ADVERTISEMENT

ವಿದ್ಯಾರ್ಥಿನಿ ಜಡೆ ಎಳೆದ ಪುಂಡರ ಸೆರೆ

ಪುಂಡಾಟಿಕೆ ನಡೆಸಿದ ಅರ್ಧ ತಾಸಿನಲ್ಲೇ ಪೊಲೀಸ್ ಬಲೆಗೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 19:50 IST
Last Updated 21 ಮಾರ್ಚ್ 2017, 19:50 IST
ಬೆಂಗಳೂರು: ವಿದ್ಯಾರ್ಥಿನಿಯ ಜಡೆ ಎಳೆದು ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ಪುಂಡರನ್ನು ಕೃತ್ಯ ನಡೆದ ಅರ್ಧ ತಾಸಿನಲ್ಲೇ ಹಿಡಿಯುವಲ್ಲಿ ಮಾರತ್ತಹಳ್ಳಿ ಠಾಣೆ ಗಸ್ತು ಪೊಲೀಸರು ಯಶಸ್ವಿಯಾಗಿದ್ದಾರೆ. 
 
ಮಾರತ್ತಹಳ್ಳಿಯ ಲೋಕೇಶ್ (21) ಹಾಗೂ ಕಿರಣ್ (23) ಎಂಬುವರನ್ನು ಬಂಧಿಸಲಾಗಿದೆ. ಭಾನುವಾರ ರಾತ್ರಿ ಬೈಕ್‌ನಲ್ಲಿ ಪಣತ್ತೂರು ಜಂಕ್ಷನ್‌ಗೆ ಬಂದಿದ್ದ ಇವರಿಬ್ಬರು, ಜಾರ್ಖಂಡ್‌ನ 22 ವರ್ಷದ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ್ದರು.
 
ಸಂತ್ರಸ್ತೆಯು ಬನ್ನೇರುಘಟ್ಟ ರಸ್ತೆಯ ಹಾಸ್ಟೆಲ್‌ನಲ್ಲಿ ನೆಲೆಸಿದ್ದಾರೆ. ಭಾನುವಾರ ರಾತ್ರಿ ಅವರು ಪಣತ್ತೂರು ರಸ್ತೆಯಲ್ಲಿನ ಗೆಳತಿಯರ ಮನೆಗೆ ಬಂದಿದ್ದರು.
ಮೂವರು ಸ್ನೇಹಿತೆಯರು ಹತ್ತಿರದ ಹೋಟೆಲ್‌ನಲ್ಲಿ ಊಟ ಮಾಡಿ,  ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದರು. ಆಗ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಆರೋಪಿಗಳು, ವಿದ್ಯಾರ್ಥಿನಿಯ ಕೂದಲು ಹಿಡಿದು ಎಳೆದಾಡಿದ್ದರು.  ಈ ದಾಳಿಯಿಂದ  ಹೆದರಿ ಅವರು ಚೀರಿಕೊಳ್ಳುತ್ತಿದ್ದಂತೆಯೇ ಬೆನ್ನಿಗೆ ಹೊಡೆದು ಹೋಗಿದ್ದರು.
 
ತಕ್ಷಣ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆರೋಪಿಗಳನ್ನು ಬೈಕ್‌ಗಳಲ್ಲಿ ಹಿಂಬಾಲಿಸಿದ್ದಾರೆ. ಇದೇ ಸಮಯಕ್ಕೆ ಕಾನ್‌ಸ್ಟೆಬಲ್ ಬೀರಲಿಂಗಪ್ಪ ಹಾಗೂ ಉಸ್ಮಾನ್ ಅವರು ಗಸ್ತು ತಿರುಗುತ್ತ ಆ ರಸ್ತೆಗೆ ಹೋಗಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದ ಅವರು, ಸುತ್ತಮುತ್ತಲ ರಸ್ತೆಗಳಲ್ಲಿ ಶೋಧ ನಡೆಸಿ ಅವರಿಬ್ಬರನ್ನೂ ಹಿಡಿದು ಠಾಣೆಗೆ ಕರೆದೊಯ್ದಿದ್ದಾರೆ.
 
ಸಂತ್ರಸ್ತೆಯು ಆರೋಪಿಗಳ ಗುರುತು ಪತ್ತೆ ಮಾಡಿದ್ದಾಳೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಲೋಕೇಶ್ ಕಾರು ಚಾಲಕನಾಗಿದ್ದು, ಕಿರಣ್ ಖಾಸಗಿ ಕಂಪೆನಿಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 
₹ 2 ಸಾವಿರ ಬಹುಮಾನ: ಬೀರಲಿಂಗಪ್ಪ ಹಾಗೂ ಉಸ್ಮಾನ್ ಅವರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್, ಅವರಿಗೆ ತಲಾ ₹ 2 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
 
ಒಳ ಉಡುಪು ಕದ್ದವನ ಪತ್ತೆಗೆ 3 ತಂಡ!
ಬೆಂಗಳೂರು:
ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ  ಹಾಸ್ಟೆಲ್‌ಗೆ ನುಗ್ಗಿ ಒಳ ಉಡುಪುಗಳನ್ನು ಕದ್ದೊಯ್ಯವ ಅನಾಮಿಕನ ಪತ್ತೆಗೆ ಕೇಂದ್ರ ವಿಭಾಗದ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದಾರೆ.

‘ಹಾಸ್ಟೆಲ್‌ನ ಸಿ.ಸಿ ಟಿ.ವಿ ಕ್ಯಾಮೆರಾ ವಶಕ್ಕೆ ಪಡೆದಿದ್ದೇವೆ. ಆ ಆಗಂತುಕನ ಚಹರೆಯನ್ನು ಫ್ಯಾಕ್ಸ್ ಮೂಲಕ ಎಲ್ಲ ಠಾಣೆಗಳಿಗೂ ರವಾನಿಸಿದ್ದೇವೆ. ಆತನನ್ನೇ ಹೋಲುವ ನಾಲ್ಕೈದು ಮಂದಿಯನ್ನು ಮಂಗಳವಾರ ವಿಚಾರಣೆ ನಡೆಸಿದ್ದೇವೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗೆ ಮಹಿಳಾ ಸಿಬ್ಬಂದಿಯನ್ನೂ ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಡಿಸಿಪಿಗೆ ದೂರು: ‘ಮೂರ್ನಾಲ್ಕು ತಿಂಗಳಿಗೊಮ್ಮೆ ಹಾಸ್ಟೆಲ್‌ಗೆ ನುಗ್ಗಿ ಅಸಭ್ಯ ವರ್ತನೆ ತೋರುವ ಆ ವ್ಯಕ್ತಿಯನ್ನು ಶೀಘ್ರವೇ ಬಂಧಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಆಯೋಗವು  ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಅವರಿಗೆ ದೂರು ನೀಡಿದೆ.

‘ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಆತನ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡಬೇಕು’ ಎಂದು ಆಯೋಗ ಕೋರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.