ADVERTISEMENT

ವಿದ್ಯಾರ್ಥಿನಿಯರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:53 IST
Last Updated 19 ಅಕ್ಟೋಬರ್ 2014, 19:53 IST

ಬೆಂಗಳೂರು: ಪುಲಿಕೇಶಿನಗರ ಸಮೀಪದ ಮಾಸ್ಕ್‌ ರಸ್ತೆಯಲ್ಲಿ ಶನಿವಾರ ಇಬ್ಬರು ಬಿಬಿಎಂ ವಿದ್ಯಾರ್ಥಿನಿಯರು ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಡುಗೊಂಡನಹಳ್ಳಿ ಬಳಿಯ ಕುಶಾಲನಗರ ನಿವಾಸಿ ಶಾಜಿಯಾ ಬೇಗಂ (18) ಮತ್ತು ದೇವರಜೀವನಹಳ್ಳಿಯ ರಖಿಯಾ ಬೇಗಂ (18) ಆತ್ಮಹತ್ಯೆ ಮಾಡಿಕೊಂಡವರು. ಇಬ್ಬರೂ ನಾಗವಾರ ಮುಖ್ಯರಸ್ತೆಯಲ್ಲಿರುವ ಅಲ್‌–ಮೈಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು.

ಕಾಲೇಜಿಗೆ ಹೋಗುವುದಾಗಿ ಪೋಷಕರ ಬಳಿ ಹೇಳಿ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದ ವಿದ್ಯಾರ್ಥಿನಿಯರು, ತರಗತಿಗಳಿಗೆ ಹಾಜರಾಗದೆ 11 ಗಂಟೆ ಸುಮಾರಿಗೆ ಮಾಸ್ಕ್‌ ರಸ್ತೆಗೆ ಬಂದಿದ್ದರು. ಅಲ್ಲಿ ನಿದ್ರೆ ಮಾತ್ರೆಗಳನ್ನು ನುಂಗಿ ಅಸ್ವಸ್ಥಗೊಂಡ ಅವರು, ರಸ್ತೆ ಬದಿ ವಾಂತಿ ಮಾಡುತ್ತಿದ್ದರು. ಕೂಡಲೇ ಸ್ಥಳೀಯರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಬಳಿಕ ಇಬ್ಬರನ್ನೂ ದೇವರಜೀವನಹಳ್ಳಿಯ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಿದರು.

ಆದರೆ, ಚಿಕಿತ್ಸೆಗೆ ಸ್ಪಂದಿಸದ ಶಾಜಿಯಾ, 12.30ರ ಸುಮಾರಿಗೆ ಕೊನೆಯುಸಿರೆಳೆದಳು. ನಂತರ ರಖಿಯಾಳನ್ನು ಅಂಬೇಡ್ಕರ್‌ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ರಾತ್ರಿ 11 ಗಂಟೆಗೆ ಆಕೆ ಕೂಡ ಸಾವನ್ನಪ್ಪಿದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಜಿಯಾಳ ತಂದೆ ಅಬ್ದುಲ್ ಅವರು ತರಕಾರಿ ವ್ಯಾಪಾರ ಮಾಡುತ್ತಾರೆ. ರಖಿಯಾ ತಂದೆ ಬಾಷಾ ಜಾನ್ ಮಾಂಸದ ಅಂಗಡಿ ಇಟ್ಟುಕೊಂಡಿದ್ದಾರೆ. ‘ಕೆಲ ದಿನಗಳಿಂದ ಮಕ್ಕಳು ಖಿನ್ನತೆಗೆ ಒಳಗಾಗಿದ್ದರು. ಆದರೆ, ಯಾವ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿ­ಕೊಂಡಿದ್ದಾರೆ ತಿಳಿಯುತ್ತಿಲ್ಲ’ ಎಂದು ಪುಲಿಕೇಶಿನಗರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.