ADVERTISEMENT

ವಿಜಯಮ್ಮ ಕೊಲೆ; ಸಾಕು ಮಗಳ ಸೆರೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 20:06 IST
Last Updated 14 ಮಾರ್ಚ್ 2018, 20:06 IST
ವಿಜಯಮ್ಮ ಕೊಲೆ; ಸಾಕು ಮಗಳ ಸೆರೆ
ವಿಜಯಮ್ಮ ಕೊಲೆ; ಸಾಕು ಮಗಳ ಸೆರೆ   

ಬೆಂಗಳೂರು:‌ ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ನಡೆದಿದ್ದ ವಿಜಯಮ್ಮ (55) ಕೊಲೆ ಪ್ರಕರಣವನ್ನು ಕೃತ್ಯ ಬೆಳಕಿಗೆ ಬಂದ ಆರು ತಾಸುಗಳಲ್ಲೇ ಭೇದಿಸಿರುವ ಪೊಲೀಸರು, ಮೃತರ ಸಾಕು ಮಗಳು ಸೋನು (29) ಹಾಗೂ ಆಕೆಯ ಸ್ನೇಹಿತ ಕುಮಾರ್ (20) ಎಂಬಾತನನ್ನು ಸೆರೆಹಿಡಿದಿದ್ದಾರೆ.

ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ವಿಜಯಮ್ಮ ಅವರ ಮನೆಗೆ ನುಗ್ಗಿದ್ದ ಆರೋಪಿಗಳು, ಸುತ್ತಿಗೆ ಹಾಗೂ ಮರದ ತುಂಡಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದರು. ನಂತರ ಚಿನ್ನದ ಸರ, ಎರಡು ಬಳೆಗಳು, ಮೂರು ಉಂಗುರಗಳು ಹಾಗೂ ಕಿವಿಗೆ ಹಾಕುವ ಬುಗುಡಿ ತೆಗೆದುಕೊಂಡು ಪರಾರಿಯಾಗಿದ್ದರು. ಪೊಲೀಸರು
ಸಿ.ಸಿ.ಟಿ.ವಿ ಕ್ಯಾಮೆರಾದ ಸುಳಿವು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

‘ಜನ್ಮ ನೀಡಿದ ತಾಯಿ ನನ್ನನ್ನು ವಿಜಯಮ್ಮ ಮಡಿಲಿಗೆ ಹಾಕಿ ನಾಪತ್ತೆಯಾದರು. ಚಿಕ್ಕಂದಿನಿಂದಲೂ ನನ್ನನ್ನು ಸಾಕಿ ಸಲಹಿದ್ದ ಅವರು, ನಾನು ಯೌವ್ವನಕ್ಕೆ ಬರುತ್ತಿದ್ದಂತೆಯೇ ವೇಶ್ಯಾವಾಟಿಕೆಯ ಕೂಪಕ್ಕೆ ದೂಡಿದರು. ಇದರಿಂದ ನನ್ನ ಜೀವನವೇ ನಾಶವಾಯಿತು. ಅದಕ್ಕೆ ಪ್ರತೀಕಾರವಾಗಿ ಹತ್ಯೆಗೈದೆ’ ಎಂದು ಸೋನು ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದರು.

