ADVERTISEMENT

ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:50 IST
Last Updated 12 ಡಿಸೆಂಬರ್ 2017, 19:50 IST
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ   

ಬೆಂಗಳೂರು: ಗಾಳಿಪಟ ಹಾರಿಸುತ್ತಿದ್ದ ವೇಳೆ ಮನೆ ಚಾವಣಿಯ ತಗಡಿನ ಶೀಟ್ ತುಳಿದಾಗ ವಿದ್ಯುತ್ ಪ್ರವಹಿಸಿ ಬಾಲಕ ಮಾದಪ್ಪ (9) ಮೃತಪಟ್ಟಿದ್ದಾನೆ.

ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯದಲ್ಲಿ ಈ ದುರಂತ ಸಂಭವಿಸಿದೆ. ಮನೆ ಸಮೀಪದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಆತ, ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಗೆಳೆಯರ ಜತೆ ಗಾಳಿಪಟ ಹಾರಿಸುತ್ತಿದ್ದ. ಆಗ ಅದರ ಸೂತ್ರವು ಮರಕ್ಕೆ ಸಿಕ್ಕಿಕೊಂಡಿತು.

ಸೂತ್ರ ಬಿಡಿಸುವ ಸಲುವಾಗಿ ಚಾವಣಿ ಹತ್ತಿದ್ದ ಆತ, ಮುಂದೆ ಹಾಕಲಾಗಿದ್ದ ತಗಡಿನ ಶೀಟ್ ತುಳಿದಿದ್ದ. ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೈರ್ ತುಂಡಾಗಿ ಆ ತಗಡಿಗೆ ತಾಗಿಕೊಂಡಿತ್ತು. ಇದರಿಂದಾಗಿ ಮಾದಪ್ಪನಿಗೆ ವಿದ್ಯುತ್ ಪ್ರವಹಿಸಿತು. ಕೂಡಲೇ ಆತನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ 1.50ಕ್ಕೆ ಕೊನೆಯುಸಿರೆಳೆದ ಎಂದು ಶ್ರೀರಾಂಪುರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಾದಪ್ಪನ ತಂದೆ ಶಿವಮಾದೇಶ್ ಅವರು ರಾಜಾಜಿನಗರದ ಚೈತನ್ಯ ಶಾಲೆಯ ವಾಹನ ಚಾಲಕರಾಗಿದ್ದಾರೆ. ತಾಯಿ ಮನೆಗೆಲಸಕ್ಕೆ ಹೋಗುತ್ತಾರೆ. ಮೊದಲು ಯಲಹಂಕದಲ್ಲಿ ನೆಲೆಸಿದ್ದ ಈ ಕುಟುಂಬ, ಮೂರು ತಿಂಗಳ ಹಿಂದಷ್ಟೇ ಇಲ್ಲಿಗೆ ವಾಸ್ತವ್ಯ ಬದಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.