ADVERTISEMENT

ವಿದ್ಯುತ್ ಮಾರ್ಗ ಭೂಸ್ವಾಧೀನ ಡಿ.ಸಿ.ಗೆ ದರ ನಿಗದಿ ಅಧಿಕಾರ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:51 IST
Last Updated 19 ಜುಲೈ 2017, 19:51 IST

ಬೆಂಗಳೂರು: ‘ವಿದ್ಯುತ್ ಮಾರ್ಗ ಭೂಸ್ವಾಧೀನ ಸಂಬಂಧ ಮಾರ್ಗಸೂಚಿ ದರ ನಿಗದಿ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ’ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

‘ಜಿಲ್ಲಾಧಿಕಾರಿಗಳು ನೇರವಾಗಿ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಮಧ್ಯೆ, ಅಧಿಕಾರಿಗಳಿಗೆ ಪೊಲೀಸ್ ನೆರವು ನೀಡಲು ಹೈಕೋರ್ಟ್ ನಿರ್ದೇಶನ ನೀಡಿದೆ. ರೈತರ ವಿರುದ್ಧ ಪೊಲೀಸ್ ಬಲಪ್ರಯೋಗ ಸೂಕ್ತವಲ್ಲ ಎಂದು ನ್ಯಾಯಾಲಯಕ್ಕೂ ಮನವರಿಕೆ ಮಾಡಿಕೊಡುತ್ತಿದ್ದೇವೆ’ ಎಂದು   ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ತಿಳಿಸಿದರು.

‘ಪವರ್ ಗ್ರಿಡ್ ಕಾರ್ಪೊರೇಷನ್‌ನ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತಿಲ್ಲ ಎಂದು ಕೇಂದ್ರ ಇಂಧನ ಸಚಿವರು ಆರೋಪಿಸಿದ್ದರು. ಹೀಗಾಗಿ ಇಂಧನ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಐದು ವಿದ್ಯುತ್ ಮಾರ್ಗಗಳ ಕಾಮಗಾರಿ ಪೂರ್ಣವಾಗಬೇಕು. ನಂತರ ‘ಒನ್ ನೇಷನ್ ಒನ್ ಪವರ್ ಲೈನ್’ ಸಾಧ್ಯ ಆಗುತ್ತದೆ ಮತ್ತು ಕೇಂದ್ರ ಗ್ರಿಡ್‌ ಮೂಲಕ ವಿದ್ಯುತ್ ಪಡೆಯಲು ಸುಲಭವಾಗುತ್ತದೆ’ ಎಂದರು.

ADVERTISEMENT

‘ರಾಮನಗರ ಜಿಲ್ಲೆಯಲ್ಲಿ 73 ಕಿ.ಮೀ, ತುಮಕೂರು ಜಿಲ್ಲೆಯಲ್ಲಿ 31 ಕಿ.ಮೀ, ಬೆಂಗಳೂರು ನಗರ ಜಿಲ್ಲೆ 36 ಕಿ.ಮೀ, ಚಿಕ್ಕಬಳ್ಳಾಪುರ 4 ಕಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 55 ಕಿ.ಮೀ ಉದ್ದಕ್ಕೆ ವಿದ್ಯುತ್ ಮಾರ್ಗ ಅಳವಡಿಸಬೇಕಾಗಿದೆ’ ಎಂದರು.

ಕೇಂದ್ರ ಗೃಹ ಸಚಿವರಿಗೆ ಸಂಸದೆ ಶೋಭಾ ಕರಂದ್ಲಾಜೆ ನೀಡಿದ ದೂರಿಗೆ ಪ್ರತಿಕ್ರಿಯಿಸಿದ ಅವರು, ‘ದೂರಿನಲ್ಲಿ ಸತ್ಯಾಂಶ ಇಲ್ಲ. ದೂರಿನಲ್ಲಿ ಪಟ್ಟಿ ಮಾಡಿರುವ ಹತ್ಯೆ  ಪ್ರಕರಣಗಳಲ್ಲಿ ಬಹುತೇಕ ವೈಯಕ್ತಿಕ ಕಾರಣಕ್ಕೆ ಆಗಿವೆ. ಬದುಕಿರುವವರನ್ನೂ ಸತ್ತಿದ್ದಾರೆ ಎಂದು ಅವರು ವರದಿ ಕೊಟ್ಟಿದ್ದಾರೆ. ಈ ಹತ್ಯೆ ಪ್ರಕರಣಗಳಿಗೂ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ನಾಲ್ಕು ವರ್ಷದಿಂದ ಸುಮ್ಮನಿದ್ದ ಬಿಜೆಪಿ, ಚುನಾವಣೆ ಕಾರಣಕ್ಕೆ ಈಗ ಈ ವಿಷಯ ಪ್ರಸ್ತಾಪಿಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.