ADVERTISEMENT

ಕುಶಾಲನಗರದ ವಿಜಯಮ್ಮ, 25 ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಚಾಮರಾಜಪೇಟೆಯಲ್ಲಿ ನೆಲೆಸಿದ್ದರು. ಅವಿವಾಹಿತರಾಗಿದ್ದ ಅವರು, ಉಮಾ ಚಿತ್ರಮಂದಿರದ ಬಳಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಸೋನುವಿನ ತಾಯಿಯೊಂದಿಗೆ ಸ್ನೇಹ ಬೆಳೆದಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸೋನುಗೆ ನಾಲ್ಕು ವರ್ಷವಿದ್ದಾಗ ಆಕೆಯನ್ನು ವಿಜಯಮ್ಮ ಅವರ ಸುಪರ್ದಿಗೆ ಒಪ್ಪಿಸಿ ತಾಯಿ ನಾಪತ್ತೆಯಾದರು. ಅಂದಿನಿಂದ ಗೆಳತಿಯ ಮಗಳನ್ನು ಸಲಹಿದ್ದ ವಿಜಯಮ್ಮ, ಹಣದಾಸಗೆ ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿದರು. ಮುಂಬೈನ ಕಾಮಾಟಿಪುರ ಸೇರಿದ ಸೋನು, ಅಂದಿನಿಂದಲೂ ಸಾಕುತಾಯಿ ಮೇಲೆ ದ್ವೇಷ ಕಾರುತ್ತಲೇ ಇದ್ದಳು. ಏಳೆಂಟು ವರ್ಷ ಅಲ್ಲೇ ನೆಲೆಸಿದ್ದ ಆಕೆ, ಪಂಜಾಬ್‌ನ ಯುವಕನನ್ನು ಪ್ರೀತಿಸಿ ವಿವಾಹವಾದಳು.

ಆ ನಂತರ ದಂಪತಿ ವಾಸ್ತವ್ಯವನ್ನು ಚಂಡೀಗಡಕ್ಕೆ ಬದಲಾಯಿಸಿದ್ದರು. ಅಲ್ಲಿ ಒಂದು ವರ್ಷ ಸಂಸಾರ ನಡೆಸಿದ ಅವರು, ಉದ್ಯೋಗ ಅರಸಿ ಪುನಃ ಬೆಂಗಳೂರಿಗೆ ಬಂದರು. ಇಲ್ಲಿ ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2016 ಡಿಸೆಂಬರ್‌ನಲ್ಲಿ ಕೆಲಸಕ್ಕೆ ಹೋದ ಪತಿ ದಿಢೀರ್ ಕಣ್ಮರೆಯಾಗಿದ್ದರಿಂದ ಸೋನು ಮತ್ತೆ ಅತಂತ್ರಳಾದಳು. ಗಂಡನನ್ನು ಹುಡುಕಿಕೊಂಡು ಚಂಡೀಗಡ ಹಾಗೂ ಪಂಜಾಬ್‌ಗೆ ಹೋಗಿ ಬಂದರೂ
ಪ್ರಯೋಜನವಾಗಿರಲಿಲ್ಲ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸೋನು, ನೆರವು ಕೇಳಿಕೊಂಡು ಪುನಃ ಸಾಕು ತಾಯಿಯ ಹತ್ತಿರ ಹೋಗಿದ್ದಳು. ನೆರವಿನ ಹಸ್ತ ಚಾಚದ ವಿಜಯಮ್ಮ, ಆಕೆಗೆ ಬೈದು ಕಳುಹಿಸಿದ್ದರು. ಇದರಿಂದ ಮತ್ತಷ್ಟು ಕುಪಿತಗೊಂಡ ಆಕೆ, ದತ್ತಾತ್ರೆಯ ಬಡಾವಣೆಯಲ್ಲಿರುವ ‘ಬೀರೇಶ್ವರ ಸ್ವಾಮಿ’ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಉಳಿದುಕೊಂಡು, ಕೆಂಪೇಗೌಡ ನಗರದ ಕಂಪನಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ₹ 3 ಸಾವಿರ ವೇತನ ಸಿಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕುಮಾರ್ ಜತೆ ಸ್ನೇಹ:ಆರೋಪಿ ಕುಮಾರ್‌, ಟಿ.ನರಸೀಪುರ ತಾಲ್ಲೂಕು ಚೌಹಳ್ಳಿ ಗ್ರಾಮದವನು. ಸೋನು ಉಳಿದುಕೊಂಡಿದ್ದ ಪಿ.ಜಿ ಕಟ್ಟಡದಲ್ಲೇ ಆತನ ತಾಯಿ ಮೇಲ್ವಿಚಾರಕಿ ಆಗಿದ್ದಾರೆ. ಅಲ್ಲೇ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡ ಕುಮಾರ್‌ಗೆ, ಸೋನುಜತೆ ಸ್ನೇಹ ಬೆಳೆಯಿತು. ತಾನು ಬೆಳೆದು ಬಂದ ದಾರಿ ಹಾಗೂ ವಿಜಯಮ್ಮ ತನ್ನನ್ನು ನಡೆಸಿಕೊಂಡ ರೀತಿಯನ್ನು ಗೆಳೆಯನ ಬಳಿ ಹೇಳಿಕೊಂಡ ಆಕೆ, ಅವರನ್ನು ಕೊಂದು ಸೇಡುತೀರಿಸಿಕೊಳ್ಳಬೇಕು ಎಂದು ಹೇಳಿದ್ದಳು. ಹಣದಾಸೆಗೆ ಆತನೂ ಕೃತ್ಯಕ್ಕೆ ಕೈ ಜೋಡಿಸಿದ್ದ.

