ ಮಾಡಲಾಗುತ್ತಿತ್ತು. ಹಲವು ಅವ್ಯವಹಾರಗಳಿಗೂ ಈ ಖಾತೆಗಳು ದಾರಿ ಮಾಡಿಕೊಟ್ಟಿದ್ದವು. ಆ ಖಾತೆಗಳನ್ನು ಈಗ 25ಕ್ಕೆ ಇಳಿಕೆ ಮಾಡಲಾಗಿದೆ.

ಗುತ್ತಿಗೆದಾರರಿಗೆ ಹಣ ಪಾವತಿಸುವ ಮುನ್ನ ಕಡ್ಡಾಯವಾಗಿ ಕಾಮಗಾರಿ ಗುಣಮಟ್ಟ ಪರೀಕ್ಷೆ, ಹಣ ಭರವಸೆ ಪತ್ರಗಳಿಗೆ (ಎಲ್‌ಒಸಿ) ತಡೆ ಹಾಗೂ ಆನ್‌ಲೈನ್‌ ಮೂಲಕವೇ ಬಿಲ್‌ ಪಾವತಿ ಹಲವು ಸುಧಾರಣಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ.

ಆಯುಕ್ತರ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ) ಮೂಲಕ ಕಾಮಗಾರಿ ಗುಣಮಟ್ಟ ವರದಿಯನ್ನು ತರಿಸಿಕೊಂಡ ಬಳಿಕವೇ ಹಣಕಾಸು ವಿಭಾಗದಿಂದ ಬಿಲ್‌ ಪಾವತಿ ಮಾಡಬೇಕು. ಆನ್‌ಲೈನ್‌ ಮೂಲಕವೇ ಬಿ.ಆರ್‌. ಸಂಖ್ಯೆ ನೀಡಬೇಕು. ಜೇಷ್ಠತೆ ಅನುಸಾರ ಬಿಲ್‌ ಪಾವತಿ ಮಾಡಬೇಕು ಎಂಬ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

‘ಮುಂಬರುವ ಬಜೆಟ್‌ನಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತದೆ. ಬಾಕಿ ಹಾಗೂ ಸಾಲದ ಪಾವತಿ ಕಡೆಗೂ ಗಮನ ಹರಿಸಲಾಗುತ್ತದೆ. ವಾಸ್ತವಿಕ ಲೆಕ್ಕಾಚಾರ ಹಾಗೂ ಹೊಸ ಆದಾಯ ಮೂಲಗಳ ಆವಿಷ್ಕಾರಕ್ಕೆ ಬಜೆಟ್‌ ಒತ್ತು ನೀಡಲಿದೆ’ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.