ADVERTISEMENT

ವಿಬ್ಗಯೊರ್ ಶಾಲೆಗೆ ಕಳುಹಿಸಲು ಪೋಷಕರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 27 ಜುಲೈ 2014, 19:52 IST
Last Updated 27 ಜುಲೈ 2014, 19:52 IST

ಬೆಂಗಳೂರು: ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಎಲ್ಲ ಶಾಲೆಗಳಿಗೂ ಮಾರ್ಗ­ಸೂಚಿ­­ಗಳನ್ನು ರೂಪಿಸಿದ್ದರೂ, ಕೆಲ ಪೋಷಕರು ಮಕ್ಕಳನ್ನು ವಿಬ್ಗಯೊರ್ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಜುಲೈ 2ರಂದು ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದ ನಂತರ ಮಕ್ಕಳ ಸುರಕ್ಷತೆ ವಿಷಯದಲ್ಲಿ ವಿಬ್ಗಯೊರ್ ಶಾಲೆಯು ಸಾರ್ವಜ­ನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದೀಗ ಪೊಲೀಸ್ ಮತ್ತು ಶಿಕ್ಷಣ ಇಲಾಖೆಗಳು ವಿಬ್ಗಯೊರ್ ಶಾಲೆಗೆಂದೇ ವಿಶೇಷ ಮಾರ್ಗಸೂಚಿಗಳನ್ನು ರೂಪಿಸಿವೆ. ಅಲ್ಲದೆ, ಪೋಷಕರ 11 ಬೇಡಿಕೆಗಳಿಗೂ ಆಡಳಿತ ಮಂಡಳಿ ಒಪ್ಪಿಕೊಂಡಿದೆ. ಆದರೆ, ಬಾಲಕಿ ಮೇಲೆ ಅತ್ಯಾಚಾರ ನಡೆದಾಗ ಸಾಕ್ಷ್ಯನಾಶಪಡಿಸಿ ಪ್ರಕರಣವನ್ನು ಮುಚ್ಚಿಟ್ಟ ಸಿಬ್ಬಂದಿಯ ಕ್ರಮವು ಪೋಷಕರ ಆತಂಕವನ್ನು ಇನ್ನೂ ದೂರ ಮಾಡಿಲ್ಲ.

‘ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಾಗಿ ಒಪ್ಪಿಕೊಂಡಿ­ದ್ದರು. ಹೀಗಾಗಿ 5 ರಿಂದ 10ರವರೆಗಿನ ತರಗತಿ­ಗಳನ್ನು ಸೋಮವಾರದಿಂದ ಪುನರಾರಂಭಿ­ಸಲು ಆಡಳಿತ ಮಂಡಳಿ ನಿರ್ಧರಿಸಿತ್ತು. ಅದೇ ರೀತಿ ನರ್ಸರಿಯಿಂದ 5ನೆ ತರಗತಿವರೆಗಿನ ಮಕ್ಕಳನ್ನು ಬುಧವಾರದಿಂದ ಶಾಲೆಗೆ ಕಳುಹಿಸುವಂತೆ ಆಡಳಿತ ಮಂಡಳಿ ಸೂಚಿಸಿತ್ತು.

ಇದೀಗ ಪ್ರತ್ಯೇಕ ಫೇಸ್‌ಬುಕ್‌ ಖಾತೆ ತೆರೆದಿರುವ ವಿಬ್ಗಯೊರ್ ಶಾಲಾ ವಿದ್ಯಾರ್ಥಿಗಳ ಪೋಷಕರು, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂಬಂಧ ಅಭಿ­ಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಿ, ಭದ್ರತಾ ಸಿಬ್ಬಂದಿಯನ್ನು ಬದಲಾವಣೆ ಮಾಡುವುದಾಗಿ ಆಡ­ಳಿತ ಮಂಡಳಿ ಹೇಳಿದೆ. ಆದರೆ, ಅದೇ ಶಿಕ್ಷಕರಿರುವ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ’ ಎಂದು ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.

‘ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಶಿಕ್ಷಕ ಸೇರಿ ಐದು ಮಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಂತಹ ಘಟನೆಗಳು ಮುಂದು­ವರಿದರೆ ಮಕ್ಕಳ ಕತೆ ಏನು. ಹೀಗಾಗಿ ಅದೇ ಶಿಕ್ಷಕರಿ­ರುವ ಶಾಲೆಗೆ ಯಾವುದೇ ಕಾರಣಕ್ಕೂ ಮಗಳನ್ನು ಕಳುಹಿಸುವುದಿಲ್ಲ’ ಎಂದು ಮತ್ತೊಬ್ಬರು  ಹೇಳಿದ್ದಾರೆ.

‘ಶೈಕ್ಷಣಿಕ ವರ್ಷ ಆರಂಭವಾಗಿ ಕೇವಲ ಎರಡು ತಿಂಗಳಾಗಿದೆ. ಹೀಗಾಗಿ ಮಗಳನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ’ ಎಂದು ಕೆಲವರು ತಿಳಿಸಿದ್ದಾರೆ.

ಮತ್ತೊಂದು ವರ್ಗದ ಪೋಷಕರು, ಪ್ರಸಕ್ತ ಶೈಕ್ಷ­ಣಿಕ ವರ್ಷ ಪೂರ್ಣಗೊಳ್ಳುವವರೆಗೆ ಶಾಲೆ­ಯನ್ನು ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

‘ಈಗ ಶಾಲೆ ಬದಲಾಯಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಜತೆಗೆ ಆಡಳಿತ ಮಂಡಳಿ ಪ್ರವೇಶ ಶುಲ್ಕ ಹಿಂದಿರುಗಿಸುತ್ತದೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಮುಂದಿನ ವರ್ಷ ಬೇರೆ ಶಾಲೆಗೆ ಸೇರಿಸುತ್ತೇನೆ’ ಎಂದು ಪೋಷಕರೊಬ್ಬರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಪೋಷಕರಿಂದ ಪರಿಶೀಲನೆ: ಸುಮಾರು 150 ಪೋಷಕರು ಭಾನುವಾರ  ಶಾಲೆಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ವಲಯ ಶಿಕ್ಷಣಾಧಿಕಾರಿ (ಬಿಇಒ) ಎಸ್‌.ಎಂ.ರಮೇಶ್‌, ವಿಗ್ಬಯೊರ್‌ ಪ್ರೌಢಶಾಲೆಯ ನಿರ್ದೇಶಕರಾದ ಕವಿತಾ ಸಹಾಯ್‌ ಹಾಗೂ ಪೊಲೀಸ್‌ ಅಧಿಕಾರಿಗಳು ಪೋಷಕರ ಜತೆ ಇದ್ದರು. 

‘ಈವರೆಗೆ ಸುಮಾರು 100 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೋಮ­ವಾರದಿಂದ ಆ ಕ್ಯಾಮೆರಾಗಳು ಕಾರ್ಯಾರಂಭ ಮಾಡಲಿವೆ’ ಎಂದು ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.