ಕಂಠಪೂರ್ತಿ ಕುಡಿಸಿ ಹೊಡೆದರು!
ಪೂರ್ವಯೋಜಿತ ಸಂಚಿನಂತೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸೋನು ಕೋಳಿ ಮಾಂಸ ಹಾಗೂ ಮದ್ಯ ತೆಗೆದುಕೊಂಡು ಸಾಕುತಾಯಿಯ ಮನೆಗೆ ಹೋಗಿದ್ದಳು. ಬಳಿಕ ವಿಜಯಮ್ಮ ಅವರಿಗೆ ಕಂಠಪೂರ್ತಿ ಕುಡಿಸಿದ್ದ ಆಕೆ, ತಾನೇ ಅಡುಗೆ ತಯಾರಿಸಿ ಊಟ ಮಾಡಿಸಿದ್ದಳು. ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆಯೇ ಗೆಳೆಯ ಕುಮಾರ್‌ಗೆ

ಮನೆಗೆ ಬರುವಂತೆ ಸಂದೇಶ ಕಳುಹಿಸಿದ್ದಳು.
ಆತ ಬರುತ್ತಿದ್ದಂತೆಯೇ ಸುತ್ತಿಗೆ ಹಾಗೂ ಮರದ ತುಂಡಿನಿಂದ ತಲೆಗೆ ಹೊಡೆದು ಆಭರಣಗಳೊಂದಿಗೆ ಪರಾರಿಯಾಗಿದ್ದರು. ಸಂಜೆ 7 ಗಂಟೆ ಸುಮಾರಿಗೆ ವಿಜಯಮ್ಮ ಸ್ನೇಹಿತೆ ಕೊರಟಗೆರೆಯ ಲಕ್ಷ್ಮಿ ಮನೆಗೆ ಬಂದಿದ್ದರು. ನಡುಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಟಿ.ವಿ ಕೂಡ ಚಾಲೂ ಇತ್ತು. ಅನುಮಾನದಿಂದ ಅವರು ಅಡುಗೆ ಕೋಣೆಗೆ ಹೋದಾಗ, ವಿಜಯಮ್ಮ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಕೂಡಲೇ ಅವರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದರು. ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ಕೊಟ್ಟಿದ್ದರು. ‌

ನಿದ್ರೆಯಲ್ಲಿದ್ದಾಗಲೇ ಬಂಧನ!

ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮನೆ ಎದುರಿನ ಕಟ್ಟಡದ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದರು. ಆಗ ಸೋನು ಬಂದ ಅರ್ಧ ತಾಸಿನ ನಂತರ ಕುಮಾರ್ ಸಹ ಮನೆಗೆ ಹೋಗಿರುವುದು ಗೊತ್ತಾಯಿತು.

ರಾತ್ರಿ 1.30ರ ಸುಮಾರಿಗೆ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ತೆರಳಿದ ಪೊಲೀಸರು, ನಿದ್ರೆಗೆ ಜಾರಿದ್ದ ಸೋನುಳನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಜಿಂಕೆಪಾರ್ಕ್ ಬಳಿ ಇದ್ದ ಕುಮಾರ್‌ನನ್ನು ಬೆಳಗಿನ ಜಾವ ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.