ADVERTISEMENT

ವಾಹನ ದಟ್ಟಣೆ: ಟೆಕಿ ಪರಿಹಾರ

ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಸಂಚಾರ ಸಮಸ್ಯೆಗೆ ಮುಕ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:02 IST
Last Updated 19 ಜುಲೈ 2017, 20:02 IST
ಸಿಲ್ಕ್‌ಬೋರ್ಡ್‌ ಜಂಕ್ಷನ್‌. –ಸಂಗ್ರಹ ಚಿತ್ರ
ಸಿಲ್ಕ್‌ಬೋರ್ಡ್‌ ಜಂಕ್ಷನ್‌. –ಸಂಗ್ರಹ ಚಿತ್ರ   

ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ನೀಡಿದ್ದ ಸಲಹೆಯಂತೆ ಸಂಚಾರ ದೀಪಗಳ ವ್ಯವಸ್ಥೆ ಬದಲಾವಣೆಯಿಂದಾಗಿ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿಯಂತ್ರಣಕ್ಕೆ ಬಂದಿದೆ.

ಬಿಟಿಎಂ ಲೇಔಟ್‌ ಕಡೆಯ ಸಿಗ್ನಲ್‌ನಲ್ಲಿ ಹಸಿರು ದೀಪ ಹೊತ್ತಿಕೊಂಡ ಬಳಿಕ ಕೋರಮಂಗಲ, ಎಚ್ಎಸ್ಆರ್ ಲೇಔಟ್‌ನ ಸಿಗ್ನಲ್‌ಗಳಲ್ಲೂ ಹಸಿರು ದೀಪ ಹೊತ್ತಿಕೊಂಡಿರುತ್ತಿದ್ದವು. ಇದರಿಂದ ಎಲ್ಲ ವಾಹನಗಳು ಏಕಕಾಲದಲ್ಲೇ ಸಂಚರಿಸಿ ಸಿಲ್ಕ್‌ ಬೋರ್ಡ್ ಜಂಕ್ಷನ್‌ನಲ್ಲಿ ದಟ್ಟಣೆ ಹೆಚ್ಚಾಗುತ್ತಿತ್ತು.

ಎಲ್ಲ ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಂಚಾರ ದೀಪದ ವ್ಯವಸ್ಥೆಯಿಂದಲೇ ವಾಹನ ದಟ್ಟಣೆ ಉಂಟಾಗುತ್ತಿದೆ ಎಂಬುದನ್ನು ಸಾಫ್ಟ್‌ವೇರ್ ಎಂಜಿನಿಯರ್ ಸಂಜಯ್ ಅಗರ್‌ವಾಲ್ ಅವರು ಸೂಕ್ಷ್ಮವಾಗಿ ಗಮನಿಸಿದ್ದರು.

ADVERTISEMENT

ಕೋರಮಂಗಲ, ಎಚ್ಎಸ್‌ಆರ್ ಲೇಔಟ್‌ ಕಡೆಯಿಂದ ಬಿಟಿಎಂ ಲೇಔಟ್‌ ಕಡೆಗೆ ಹೋಗುವ ರಸ್ತೆಯ ಬಹುತೇಕ ಸಿಗ್ನಲ್‌ಗಳ ಸಂಚಾರ ದೀಪಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಸಿಗ್ನಲ್‌ಗಳಲ್ಲಿ ಎಲ್ಲ ಸಮಯದಲ್ಲೂ ಹಸಿರು ದೀಪಗಳು ಹೊತ್ತಿಕೊಂಡಿರುತ್ತವೆ. ಈ ವ್ಯವಸ್ಥೆಯನ್ನು ಬದಲಾಯಿಸಿದರೆ ಸಂಚಾರ ದಟ್ಟಣೆಗೆ ಕಡಿವಾಣ ಹಾಕಬಹುದು ಎಂದು ಟ್ವೀಟ್ ಮಾಡಿದ್ದರು.

ಅದರಂತೆ ಮಡಿವಾಳ ಸಂಚಾರ ಪೊಲೀಸರು ಜುಲೈ ಆರಂಭದಲ್ಲೇ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ತಂದಿದ್ದರು. ಅದರಿಂದಾಗಿ ಹೆಚ್ಚು ವಾಹನ ದಟ್ಟಣೆ ಉಂಟಾಗುವ ಸಮಯದಲ್ಲಿ ವಾಹನಗಳು ಸರಾಗವಾಗಿ ಸಂಚರಿಸುವಂತಾಗಿದೆ.

ಸಾರ್ವಜನಿಕರ ಸಲಹೆ ಹಾಗೂ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ‘ಆಡಳಿತ ಸುಧಾರಣೆಯಲ್ಲಿ ನಾಗರಿಕರ ಭಾಗವಹಿಸುವಿಕೆ ಹೇಗೆ ನೆರವಾಗುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.